ADVERTISEMENT

ಚಿಕ್ಕಬಳ್ಳಾಪುರ | ಗಣೇಶೋತ್ಸವ: ಸ್ಪರ್ಧೆ, ಹಾಡು, ನೃತ್ಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 7:16 IST
Last Updated 31 ಆಗಸ್ಟ್ 2025, 7:16 IST
ಎಚ್‌.ಎಸ್.ಗಾರ್ಡನ್‌ನಲ್ಲಿ ಗಣೇಶೋತ್ಸವದ ಅಂಗವಾಗಿ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು
ಎಚ್‌.ಎಸ್.ಗಾರ್ಡನ್‌ನಲ್ಲಿ ಗಣೇಶೋತ್ಸವದ ಅಂಗವಾಗಿ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು   

ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳ ಬಡಾವಣೆಗಳು, ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳಿಗೆ ನಿತ್ಯವೂ ವಿಶೇಷ ಪೂಜೆ, ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಅದ್ಧೂರಿಯಾಗಿ ನಡೆಯುತ್ತಿವೆ.

ಭಾದ್ರಪದ ಮಾಸದ ಚೌತಿಯ ದಿನವಾದ ಬುಧವಾರ ಜಿಲ್ಲೆಯಾದ್ಯಂತ ಗಣಪತಿ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಗಲ್ಲಿ ಗಲ್ಲಿಗಳಲ್ಲಿ, ಊರು ಕೇರಿಗಳಲ್ಲಿ, ನಗರ, ಪಟ್ಟಣ ಪ್ರದೇಶ ಹೀಗೆ ಎಲ್ಲೆಂದರಲ್ಲಿ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ವಿಘ್ನವಿನಾಶಕನ ಮೂರ್ತಿಗಳಿಗೆ ನಿತ್ಯ ಬಗೆ ಬಗೆಯ ಪೂಜೆಗಳನ್ನು ಮಾಡುತ್ತಿದ್ದಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಿತಿಗಳು ಹಬ್ಬಕ್ಕೆ ಮೆರಗು ತುಂಬುತ್ತಿವೆ. ನಗರದಲ್ಲಿ ಮನೆ ಮನೆಗಳಲ್ಲಿ ಕೂಡ ಗಜವದನನ ಆರಾಧನೆ ಬಹು ಜೋರಿನಿಂದಲೇ ನಡೆದಿದೆ.  

ADVERTISEMENT

ಜನರು ರಾತ್ರಿ ವೇಳೆ ಕುಟುಂಬ ಸಮೇತ ನಗರದ ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ವೈವಿಧ್ಯಮಯ ಲಂಬೋದರ ಮೂರ್ತಿಗಳ ದರ್ಶನ ಪಡೆಯಲು ಪ್ರದಕ್ಷಿಣೆ ಹಾಕುತ್ತಿದ್ದಾರೆ. ಅನೇಕ ಗಣೇಶೋತ್ಸವ ಸಮಿತಿಗಳು ಪ್ರಸಾದದ ವ್ಯವಸ್ಥೆ ಸಹ ಮಾಡಿವೆ.

ನಗರದ ಎಚ್‌.ಎಸ್.ಗಾರ್ಡನ್‌ನಲ್ಲಿ ಟೀಮ್ ರಾಯಲ್ ವಾರಿಯರ್ಸ್ ಯುವಕರು ಹಮ್ಮಿಕೊಂಡಿರುವ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ನಿತ್ಯವೂ ಒಂದಲ್ಲಾ ಒಂದು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಮ್ಯೂಸಿಕಲ್ ಚೇರ್, ಲೆಮೆನ್ ಆ್ಯಂಡ್ ಸ್ಫೂನ್, ನೃತ್ಯ, ಗಾಯನ, ಚಿತ್ರಕಲೆ, ಓಟದ ಸ್ಪರ್ಧೆಗಳನ್ನು ನಡೆಸಿದೆ. ಅಲ್ಲದೆ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯ ಸಹಕಾರದಲ್ಲಿ ಆರೋಗ್ಯ ತಪಾಸಣೆ ಶಿಬಿರ ಸಹ ನಡೆಯಿತು. 

ಎಚ್‌.ಎಸ್.ಗಾರ್ಡನ್‌ನ ವಾಲ್ಮೀಕಿ ನಗರದ ಗಣೇಶೋತ್ಸವ ಸಮಿತಿಯಿಂದ ಮಡಿಕೆ ಒಡೆಯುವ ಸ್ಪರ್ಧೆ, ರಸಮಂಜರಿ ಕಾರ್ಯಕ್ರಮಗಳು ನಡೆದವು. ನಗರದ ಬೇರೆ ಬೇರೆ ಬಡಾವಣೆಗಳಲ್ಲಿಯೂ ವಿವಿಧ ಕಾರ್ಯಕ್ರಮಗಳು ನಡೆದವು.

ನಗರದ ವಾಪಸಂದ್ರ ಹಾಲಿನ ಡೇರಿ ಮುಂಭಾಗದಲ್ಲಿ ವಿದ್ಯಾ ಗಣಪತಿ ಕನ್ನಡಾಂಬೆ ಗೆಳೆಯರ ಸಂಘ, ವರ ವಿದ್ಯಾ ವಿನಾಯಕ ಗೆಳೆಯರ ಸಂಘ, ಮುನ್ಸಿಫಲ್ ಬಡಾವಣೆಯಲ್ಲಿ ಸಿದ್ಧಿ ವಿನಾಯಕ ಗೆಳೆಯರ ಸಂಘ ಹೀಗೆ ನಗರದ ವಿವಿಧ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳನ್ನು ಅದ್ಧೂರಿಯಾಗಿ ಪ್ರತಿಷ್ಠಾಪಿಸಲಾಗಿದ್ದು ನಾನಾ ಕಾರ್ಯಕ್ರಮಗಳು ಜರುಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.