ADVERTISEMENT

ಅಕ್ರಮ ನಡೆಸಿದವರ ವಿರುದ್ಧ ಕ್ರಮ: ಸಚಿವ ಎಂ.ಟಿ.ಬಿ.ನಾಗರಾಜ್

ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಗಾಕಲ್ಯಾಣ ಯೋಜನೆಯ ಕೊಳವೆಬಾವಿ ವಿಚಾರ ತೀವ್ರ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 10:46 IST
Last Updated 8 ಏಪ್ರಿಲ್ 2022, 10:46 IST
   

ಚಿಕ್ಕಬಳ್ಳಾಪುರ:ಇಲ್ಲಿನ ಜಿ.ಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆಯ ಕೊಳವೆಬಾವಿಗಳ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಯಿತು. ತೀವ್ರ ಚರ್ಚೆಗೆ ಕಾರಣವಾಯಿತು. ಅಕ್ರಮಗಳು ನಡೆದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಭೆಯಲ್ಲಿದ್ದ ಸಚಿವರಾದ ಎಂ.ಟಿ.ಬಿ.ನಾಗರಾಜ್ ಮತ್ತು ಡಾ.ಕೆ.ಸುಧಾಕರ್ ತಿಳಿಸಿದರು.

ವಿವಿಧ ಅಭಿವೃದ್ಧಿ ನಿಗಮಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಕೊಳವೆಬಾವಿಗಳನ್ನು ಕೊರೆಸುವ ವಿಚಾರದಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಜಿಲ್ಲಾ ಮಟ್ಟದಲ್ಲೇ ಟೆಂಡರ್‌ ಪ್ರಕ್ರಿಯೆಗೆ ಸರ್ಕಾರದ ಹಂತದಲ್ಲಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಕೊಳವೆಬಾವಿ ಕೊರೆಸಿದ್ದರೂ ಮೋಟರ್‌ ಹಾಗೂ ವಿದ್ಯುತ್‌ ಸಂಪರ್ಕ ನೀಡದ ಕಾರಣ ವಿಳಂಬವಾಗುತ್ತಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ನೀಡಿರುವ ಗುರಿಯನ್ನು ಈಗಲೂ ಪೂರ್ಣಗೊಳಿಸಿಲ್ಲ. ರಾಜ್ಯ ಮಟ್ಟದ ಬದಲು ಜಿಲ್ಲಾ ಮಟ್ಟದಲ್ಲೇ ಟೆಂಡರ್‌ ಪ್ರಕ್ರಿಯೆ ನಡೆಸುವುದು ಸೂಕ್ತ. ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ADVERTISEMENT

ಕೊಳವೆಬಾವಿ ಕೊರೆಸಿದ್ದರೂ ಮೋಟರ್‌, ವಿದ್ಯುತ್‌ ಸಂಪರ್ಕ ನೀಡದ ಪ್ರಕರಣಗಳು ಗಮನಕ್ಕೆ ಬಂದಿವೆ. ಇದು ಅಕ್ಷಮ್ಯ. ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಫಲಾನುಭವಿಗಳ ಬಳಿ ಹಣ ಪಡೆಯುತ್ತಿರುವ ದೂರುಗಳು ಕೇಳಿ ಬಂದರೆ ಅಂತವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್‌ ಇದಕ್ಕೆ ಧ್ವನಿಗೂಡಿಸಿದರು, ನಿರ್ದಿಷ್ಟ ಪ್ರಕರಣಗಳ ಬಗ್ಗೆ ಶಾಸಕರು ದೂರು ನೀಡಿದರೆ ಕ್ರಮ ನಿಶ್ಚಿತ ಎಂದರು.

ಜಿಲ್ಲೆಯಲ್ಲಿ 3.17 ಲಕ್ಷದಷ್ಟು ಎಬಿ-ಎಆರ್‌ಕೆ ಆರೋಗ್ಯ ವಿಮೆ ಕಾರ್ಡ್‌ ವಿತರಿಸಲಾಗಿದೆ. ಇದನ್ನು ತ್ವರಿತಗೊಳಿಸಿ ಎಲ್ಲ ಕುಟುಂಬಗಳಿಗೂ ನೀಡಬೇಕು. ಜಿಲ್ಲೆಯ ಎಲ್ಲ ಆಸ್ಪತ್ರೆಗಳನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸಬೇಕು. ಶೇ.25 ರಷ್ಟು ಸಾಧನೆ ಸಮಾಧಾನದ ವಿಷಯವಲ್ಲ ಎಂದರು.

ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸಾಕಷ್ಟು ನೀರಿನ ಮೂಲಗಳಿವೆ. ಅವುಗಳನ್ನು ಸರಿಯಾಗಿ ಗುರುತಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು.ಚಿಂತಾಮಣಿ ತಾಲ್ಲೂಕನ್ನು ವಿಶೇಷವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ಶೀಘ್ರವೇ ಅಧಿಕಾರಿಗಳು ಸರ್ಕಾರಕ್ಕೆ ವರದಿ ಕಳುಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರ ಕೊರತೆ ಆಗದಂತೆ ಎಚ್ಚರವಹಿಸಬೇಕು.ಕೃಷಿಯಂತ್ರ ನೀಡುವ ಯೋಜನೆ 6 ಹೋಬಳಿಗಳಲ್ಲಿಇನ್ನು ಜಾರಿಯಾಗಿಲ್ಲ. ತಕ್ಷಣ ಅಲ್ಲಿ ಆರಂಭಿಸಬೇಕು ಎಂದು ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದರು.

ಸಂಸ್ಕರಣಾ ಘಟಕ: ತೋಟಗಾರಿಕೆ ಬೆಳೆಗಳ ದಾಸ್ತಾನಿಗೆ ಶೈತ್ಯಾಗಾರ ಮತ್ತು ಸಂಸ್ಕರಣಾ ಘಟಕಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕಿದೆ. ಅದಕ್ಕಾಗಿ ಜಿಲ್ಲಾಡಳಿತ ಭೂಮಿ ಗುರುತಿಸಿ ನೀಡಬೇಕು. ಮಾವು ಮತ್ತು ದ್ರಾಕ್ಷಿ ಬೆಳೆಗಳಿಗೆ ವಿಶೇಷ ಗಮನಹರಿಸಬೇಕು.ಚಿತ್ತೂರು ಮಾದರಿಯಲ್ಲಿ ಸೌರಶಕ್ತಿ ಘಟಕಗಳನ್ನು ಸ್ಥಾಪಿಸಿದರೆ ಹೆಚ್ಚು ಅನುಕೂಲ. ಈ ಬಗ್ಗೆ ಇಲಾಖೆ ಗಮನಹರಿಸಬೇಕು ಎಂದರು.

ಕೆರೆ ಅಂಗಳದಲ್ಲಿ ಅರಣ್ಯೀಕರಣಕ್ಕೆ ವೆಚ್ಚ ಮಾಡಿರುವ ಹಣ ಇನ್ನೂ ವಿತರಣೆ ಆಗಿಲ್ಲ.ಶ್ರೀಗಂಧ ಬೆಳೆಯುವ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಬೇಕು. ಗುಡ್ಡ ಮತ್ತು ಸರ್ಕಾರಿ ಭೂಮಿಯಲ್ಲಿ ಗಿಡಗಳನ್ನು ಬೆಳೆಸುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ರಸ್ತೆ ಮತ್ತು ವಿದ್ಯುತ್‌ ಇಲಾಖೆಗಳ ಕಾಮಗಾರಿಗಳಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು. ಈ ವಿಷಯಗಳಲ್ಲಿ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಶಾಸಕರಾದ ಎಂ.ಕೃಷ್ಣಾರೆಡ್ಡಿ, ಎನ್.ಎಚ್.ಶಿವಶಂಕರರೆಡ್ಡಿ, ಎಸ್‌.ಎನ್.ಸುಬ್ಬಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಇದ್ದರು.

ಗಂಗಾ ಕಲ್ಯಾಣ ಯೋಜನೆ ಬಾಗೇಪಲ್ಲಿಯಲ್ಲಿ ಅಧ್ವಾನಗೊಂಡಿದೆ. ಈ ಬಗ್ಗೆ ಪ್ರಜಾವಾಣಿಯಲ್ಲಿ ‘ಬಾಗೇಪಲ್ಲಿಯಲ್ಲಿ ಹಳ್ಳಹಿಡಿದ ಗಂಗಾ ಕಲ್ಯಾಣ’ ಎಂಬ ವರದಿ ಪ್ರಕಟವಾಗಿತ್ತು. ಈ ವಿಷಯವನ್ನು ಕೆಡಿಪಿ ಸಭೆಯಲ್ಲಿಯೂ ಪ್ರಸ್ತಾಪಿಸುವುದಾಗಿ ಶಾಸಕ ಸುಬ್ಬಾರೆಡ್ಡಿ ತಿಳಿಸಿದ್ದರು.ಕೆಡಿಪಿ ಸಭೆಗೆ ಅಧಿಕಾರಿಗಳಿಗೆ ಹಣ ನೀಡಿದ ಫಲಾನುಭವಿಗಳನ್ನೂ ಕರೆತಂದಿದ್ದರು.

‘ಕೊಳವೆಬಾವಿ ಕೊರೆಯಲು ಅಧಿಕಾರಿಗಳು ಫಲಾನುಭವಿಗಳಿಂದ ₹ 50 ಸಾವಿರ ಹಣ ಪಡೆದಿದ್ದಾರೆ. ನಿಗಮದ ವ್ಯವಸ್ಥಾಪಕರು, ಫೀಲ್ಡ್ ಆಫೀಸರ್, ಗುತ್ತಿಗೆದಾರರಿಗೆ ರೈತರು ಹಣ ನೀಡಿದ್ದಾರೆ’ ಎಂದು ಸಭೆಯಲ್ಲಿ ಸುಬ್ಬಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಶಾಸಕರು, ಬಾಗೇಪಲ್ಲಿ ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ಅಕ್ರಮ ನಡೆದಿದೆ. ನಿವೃತ್ತ ತಹಶೀಲ್ದಾರ್ ಅಕ್ರಮವಾಗಿ 50 ಎಕರೆ ಜಮೀನಿನ ಸಾಗುವಳಿ ಚೀಟಿ ಪಡೆದಿದ್ದಾರೆ. ಈ ಬಗ್ಗೆ ತಿಳಿದಿದ್ದರೂ ಕ್ರಮವಹಿಸಿಲ್ಲ. ಶೀಘ್ರದಲ್ಲಿಯೇ ಈ ಬಗ್ಗೆ ಮಾಧ್ಯಮಗೋಷ್ಠಿ ಕರೆದು ತಿಳಿಸುವೆ. ಈ ಕೆಡಿಪಿ ಸಭೆಗಳು ಕಾಟಾಚಾರಕ್ಕೆ ನಡೆಯುತ್ತವೆ. ಮೂರು ತಿಂಗಳಿಗೆ ಒಂದು ಸಭೆ ನಡೆಸಬೇಕು ಅಷ್ಟೇ. ಯಾವುದೇ ಕ್ರಮಗಳು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನೀರಿನ ಸಮಸ್ಯೆ; ತುರ್ತು ಕ್ರಮ’

ಚಿಕ್ಕಬಳ್ಳಾಪುರ: ಜಿಲ್ಲೆಯ ಯಾವ ತಾಲ್ಲೂಕಿನಲ್ಲಿಯೂ ಸದ್ಯ ನೀರಿನ ಸಮಸ್ಯೆ ಬಾಧಿಸುತ್ತಿಲ್ಲ. ಸಮಸ್ಯೆ ಬಂದರೆ ಜಿಲ್ಲಾಧಿಕಾರಿ ಖಾತೆಯಲ್ಲಿ ₹ 10 ಕೋಟಿ ಇದೆ. ತುರ್ತಾಗಿ ನೀರು ಕೊಡುವ ಕೆಲಸ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದರು.

ಕೆಡಿಪಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರತಿ ತಾಲ್ಲೂಕಿಗೆ ಬೇಸಿಗೆಗೆ ಮೂರು ತಿಂಗಳಲ್ಲಿ ಕುಡಿಯುವ ನೀರಿಗೆ ವಿಶೇಷ ಅನುದಾನ ಬಿಡುಗಡೆ ಆಗಬೇಕು. ಆರು ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಇಲ್ಲ. ಸುಸೂತ್ರವಾಗಿ ನೀರಿದೆ ಎಂದು ಶಾಸಕರು ಹೇಳುತ್ತಿದ್ದಾರೆ. ಸಮಸ್ಯೆ ಇದ್ದರೆ ಪರಿಹರಿಸಲಾಗುವುದು ಎಂದರು.

ಸುಮಾರು 8ರಿಂದ 10 ಇಲಾಖೆಗಳು ಶೇ 100ರಷ್ಟು ಪ್ರಗತಿ ಸಾಧಿಸಿಲ್ಲ. ಆ ಬಗ್ಗೆ ಪರಿಶೀಲಿಸಿದ್ದೇವೆ. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕಾರ್ಯಕೈಗೊಳ್ಳುವಂತೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹೇಳಿದ್ದೇವೆ ಎಂದು ಹೇಳಿದರು.

ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಂದ ಅಧಿಕಾರಿಗಳು ಹಣ ಪಡೆದಿರುವ ಬಗ್ಗೆ ಬಾಗೇಪಲ್ಲಿ ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಹಣ ಪಡೆದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.