ADVERTISEMENT

ಚಿಕ್ಕಬಳ್ಳಾಪುರ: ನಾಳೆಯಿಂದ ರಾಗಿ ಖರೀದಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:32 IST
Last Updated 15 ಫೆಬ್ರುವರಿ 2026, 5:32 IST
ವರದಹಳ್ಳಿಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಪ್ರಭು ಪರಿಶೀಲಿಸಿದರು 
ವರದಹಳ್ಳಿಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಪ್ರಭು ಪರಿಶೀಲಿಸಿದರು    

ಚಿಕ್ಕಬಳ್ಳಾಪುರ: ಬೆಂಬಲ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಜಿಲ್ಲೆಯ ರೈತರಿಂದ ಫೆ.16 ರಿಂದ ರಾಗಿ ಖರೀದಿ ಮಾಡಲಾಗುತ್ತಿದೆ. ರೈತರು ತಮ್ಮ ತಾಲ್ಲೂಕು ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದು ಎಂದು ಜಿಲ್ಲಾಧಿಕಾರಿ ಜಿ ಪ್ರಭು ಮನವಿ ಮಾಡಿದರು.

ವರದಹಳ್ಳಿಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ  ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ‌ಸಮ್ಮುಖದಲ್ಲಿ ಸೋಮವಾರ ವರದಹಳ್ಳಿಯ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಕನಿಷ್ಠ ಬೆಂಬಲ ಯೋಜನೆಯಡಿ ಜಿಲ್ಲೆಯಲ್ಲಿ 1,57,428 ಕ್ವಿಂಟಲ್ ರಾಗಿ ಮಾರಾಟ ಮಾಡಲು 7,392 ರೈತರು ನೋಂದಣಿ ಮಾಡಿಕೊಂಡಿದ್ದಾರೆ. 6 ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ADVERTISEMENT

ರಾಗಿ ಖರೀದಿಸಲು ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಸಮರ್ಪಕವಾಗಿ ಮಾಡಿಕೊಂಡಿದೆ. ರಾಗಿ ಖರೀದಿ ವೇಳೆ ಯಾವುದೇ ತಾಂತ್ರಿಕ ಅಡೆತಡೆಗಳು ಉದ್ಭವವಾಗದಂತೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸದರಿ ಕೇಂದ್ರಗಳಲ್ಲಿಯೇ ರೈತರ ಅನುಕೂಲಕ್ಕಾಗಿ ಈ ಬಾರಿ ಕ್ಯಾಂಟೀನ್ ವ್ಯವಸ್ಥೆ ವಿಶ್ರಾಂತಿಗೃಹ ವ್ಯವಸ್ಥೆ ಕಲ್ಪಿಸಿದ್ದು ಸೂಕ್ತ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. ತೂಕ ಮತ್ತು ಅಳತೆಗಾಗಿ ಮಾಪನ ಯಂತ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ರಾಗಿ ಖರೀದಿಗೆ ಅತ್ಯಗತ್ಯವಾಗಿ ಬೇಕಾಗಿರುವ ಗೋಣಿಚೀಲದ ದಾಸ್ತಾನು ಜಿಲ್ಲೆಯಲ್ಲಿ ಸಾಕಷ್ಟಿದೆ ಎಂದು ಮಾಹಿತಿ ನೀಡಿದರು.

ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಸಮಕ್ಷಮದಲ್ಲಿಯೇ ರಾಗಿಯನ್ನು ತೂಕ ಮಾಡಿ ಪಡೆಯಲಾಗುತ್ತದೆ. ಯಾವುದೇ ರೈತರಿಗೆ ತಮ್ಮ ರಾಗಿಯನ್ನು ಬೇರೆ ಕಡೆ ತೂಕ ಮಾಡಲು ಇಚ್ಛೆಪಟ್ಟರೆ ಅಂತಹವರ ಅನುಕೂಲಕ್ಕಾಗಿಯೇ ಜಿಲ್ಲೆಯಲ್ಲಿ ನೋಂದಾಯಿತವಾಗಿರುವ ಅಧಿಕೃತ 14 ವೇ ಬ್ರಿಡ್ಜ್ ಗಳನ್ನು ಈ ವರ್ಷ ಗುರುತಿಸಲಾಗಿದೆ. ಸದರಿ ವೇ ಬ್ರಿಡ್ಜ್ ಗಳಲ್ಲಿ ರಾಗಿ ತೂಕ ಮಾಡಿಸಿಕೊಂಡು ಖಾತ್ರಿ ಪಡೆಯಬಹುದು ಎಂದು ಹೇಳಿದರು.

ಈಗಾಗಲೇ ದಿನಾಂಕವಾರು ವೇಳಾಪಟ್ಟಿಯಂತೆ ರಾಗಿ ಖರೀದಿಸಲು ರೈತರಿಗೆ ಟೋಕನ್ ನೀಡಲಾಗಿದೆ. ರೈತರು ಆತಂಕಕ್ಕೆ ಒಳಗಾಗದೆ ಜಿಲ್ಲಾಡಳಿತ ತೆರೆದಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದು ಎಂದು ಮನವಿ ಮಾಡಿದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ನಾಗರಾಜ ಕೆಳಗಿನಮನಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ್, ಆಹಾರ ನಿರೀಕ್ಷಕ ರಾಮಕೃಷ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.