ಚಿಂತಾಮಣಿ ತಾಲ್ಲೂಕಿನ ಅನುಪ್ಪಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೊರ ನೋಟ
ಚಿಂತಾಮಣಿ: ತಾಲ್ಲೂಕಿನ ಮಿಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಅನುಪ್ಪಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಶಾಲೆಯಾಗಿದೆ. ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆಯುವಂತೆ ಈ ಶಾಲೆ ರೂಪುಗೊಂಡಿದೆ. ಇಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ 25 ಮಕ್ಕಳು ಕಲಿಯುತ್ತಿದ್ದಾರೆ.
ಶಾಲೆಯಲ್ಲಿ ಉದ್ಯಾನ ರೂಪಿಸಿದ್ದು ಸ್ವಚ್ಛತೆಯನ್ನು ಕಾಪಾಡಲಾಗಿದೆ. ಉತ್ತಮ ತರಗತಿಯ ಕೊಠಡಿಗಳು, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಅಕ್ಷರ ದಾಸೋಹದ ಅಡುಗೆ ಕೋಣೆ, ಕುಡಿಯುವ ನೀರು ಮತ್ತಿತರ ಸೌಲಭ್ಯಗಳಿವೆ. ಶಾಲೆಗೆ ಸುತ್ತಲೂ ಆವರಣವಿದೆ. ಆವರಣದ ಒಳಗಡೆ ಅನೇಕ ಗಿಡಗಳನ್ನು ಬೆಳೆಸಲಾಗಿದೆ.
ಈ ಹಿಂದೆ ಮಕ್ಕಳ ಕೊರತೆಯಿಂದ ಈ ಶಾಲೆಯನ್ನು ಮುಚ್ಚಲಾಗಿತ್ತು. 1997ರಲ್ಲಿ ಮುಚ್ಚಿದ್ದ ಶಾಲೆಯನ್ನು ಮತ್ತೆ ಪ್ರಾರಂಭಿಸಲು ಗ್ರಾಮಸ್ಥರು ಒತ್ತಡ ತಂದಿದ್ದರು. ಮುಖ್ಯ ಶಿಕ್ಷಕ ಶ್ರೀನಿವಾಸರೆಡ್ಡಿ 1997ರಲ್ಲಿ ಈ ಶಾಲೆಗೆ ನೇಮಕಗೊಂಡಿದ್ದರು. ಅಂದಿನಿಂದ ಇಂದಿನವರೆಗೂ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರ್ಷ ವರ್ಷವೂ ದಾಖಲಾತಿ ಹೆಚ್ಚಾಗಿದೆ. ಖಾಸಗಿ ಶಾಲೆಗಳ ಒಡ್ಡುತ್ತಿರುವ ತೀವ್ರ ಸ್ಪರ್ಧೆಯಲ್ಲೂ ಈ ಸರ್ಕಾರಿ ಶಾಲೆ ಅಸ್ತಿತ್ವ ಉಳಿಸಿಕೊಂಡಿದೆ.
ಮಕ್ಕಳಿಗೆ ಪ್ರತಿನಿತ್ಯ ಪರಿಸರ ಮತ್ತು ನೀರಿನ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಮಕ್ಕಳಿಗೆ ಶಾಲಾ ಹಂತದಲ್ಲಿ ಪರಿಸರ ಮತ್ತು ನೀರಿನ ಮಹತ್ವದ ಅರಿವು ಮೂಡಿಸಿದರೆ ಅದು ಅವರಲ್ಲಿ ಶಾಶ್ವತವಾಗಿರುತ್ತದೆ ಎನ್ನುತ್ತಾರೆ ಶಿಕ್ಷಕ ಜಯರಾಮರೆಡ್ಡಿ.
ಪ್ರತಿವರ್ಷ ವನಮೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ವಿಜೇತರಿಗೆ ಗ್ರಾಮಸ್ಥರು ಬಹುಮಾನದ ವ್ಯವಸ್ಥೆ ಮಾಡುತ್ತಾರೆ.
ಈ ಗ್ರಾಮದಲ್ಲಿ ಶಿಕ್ಷಕರು, ಶಾಲೆ, ಮತ್ತು ಗ್ರಾಮಸ್ಥರಿಗೂ ಉತ್ತಮ ಬಾಂಧವ್ಯವಿದೆ. ಗ್ರಾಮಸ್ಥರಲ್ಲಿ ನಮ್ಮೂರ ಶಾಲೆ ಎನ್ನುವ ಅಭಿಮಾನವಿದೆ. ಶಾಲೆಯಲ್ಲಿ ಶಿಕ್ಷಕರು ಪಾಠ ಪ್ರವಚನಗಳ ಜತೆಗೆ ರಸಪ್ರಶ್ನೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಕ್ತಿಗೀತೆಗಳ ಗಾಯನ ಮುಂತಾದ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ. ಚಟುವಟಿಕೆ ಆಧಾರಿತ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಯುತ್ತವೆ. ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಕ್ರೀಡಾಕೂಟದಲ್ಲಿ ಶಾಲೆಯ ಮಕ್ಕಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ನಮ್ಮೂರ ಸರ್ಕಾರಿ ಶಾಲೆ ಉತ್ತಮವಾಗಿದೆ. ನುರಿತ ಶಿಕ್ಷಕರಿಂದ ಮಕ್ಕಳಿಗೆ ಶಿಸ್ತುಬದ್ದವಾಗಿ ಪಾಠಪ್ರವಚನ, ನಡವಳಿಕೆ ಕಲಿಸಲಾಗುತ್ತಿದೆ. ಮಕ್ಕಳೂ ಆಸಕ್ತಿಯಿಂದ ಶಾಲೆಗೆ ಹೋಗುತ್ತಾರೆ.ಶಂಕರಪ್ಪ, ಎಸ್‌ಡಿಎಂಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.