ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಮತಧ್ರುವೀಕರಣ, ವಿಘಟನೆಗೆ ‘ಜಾತಿ’ ಬಾಣ

ಕ್ಷೇತ್ರದಲ್ಲಿ ಕಾವೇರಿದೆ ಜಾತಿ ರಾಜಕಾರಣದ ಚರ್ಚೆ

ಡಿ.ಎಂ.ಕುರ್ಕೆ ಪ್ರಶಾಂತ
Published 7 ಏಪ್ರಿಲ್ 2024, 5:19 IST
Last Updated 7 ಏಪ್ರಿಲ್ 2024, 5:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಜೊತೆಗೆ ಜಾತಿ ರಾಜಕಾರಣದ ಚರ್ಚೆಗಳ ಕಾವು ಸಹ ಬಿಸಿ ಆಗುತ್ತಿದೆ. ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಜಾತಿ  ರಾಜಕಾರಣದ ಬಿಸಿ ತುಸು ಹೆಚ್ಚಿನದಾಗಿಯೇ ಇದೆ. 

ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಡಾ.ಕೆ.ಸುಧಾಕರ್ ಒಕ್ಕಲಿಗರಾದರೆ, ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಬಲಿಜ ಸಮುದಾಯಕ್ಕೆ ಸೇರಿದವರು.

ಲೋಕಸಭೆ ಚುನಾವಣೆ ‍ಪ್ರಚಾರಕ್ಕೆ ಮುಖಂಡರು ನಾನಾ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಅದರಲ್ಲಿ ಈ ಜಾತಿಯ ಮತಧ್ರುವೀಕರಣ ಮತ್ತು ವಿಘಟನೆಯೂ ಪ್ರಮುಖ ಅಸ್ತ್ರವಾಗಿದೆ. ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಜಾತಿವಾರು ಮತಗಳಿಕೆ, ವಿಘಟನೆಯ ಲೆಕ್ಕಾಚಾರಗಳು ಜೋರಾಗಿವೆ.

ADVERTISEMENT

ಸಮುದಾಯದ ಸಂಘಟನೆಗಳ ಹೆಸರಿನಲ್ಲಿ ಬೆಂಗಳೂರಿನಲ್ಲಿ ಆಂತರಿಕ ಸಭೆಗಳು ಸಹ ನಡೆದಿವೆ. ಈ ಸಭೆಯಲ್ಲಿ ಆಂತರಿಕ ಒಗ್ಗಟ್ಟು ಪ್ರತಿಪಾದನೆಯ ಜೊತೆಗೆ ಇತರೆ ಸಮುದಾಯಗಳ ಮತಗಳನ್ನೂ ಸೆಳೆಯಬೇಕು ಎಂದು ಮುಖಂಡರು ಸ್ವಜಾತಿಯ ಜನರಿಗೆ ತಿಳಿವಳಿಕೆ ಹೇಳಿದ್ದಾರೆ. ಹೀಗೆ ಸಂಘಟನೆಗಳ ಹೆಸರಿನಲ್ಲಿ ಜಾತಿವಾರು ಸಭೆಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ಜಾತಿಯ ಹೆಸರಿನಲ್ಲಿ ವಾಟ್ಸ್‌ಆ್ಯಪ್ ವಾರ್‌ಗಳು ಸಹ ಹೆಚ್ಚುತ್ತಿವೆ. 

ಇತ್ತೀಚೆಗೆ ನಡೆದ ರೋಡ್ ಷೋ ವೇಳೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಕಣ್ಣೀರು ಹಾಕುತ್ತಲೇ, ‘ನಾನು ಜಾತಿ ರಾಜಕೀಯ ಮಾಡಿಲ್ಲ. ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವವನೇ ಒಕ್ಕಲಿಗ’ ಎನ್ನುವ ಮೂಲಕ ನಾನಾ ರೀತಿಯ ಚರ್ಚೆಗೆ ಕಾರಣರಾಗಿದ್ದಾರೆ. 

‘ನನ್ನ ಪ್ರೀತಿಯ ಒಕ್ಕಲಿಗ ಮತಬಾಂಧವರೇ, ಮಾಜಿ ಸಚಿವ ಸುಧಾಕರ್ ಅವರು ಒಕ್ಕಲಿಗ ವಿರೋಧಿ. ಚುನಾವಣೆ ಬಂದಾಗ ಒಕ್ಕಲಿಗರು ಜ್ಞಾಪಕಕ್ಕೆ ಬಂದವೇನು, ಯಾವ ಒಕ್ಕಲಿಗ ವಿದ್ಯಾರ್ಥಿಗಳಿಗೆ ಅವರು ಸಹಾಯ ಮಾಡಿದ್ದಾರೆ’ ಎಂದು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತ ನಾರಾಯಣ ರೆಡ್ಡಿ ಎಂಬುವವರ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಬರಹವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಈ ಬರಹದಲ್ಲಿ ಸುಧಾಕರ್ ಅವರ ಅಧಿಕಾರದ ‌ಅವಧಿಯಲ್ಲಿ ಯಾವ ಒಕ್ಕಲಿಗ ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಯಿತು ಎನ್ನುವುದನ್ನು ವಿವರಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಮತ್ತು ಕಾಂಗ್ರೆಸ್‌ಗೆ ಸಂಬಂಧಿಸಿದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಈ ಬರಹವನ್ನು ಹಂಚಿಕೊಳ್ಳಲಾಗಿದೆ. 

ಚಿಕ್ಕಬಳ್ಳಾಪುರ ಕ್ಷೇತ್ರದ ಬಲಿಜ ಬಾಂಧವರೇ, ರಕ್ಷಾ ರಾಮಯ್ಯ ಸಜ್ಜನ, ಗೌರವಾನ್ವಿತ ಕುಟುಂಬದಿಂದ ಬಂದವರು. ಆದರೆ ಅವರು ಸ್ಪರ್ಧಿಸಿರುವುದು ಕಾಂಗ್ರೆಸ್ ಪಕ್ಷದಿಂದ. ಬಲಿಜ ಸಮುದಾಯಕ್ಕೆ ‘2ಎ’ ಮೀಸಲಾತಿ ತೆಗೆದಿದ್ದು ಕಾಂಗ್ರೆಸ್ ಪಕ್ಷದ ವೀರಪ್ಪ ಮೊಯಿಲಿ. ಮೀಸಲಾತಿ ಕೊಡಿ ಎಂದರೂ ಕಾಂಗ್ರೆಸ್‌ನ ಯಾವ ನಾಯಕರೂ ಸ್ಪಂದಿಸಲಿಲ್ಲ. ಮನವಿಯನ್ನು ಕಸದ ಬುಟ್ಟಿಗೆ ಎಸೆದ ಸಿದ್ದರಾಮಯ್ಯನ ಪಕ್ಷಕ್ಕೆ ಮತ ನೀಡಬೇಕೆ? ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಶೈಕ್ಷಣಿಕ ಉದ್ದೇಶಕ್ಕೆ ‘2ಎ’ ಮೀಸಲಾತಿ ನೀಡಿದರು. ನಮ್ಮ ಮೀಸಲಾತಿಯ ಅನ್ನ ಕಿತ್ತ ಕಾಂಗ್ರೆಸ್‌ಗೆ ಮತ ನೀಡಬೇಕೆ. ವ್ಯಕ್ತಿಗಿಂತ ಸಮಾಜ ಮುಖ್ಯ ಎಂದು ಯಲಹಂಕ ವೆಂಕಟೇಶ್ ಬಳೇ ರಾಮಕೃಷ್ಣ ಹೆಸರಿನ ಫೇಸ್‌ಬುಕ್‌ ಬರಹವೂ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಜೆಪಿಯ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಈ ಬರಹ ವ್ಯಾಪಕವಾಗಿದೆ.

ಒಕ್ಕಲಿಗ ಮತದಾರರ ಸಂಖ್ಯೆ ಹೆಚ್ಚಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರು ಸಹ ಗಣನೀಯವಾಗಿ ಇದ್ದಾರೆ. ಬಲಿಜಿಗರು, ಅಲ್ಪಸಂಖ್ಯಾತರು ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಿವೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಇತಿಹಾಸ ನೋಡಿದರೆ ಕಾಂಗ್ರೆಸ್‌ಗೆ ತೆಕ್ಕೆಗೆ ಅಹಿಂದ ಮತಗಳು ಗಣನೀಯವಾಗಿ ಸೇರಿದೆ ಪರಿಣಾಮ ಅತಿ ಹೆಚ್ಚು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ತೀರಾ ಕಡಿಮೆ ಸಂಖ್ಯೆಯಲ್ಲಿ ಮತದಾರರನ್ನು ಹೊಂದಿರುವ ಜಾತಿಗಳ ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದು ಐತಿಹಾಸಿಕವಾಗಿ ಗೆಲುವು ದಾಖಲಿಸಿದ್ದಾರೆ.

ಆದರೆ ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಈ ಜಾತಿ ಲೆಕ್ಕಾಚಾರದ ಸಮೀಕರಣಗಳು ಏರುಪೇರಾಗಿವೆ. ಆ ಪರಿಣಾಮವೇ ನಾಲ್ಕೂವರೆ ದಶಕಗಳ ನಂತರ ಬಿಜೆಪಿಯಿಂದ ಒಕ್ಕಲಿಗ ಸಮುದಾಯದ ಬಿ.ಎನ್.ಬಚ್ಚೇಗೌಡ ಗೆಲುವು ಸಾಧಿಸಿದರು. ಬಿಜೆಪಿ ಖಾತೆ ತೆರೆಯಿತು.

ಕಳೆದ ಬಾರಿಯ ಲೋಕಸಭಾ ಚುನಾವಣೆಗಿಂತಲೂ ಈ ಬಾರಿಯ ಚುನಾವಣೆಯಲ್ಲಿ‌ ಜಾತಿ ಲೆಕ್ಕಾಚಾರದ ಅಂಶಗಳು ಪ್ರಧಾನವಾಗಿ ಕೆಲಸ ಮಾಡುವುದು ಖಚಿತ.  ಮತಧ್ರುವೀಕರಣ, ವಿಘಟನೆಗೆ ಅಸ್ತ್ರವಾಗಿ ಜಾತಿಯ ಬಾಣಗಳನ್ನು ಹೂಡಲಾಗುತ್ತಿದೆ. ಚುನಾವಣೆ ಮತ್ತಷ್ಟು ಕಾವೇರಿದಂತೆ ಜಾತಿ ಬಾಣಗಳು ಸಹ ಜೋರಾಗಲಿವೆ.

ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ ‘ಜಾತಿ’ ಬರಹಗಳು ಬೆಂಗಳೂರಿನಲ್ಲಿ ಸಮುದಾಯಗಳ ಆಂತರಿಕ ಸಭೆ ಜಾತಿಯ ಚರ್ಚೆ ಮತ್ತಷ್ಟು ವೇಗ ಪಡೆಯುವ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.