ADVERTISEMENT

ಕಳ್ಳತನ; ಶೇ 55ರಷ್ಟು ಪ್ರಕರಣ ಪತ್ತೆ

2025ರಲ್ಲಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯ ಬಗ್ಗೆ ವಿವರದ ನೀಡಿದ ಎಸ್‌ಪಿ ಕುಶಾಲ್ ಚೌಕ್ಸೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 3:09 IST
Last Updated 31 ಡಿಸೆಂಬರ್ 2025, 3:09 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಎಸ್‌ಪಿ ಕುಶಾಲ್ ಚೌಕ್ಸೆ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಎಸ್‌ಪಿ ಕುಶಾಲ್ ಚೌಕ್ಸೆ ಮಾತನಾಡಿದರು   

ಪ್ರಜಾವಾಣಿ ವಾರ್ತೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ 2025ನೇ ಸಾಲಿನಲ್ಲಿ ಘಟಿಸಿದ ಪ್ರಮುಖ ವಿದ್ಯಮಾನಗಳು, ಪ್ರಕರಣಗಳು, ಪತ್ತೆ, ಸೇವೆಗಳು ಹೀಗೆ ಸಮಗ್ರ ವಿವರಗಳನ್ನು ಇಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹಂಚಿಕೊಂಡರು.

ಈ ವೇಳೆ ವಶಕ್ಕೆ ಪಡೆದ ನಗದು, ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಟ್ರ್ಯಾಕ್ಟರ್‌ಗಳು, ಆಟೊ, ಬೈಕ್‌ ಅನ್ನು ಪ್ರದರ್ಶಿಸಲಾಯಿತು. ನಂತರ ಮಾಲೀಕರಿಗೆ ಒಪ್ಪಿಸಲಾಯಿತು. ಜಿಲ್ಲೆಯಲ್ಲಿ ಈ ಸಾಲಿನಲ್ಲಿ ನಡೆದ ಪ್ರಮುಖ ಅಪರಾಧ ಕೃತ್ಯಗಳ ಪತ್ತೆಯ ಬಗ್ಗೆಯೂ ಎಸ್‌ಪಿ ವಿವರಿಸಿದರು.

ADVERTISEMENT

ಜಿಲ್ಲೆಯಲ್ಲಿ 2025ರಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ 462 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 244 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಶೇ 55ರಷ್ಟು ಪ್ರಕರಣಗಳು ಪತ್ತೆಯಾಗಿವೆ ಎಂದು ಕುಶಾಲ್ ಚೌಕ್ಸೆ ವಿವರಿಸಿದರು.

ಬೇರೆ ಬೇರೆ ಪ್ರಕರಣಗಳಲ್ಲಿ ಒಟ್ಟು ₹6 ಕೋಟಿ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ₹2.50 ಕೋಟಿ ವಶಕ್ಕೆ ಪಡೆದು ₹1.70 ಕೋಟಿಯನ್ನು ಮಾಲೀಕರಿಗೆ ಮರಳಿಸಲಾಗಿದೆ. ಉಳಿದ ಹಣದ ವಿಚಾರವು ನ್ಯಾಯಾಲದಲ್ಲಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಾಲೀಕರಿಗೆ ಆ ಹಣವನ್ನೂ ಮರಳಿಸಲಾಗುವುದು ಎಂದು ಹೇಳಿದರು.

ಮೊಬೈಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಸಿಐಆರ್ ಪೋರ್ಟಲ್‌ನಲ್ಲಿ 1,986 ಪ್ರಕರಣಗಳು ದಾಖಲಾಗಿದ್ದು 1,025 ಮೊಬೈಲ್ ಪತ್ತೆ ಮಾಡಿ ಮಾಲೀಕರಿಗೆ ನೀಡಿದ್ದೇವೆ ಎಂದು ಹೇಳಿದರು.

ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಪ್ರಕರಣಗಳನ್ನು ದಾಖಲಿಸಿ 55 ಆರೋಪಿಗಳನ್ನು ಮತ್ತು ₹60 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಜೂಜಾಟಕ್ಕೆ ಸಂಬಂಧಿಸಿದಂತೆ 345 ಪ್ರಕರಣ ದಾಖಲಿಸಿ, 1,011 ಮಂದಿ ಬಂಧಿಸಿ ₹22 ಲಕ್ಷ ವಶಕ್ಕೆ ಪಡೆದಿದ್ದೇವೆ. ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ 11 ಪ್ರಕರಣ ದಾಖಲಿಸಿಕೊಂಡು 19 ಜನರು ಹಾಗೂ ₹10 ಲಕ್ಷ ವಶಕ್ಕೆ ಪಡೆದಿದ್ದೇವೆ ಎಂದು ವಿವರಿಸಿದರು.

ಅಬಕಾರಿ ಪ್ರಕರಣಗಳು ಸಹ ಹೆಚ್ಚಿವೆ. ಜೂಜಾಟ, ಅಬಕಾರಿ ಅಕ್ರಮಗಳು, ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. 

738 ರೌಡಿ ಶೀಟರ್‌ಗಳಿದ್ದು 691 ಮಂದಿಯಿಂದ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಪಡೆದಿದ್ದೇವೆ. 6 ಮಂದಿ ರೌಡಿ ಶೀಟರ್‌ಗಳನ್ನು ಗಡಿಪಾರು ಸಹ ಮಾಡಿದ್ದೇವೆ ಎಂದರು.  

ಚಿಂತಾಮಣಿ, ಗೌರಿಬಿದನೂರು, ಬಾಗೇಪಲ್ಲಿ ಠಾಣೆಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೋಕ್ಸೊ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಸಹ ಮೂಡಿಸುತ್ತಿದ್ದೇವೆ ಎಂದರು. 

‌ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯು ಆಗಸ್ಟ್‌ನಲ್ಲಿ ಚಾಟ್ ಬಾಟ್ ಸೇವೆಗೆ ಚಾಲನೆ ನೀಡಿದ್ದೇವೆ. ಬೀಟ್ ಸಿಬ್ಬಂದಿ ನಂಬರ್, ಯಾವ ಠಾಣೆಯ ವ್ಯಾಪ್ತಿಯ ಯಾವ ಗ್ರಾಮ ಬರುತ್ತದೆ ಸೇರಿದಂತೆ ಹಲವು ಮಾಹಿತಿಯನ್ನು ಸಾರ್ವಜನಿಕರು ಕೇಳಿದ್ದಾರೆ. ಈ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಚಿಂತಾಮಣಿ ಸಂಚಾರ ಠಾಣೆ ಮತ್ತು ಬಾಗೇಪಲ್ಲಿ ಉಪವಿಭಾಗ ರಚನೆಗೆ ಇಲಾಖೆಗೆ ಪ್ರಸ್ತಾವ ಸಹ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಡಿವೈಎಸ್‌ಪಿಗಳಾದ ಶಿವಕುಮಾರ್, ರವಿಕುಮಾರ್, ಮುರಳೀಧರ್ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.