
ಚಿಕ್ಕಬಳ್ಳಾಪುರ: ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಿಲ್ಲಾಡಳಿತ ಅಭಿಯಾನದ ರೂಪದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾತ್ರ ತಗ್ಗುತ್ತಿಲ್ಲ. ದಂಡದ ಅಸ್ತ್ರಕ್ಕೂ ವ್ಯಾಪಾರಿಗಳು ಜಗ್ಗುತ್ತಿಲ್ಲ. ನಾಗರಿಕರೂ ಜಾಗೃತಿ ಹೊಂದುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಗೆ ಜಿಲ್ಲಾಡಳಿತ ಮತ್ತೊಂದು ಹೆಜ್ಜೆ ಇಟ್ಟಿದೆ. ಮೊದಲ ಹಂತದಲ್ಲಿ ಜಿಲ್ಲೆಯ ಆಯ್ದ 30 ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಪುಡಿ ಮಾಡುವ ಘಟಕಗಳನ್ನು ತೆರೆಯಲು ಮತ್ತು ಈ ಪ್ಲಾಸ್ಟಿಕ್ ಪುಡಿಯನ್ನು ಸ್ಥಳೀಯವಾಗಿ ನಿರ್ಮಾಣವಾಗುವ ರಸ್ತೆಗಳಿಗೆ ಬಳಸಲು ಚಿಂತಿಸಿದೆ.
ಈ ಚಿಂತನೆ ಯಶಸ್ವಿಯಾದರೆ ಮತ್ತಷ್ಟು ಪಂಚಾಯಿತಿಗಳು ಹಂತ ಹಂತವಾಗಿ ಪ್ಲಾಸ್ಟಿಕ್ ಪುಡಿ ಘಟಕಗಳನ್ನು ಅಳವಡಿಸಿಕೊಳ್ಳಲಿವೆ.
ಡಾಂಬರ್ ರಸ್ತೆಗಳ ನಿರ್ಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸುವುದರಿಂದ ರಸ್ತೆಯ ಬಾಳಿಕೆ ಹೆಚ್ಚುತ್ತದೆ. ಪ್ಲಾಸ್ಟಿಕ್ ಮಾಲಿನ್ಯ ಕಡಿಮೆಯಾಗುತ್ತದೆ. 100 ಕೆ.ಜಿ ಡಾಂಬರ್‌ಗೆ ಶೇ 8ರಿಂದ 10ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಮಿಶ್ರಣ ಮಾಡಲಾಗುತ್ತದೆ.
ಸರ್ಕಾರವು ಈ ವಿಚಾರವಾಗಿ ಹಿಂದೆ ಸುತ್ತೋಲೆಯನ್ನೂ ಹೊರಡಿಸಿದೆ. ಆದರೆ ಆ ಸುತ್ತೋಲೆ ಅನುಷ್ಠಾನ ಮಾತ್ರ ಸಮರ್ಪಕವಾಗಿ ಆಗಿಲ್ಲ. ಈಗ ಈ ಹಳೇ ಸುತ್ತೋಲೆಯಡಿ ಹೊಸ ಆಲೋಚನೆಯನ್ನು ಜಿಲ್ಲಾಡಳಿತ ಮಾಡುತ್ತಿದೆ.
‘ಪ್ರತಿ ತಾಲ್ಲೂಕಿನ ನಾಲ್ಕರಿಂದ ಐದು ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಆ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಪುಡಿ ಮಾಡುವ ಘಟಕ ಆರಂಭಿಸಲಾಗುವುದು. ಅಲ್ಲಿನ ಪಿಡಿಒ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಆಯಾ ವ್ಯಾಪ್ತಿಯ ಗುತ್ತಿಗೆದಾರರ ಜೊತೆ ಸಭೆ ಸಹ ನಡೆಸಲಾಗುತ್ತದೆ. ಆಯಾ ವ್ಯಾಪ್ತಿಯಲ್ಲಿ ನಡೆಯುವ ರಸ್ತೆ ಕಾಮಗಾರಿಗಳಿಗೆ ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಖರೀದಿಸುವಂತೆ ನಿರ್ದೇಶನ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ಲಾಸ್ಟಿಕ್ ಅನ್ನು ಡಾಂಬರ್ ಜೊತೆ ಬಳಸಬೇಕು ಎಂದು ಸರ್ಕಾರ ಆದೇಶಿಸಿದೆ. ಡಾಂಬರ್ ಕಾಯಿಸಿದಾಗ ಅದರ ಜೊತೆ ಪ್ಲಾಸ್ಟಿಕ್ ಮಿಶ್ರಣ ಮಾಡಬಹುದು. ಪ್ರತಿ ಪಂಚಾಯಿತಿಗೆ ತ್ಯಾಜ್ಯ ಸಂಗ್ರಹಿಸಲು ವಾಹನ ಮತ್ತು ಅನುದಾನ ನೀಡಿದ್ದೇವೆ’ ಎಂದರು.
ಪಂಚಾಯಿತಿಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಅನ್ನು ಅಲ್ಲಿಯೇ ವಿಲೇವಾರಿಗೆ ಕ್ರಮವಹಿಸಲಾಗುವುದು. ಇದರಿಂದ ಪಂಚಾಯಿತಿಗೂ ಆದಾಯ ಬರುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ತಳಹಂತದಲ್ಲಿಯೇ ನಿರ್ಮೂಲನೆ ಆಗುತ್ತದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ನಾವು ಮೊದಲ ಹಂತದಲ್ಲಿ 30 ಪಿಡಿಒಗಳನ್ನು ಆಯ್ಕೆ ಮಾಡಿಕೊಂಡು ಸಭೆ ನಡೆಸುತ್ತೇವೆ ಎಂದು ಹೇಳಿದರು.
‘ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಟನ್ ಪ್ಲಾಸ್ಟಿಕ್ ಉತ್ಪಾದನೆ ಆಗುತ್ತದೆ. ಪುಡಿ ಮಾಡಿ ಬಳಸಿದರೆ ಎಷ್ಟು ಟನ್ ಅಗತ್ಯವಿದೆ ಎನ್ನುವ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತದೆ. ಇದಕ್ಕೆ ಸಿದ್ಧತೆ, ತರಬೇತಿ ಮತ್ತು ಸಮನ್ವಯ ಅತಿ ಮುಖ್ಯ. ಈ ದಿಕ್ಕಿನಲ್ಲಿ ಜಿಲ್ಲಾಡಳಿತ ಚಿಂತನೆ ನಡೆಸಿದೆ’ ಎಂದು ಹೇಳಿದರು.
ವರ್ಷಕ್ಕೆ 6 ಲಕ್ಷ ಜನರು ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ ಎನ್ನುತ್ತವೆ ವರದಿಗಳು. ಭವಿಷ್ಯದಲ್ಲಿ ಕ್ಯಾನ್ಸರ್ ಹೆಚ್ಚುತ್ತದೆ. ಮಾರಕ ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಗೆ ಪ್ಲಾಸ್ಟಿಕ್ ಬಳಕೆ ಮುಖ್ಯ ಕಾರಣವಾಗಿದೆ. ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಬಿಡುಗಡೆ ಆಗುವ ರಾಸಾಯನಿಕಗಳು ಜಲಮೂಲಗಳನ್ನು ಕಲುಷಿತಗೊಳಿಸುತ್ತಿವೆ. ಈ ಎಲ್ಲ ದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆತೆ ತಡೆ ಅಗತ್ಯ ಎಂದು ಹೇಳಿದರು.
ಪ್ಲಾಸ್ಟಿಕ್ ಮುಕ್ತಕ್ಕೆ ಹಿನ್ನಡೆ: 2023ರ ನವೆಂಬರ್ 1ರಂದು ಚಿಕ್ಕಬಳ್ಳಾಪುರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಂತರ ‘ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಜಿಲ್ಲಾ ಅಭಿಯಾನ’ಕ್ಕೆ ಚಾಲನೆ ನೀಡಿದ್ದರು. ಇದು ಜಿಲ್ಲೆಯ ಮಟ್ಟಿಗೆ ಮಹತ್ವದ ಯೋಜನೆಯಾಗಿತ್ತು.
ಆದರೆ ಪ್ಲಾಸ್ಟಿಕ್ ವಿರುದ್ಧದ ಸಮರ ಕೇವಲ ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗಿತ್ತು. ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಳ್ಳ ಹಿಡಿದಿತ್ತು. ಜನರ ಸಹಕಾರವೂ ದೊರೆಯಲಿಲ್ಲ. ಈಗ ಮತ್ತೊಂದು ಹೆಜ್ಜೆಯಾಗಿ ಜಿಲ್ಲಾಡಳಿತ ಪ್ಲಾಸ್ಟಿಕ್ ಪುಡಿ ಘಟಕಗಳ ನಿರ್ಮಾಣಕ್ಕೆ ಮುಂದಾಗಿದೆ.
ಪರವಾನಗಿ ರದ್ದು; ಪರಿಶೀಲನೆಗೆ ತಂಡ
ಪ್ಲಾಸ್ಟಿಕ್ ಬಳಕೆಯ ಬಗ್ಗೆ ಪರಿಶೀಲನೆಗೆ ಪಂಚಾಯಿತಿ ಹಂತದಿಂದಲೇ ತಂಡಗಳನ್ನು ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು. ಮೊದಲ ಬಾರಿ ಆದೇಶ ಉಲ್ಲಂಘಿಸಿದರೆ ₹ 1 ಸಾವಿರ ದಂಡ ಎರಡನೇ ಬಾರಿಗೆ ₹ 5 ಸಾವಿರ ಮತ್ತು ಮೂರನೇ ಬಾರಿ ಉಲ್ಲಂಘನೆಯಾದರೆ ₹ 10 ಸಾವಿರ ದಂಡದ ಜೊತೆಗೆ ವ್ಯಾಪಾರ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಇವೆ. ಈ ಸಂಘಗಳು ಕೈಚೀಲ ಉತ್ಪಾದನೆಯನ್ನು ಉತ್ತೇಜಿಸಲಾಗುವುದು. ಹಂತ ಹಂತವಾಗಿ ಈ ಯೋಜನೆಗಳು ಜಾರಿಯಾಗುತ್ತವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.