ADVERTISEMENT

ವಾರಸುದಾರರಿಲ್ಲದ ಕಾರಿಗೆ ಕಾನ್‌ಸ್ಟೆಬಲ್ ಕಳ್ಳಾಟ!

ಅನುಮಾನಾಸ್ಪದ ರೀತಿ ಪತ್ತೆಯಾದ ಕಾರನ್ನು ತೆಗೆದುಕೊಂಡು ಹೋಗಿ ಮನೆ ಬಳಿ ನಿಲ್ಲಿಸಿಕೊಂಡು ಮತ್ತೆ ರಸ್ತೆಗೆ ತಂದು ಬಿಟ್ಟರು

ಈರಪ್ಪ ಹಳಕಟ್ಟಿ
Published 10 ಜೂನ್ 2020, 8:42 IST
Last Updated 10 ಜೂನ್ 2020, 8:42 IST
ಚಿಕ್ಕಬಳ್ಳಾಪುರದಲ್ಲಿರುವ ಪೊಲೀಸ್ ವಸತಿ ಸಂಕೀರ್ಣದ ಬಳಿ ಅನೇಕ ದಿನಗಳಿಂದ ನಿಂತಿದ್ದ ಕಾರು (ಎಡಚಿತ್ರ), ನಗರ ಹೊರವಲಯದ ಹೊನ್ನೇನಹಳ್ಳಿಯ ಬಳಿ ಸರ್ವೀಸ್‌ ರಸ್ತೆಯಲ್ಲಿ ಮಂಗಳವಾರ ಅನಾಥ ಸ್ಥಿತಿಯಲ್ಲಿ ಕಂಡುಬಂದ ಕಾರು
ಚಿಕ್ಕಬಳ್ಳಾಪುರದಲ್ಲಿರುವ ಪೊಲೀಸ್ ವಸತಿ ಸಂಕೀರ್ಣದ ಬಳಿ ಅನೇಕ ದಿನಗಳಿಂದ ನಿಂತಿದ್ದ ಕಾರು (ಎಡಚಿತ್ರ), ನಗರ ಹೊರವಲಯದ ಹೊನ್ನೇನಹಳ್ಳಿಯ ಬಳಿ ಸರ್ವೀಸ್‌ ರಸ್ತೆಯಲ್ಲಿ ಮಂಗಳವಾರ ಅನಾಥ ಸ್ಥಿತಿಯಲ್ಲಿ ಕಂಡುಬಂದ ಕಾರು   

ಚಿಕ್ಕಬಳ್ಳಾಪುರ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ–7ರಲ್ಲಿ ವಾರಸುದಾರರಿಲ್ಲದೆ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದ್ದ ಕಾರು ಅನೇಕ ದಿನಗಳ ಕಾಲ ಪೊಲೀಸ್ ವಸತಿ ಸಂಕೀರ್ಣದ ಬಳಿ ನಿಂತು, ಸೋಮವಾರ ಪುನಃ ಅನಾಥ ಸ್ಥಿತಿಯಲ್ಲಿಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.

ಸುಮಾರು ಎರಡು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ –7 ರಲ್ಲಿ ಹಾರೋಬಂಡೆ ಸಮೀಪದ ನೀಲಗಿರಿ ತೋಪಿನ ಬಳಿ ಅನುಮಾನಾಸ್ಪದ ರೀತಿಯಲ್ಲಿ ಕೇರಳದ ನೋಂದಣಿ ಸಂಖ್ಯೆ (ಕೆಎಲ್ 11 ಇ 4818) ಹೊಂದಿರುವ ಮಾರುತಿ ಸುಜುಕಿ ಜೆನ್ ಕಾರಪತ್ತೆಯಾಗಿತ್ತು ಎನ್ನಲಾಗಿದೆ.

ವಾರಸುದಾರರಿಲ್ಲದ ಕಾರನ್ನು ನೋಡಿದ ಗ್ರಾಮಾಂತರ ಠಾಣೆಯ ಕಾನ್‌ಸ್ಟೆಬಲ್‌ ಒಬ್ಬರು ಸದ್ದಿಲ್ಲದೆ ಅದನ್ನು ತೆಗೆದುಕೊಂಡು ಬಂದು ನಗರ ಪೊಲೀಸ್‌ ಠಾಣೆಯ ಆವರಣದಲ್ಲಿರುವ ಪೊಲೀಸ್ ಕ್ವಾಟರ್ಸ್‌ನಲ್ಲಿ ಸುಮಾರು ಎರಡು ತಿಂಗಳು ನಿಲ್ಲಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ADVERTISEMENT

ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಾರಿನ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಮಾಲೀಕನನ್ನು ಪತ್ತೆ ಮಾಡಬೇಕಾದ ಪೊಲೀಸ್ ಇಲಾಖೆ ಸಿಬ್ಬಂದಿಯೇ ಕಳ್ಳರಂತೆ ಕಾರನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಲು ನಿರ್ಧರಿಸಿ, ಕಾರಿನ ವಿಚಾರವನ್ನು ಗುಟ್ಟಾಗಿ ಇಟ್ಟುಕೊಂಡಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ಲಭ್ಯವಾಗಿತ್ತು.

ಕಾರನ್ನು ತೆಗೆದುಕೊಂಡು ಬಂದ ಕಾನ್‌ಸ್ಟೆಬಲ್‌ ಅದಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಕಾನೂನು ಕ್ರಮದ ಪ್ರಕ್ರಿಯೆಗಳನ್ನು ಜರುಗಿಸದೆ ಅಕ್ರಮವಾಗಿ ತಮ್ಮ ಕ್ವಾಟರ್ಸ್‌ ಬಳಿ ನಿಲ್ಲಿಸಿಕೊಂಡಿದ್ದರು. ಕೊನೆಗೆ ಕೆಲಸಕ್ಕೆ ಸಂಚಕಾರ ಬರುವ ಭಯಕ್ಕೆ ಸೋಮವಾರ ಮಧ್ಯಾಹ್ನ ನಗರ ಹೊರವಲಯದ ಹೊನ್ನೇನಹಳ್ಳಿ ಬಳಿ ಸರ್ವಿಸ್‌ ರಸ್ತೆಯಲ್ಲಿ ಬಿಟ್ಟು, ಚಕ್ರಗಳ ಗಾಳಿ ತೆಗೆದು ಏನೂ ಅರಿಯದವರ ರೀತಿ ಜಾಗ ಖಾಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕೇರಳದ ತ್ರಿಶೂರ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಜಾನಿ ಸನ್‌ ಆಫ್‌ ಕೊಚ್ಚಪ್ಪು ಎಂಬುವರ ಹೆಸರಿನಲ್ಲಿ ಈ ಕಾರು ನೋಂದಣಿಯಾಗಿದೆ. ಯಾವ ಕಾರಣಕ್ಕೆ ಈ ಕಾರು ಹೆದ್ದಾರಿಯಲ್ಲಿ ಅನಾಥವಾಗಿ ಪತ್ತೆಯಾಗಿತ್ತು ಎನ್ನುವುದು ಇಂದಿಗೂ ನಿಗೂಢವಾಗಿದೆ.

ಅನಾಥವಾಗಿ ಸಿಕ್ಕ ಕಾರನ್ನು ಪೊಲೀಸ್ ಸಿಬ್ಬಂದಿಯೊಬ್ಬ ಕಾನೂನುಬಾಹೀರವಾಗಿ ರಾಜಾರೋಷವಾಗಿ ಇಟ್ಟುಕೊಂಡದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಸಮಗ್ರ ತನಿಖೆಯಿಂದಷ್ಟೇ ಇದರಲ್ಲಿ ಯಾರೆಲ್ಲ ಪಾತ್ರವಿದೆ ಎನ್ನುವುದು ಬೆಳಕಿಗೆ ಬರಬೇಕಿದೆ.

ಇತ್ತೀಚೆಗಷ್ಟೇ, ಗ್ರಾಮಾಂತರ ಠಾಣೆ ಸಿಬ್ಬಂದಿ ಟೈರ್‌ ಕಳ್ಳರ ವಿಚಾರದಲ್ಲಿ ಕರ್ತವ್ಯಲೋಪ ಎಸಗಿದ ಪ್ರಕರಣ ಸಂಚಲನ ಮೂಡಿಸಿತ್ತು. ಅದರ ಬೆನ್ನಲ್ಲೇ ಗ್ರಾಮಾಂತರ ಠಾಣೆ ಎಸ್‌ಐ ಚೇತನ್ ಗೌಡ ಮತ್ತು ಕಾನ್‌ಸ್ಟೆಬಲ್‌ಗಳಾದ ರಮಣಾ ರೆಡ್ಡಿ, ಹರೀಶ್‌ ಅವರ ವಿರುದ್ಧ ವಿವಿಧ ಭ್ರಷ್ಟಾಚಾರಗಳ ಆರೋಪಗಳ ಮೇಲೆ ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್‌ ಚಂದ್ರ ಅವರಿಗೆ ದೂರು ಸಲ್ಲಿಸಿದ್ದರು.

ಗ್ರಾಮಾಂತರ ಠಾಣೆ ಸಿಬ್ಬಂದಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ಅಕ್ರಮ ಬಯಲಿಗೆ ಬಂದಿರುವುದು, ಖಾಕಿ ವಲಯದಲ್ಲೇ ಚರ್ಚೆಗೆ ಎಡೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗ್ರಾಮಾಂತರ ಠಾಣೆ ಎಸ್‌ಐ ಚೇತನಗೌಡ ಮತ್ತು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.