ADVERTISEMENT

ಚಿಕ್ಕಬಳ್ಳಾಪುರ | ಮಾ.31ರವರೆಗೆ ಜಿಲ್ಲೆಯಲ್ಲಿ ರಾಗಿ ಖರೀದಿ: ಡಾ. ಎಂ.ಸಿ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:15 IST
Last Updated 17 ಫೆಬ್ರುವರಿ 2026, 5:15 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರದಲ್ಲಿ ಗೋಣಿ ಚೀಲಕ್ಕೆ ರಾಗಿ ತುಂಬುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರಾಗಿ ಖರೀದಿಗೆ ಚಾಲನೆ ನೀಡಿದರು 
ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರದಲ್ಲಿ ಗೋಣಿ ಚೀಲಕ್ಕೆ ರಾಗಿ ತುಂಬುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರಾಗಿ ಖರೀದಿಗೆ ಚಾಲನೆ ನೀಡಿದರು     

ಚಿಕ್ಕಬಳ್ಳಾಪುರ: ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಲ್ ರಾಗಿಯನ್ನು ರೈತರಿಂದ ₹ 4,886ಕ್ಕೆ ಖರೀದಿಸಲಾಗುತ್ತಿದೆ. ಜಿಲ್ಲೆಯ ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಮನವಿ ಮಾಡಿದರು.

ತಾಲ್ಲೂಕಿನ ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರದಲ್ಲಿ ಸೋಮವಾರ ರಾಗಿ ಖರೀದಿಗೆ ಚಾಲನೆ ನೀಡಿ ಮಾತನಾಡಿದರು.

ರೈತರ ಬೆಳೆಗಳಿಗೆ ಉತ್ತಮ ಲಾಭ ತಂದುಕೊಡುವ ನಿಟ್ಟಿನಲ್ಲಿ ಬೆಂಬಲ ಬೆಲೆ ಯೋಜನೆ ಜಾರಿಗೊಳಿಸಲಾಗಿದೆ. ವಿವಿಧ ಬೆಳೆಗಳಿಗೆ ಸರ್ಕಾರ ನಿಗದಿಪಡಿಸಿರುವ ದರವು ಮಾರುಕಟ್ಟೆ ದರಕ್ಕಿಂತ ಹೆಚ್ಚಾಗಿದೆ. ರೈತರು ಸಹ ಬೆಂಬಲ ಬೆಲೆ ಯೋಜನೆಯಡಿ ರಾಗಿ,
ಮೆಕ್ಕೆಜೋಳ ಮಾರಾಟ ಮಾಡಲು ಆಸಕ್ತಿ ತೋರಿದ್ದಾರೆ. ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ಮಾ.31 ರವರೆಗೆ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದರು.

ADVERTISEMENT

ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮ ಸಂಪರ್ಕಿಸುವ ರಸ್ತೆಯು ಕಚ್ಚಾ ರಸ್ತೆಯಾಗಿದೆ. ಈ ಕೇಂದ್ರದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರಕ್ಕೆ ರೈತರು ಬಂದುಹೋಗಲು ಕಷ್ಟವಾಗುತ್ತಿದೆ. ಆದ್ದರಿಂದ ಈ ರಸ್ತೆಯನ್ನು ಪಕ್ಕಾ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಪರ್ಯಾಯ ರಸ್ತೆ ನಿರ್ಮಾಣಕ್ಕೂ ಸಹ ತ್ವರಿತವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯ 7,392 ರೈತರು 1,57,428 ಕ್ವಿಂಟಲ್ ರಾಗಿ ಮಾರಾಟ ಮಾಡಲು ರೈತರು
ಇಚ್ಛಿಸಿದ್ದಾರೆ. ಅದರಂತೆ 6 ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಖರೀದಿ ವೇಳೆ ಯಾವುದೇ ತಾಂತ್ರಿಕ ಅಡೆತಡೆಯಾಗದ ರೀತಿ ವ್ಯವಸ್ಥೆ ಮಾಡಲಾಗಿದೆ. ಖರೀದಿ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೇಂದ್ರಗಳಲ್ಲಿಯೇ ರೈತರ ಅನುಕೂಲಕ್ಕಾಗಿ ಈ ಬಾರಿ ಕ್ಯಾಂಟೀನ್ ವ್ಯವಸ್ಥೆ ಮತ್ತು ವಿಶ್ರಾಂತಿಗೃಹ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ ಎಂದರು.

ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಸಮಕ್ಷಮದಲ್ಲಿಯೇ ರಾಗಿಯನ್ನು ತೂಕ ಮಾಡಿ
ಪಡೆಯಲಾಗುತ್ತದೆ. ಯಾವುದೇ ರೈತರಿಗೆ ತಮ್ಮ ರಾಗಿಯನ್ನು ಬೇರೆ ಕಡೆ ತೂಕ ಮಾಡಲು ಇಚ್ಛೆಪಟ್ಟರೆ ಅಂತಹವರ ಅನುಕೂಲಕ್ಕಾಗಿಯೇ ಜಿಲ್ಲೆಯಲ್ಲಿ ನೋಂದಾಯಿತವಾಗಿರುವ ಅಧಿಕೃತ 14 ವೇ ಬ್ರಿಡ್ಜ್ ಗಳನ್ನು ಗುರುತಿಸಲಾಗಿದೆ. ಈ ವೇ ಬ್ರಿಡ್ಜ್ ಗಳಲ್ಲಿ ರಾಗಿಯನ್ನು ತೂಕ ಮಾಡಿಸಿಕೊಂಡು ಖಾತ್ರಿ ಪಡೆಯಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ. ಪ್ರಭು, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್,
ತಹಶೀಲ್ದಾರ್ ರಶ್ಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆಳಗಿನಮನಿ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ್ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.