ಬಾಗೇಪಲ್ಲಿ: ಸರ್ಕಾರದಿಂದ ಅನುಮತಿ ಪಡೆಯದೆ ತಾಲ್ಲೂಕಿನ ಪೆನುಮಲೆ ಗ್ರಾಮದಲ್ಲಿ ಏಮ್ ಫಾರ್ ಸೇವ ಸೌಮ್ಯ ಕೇಸಾನುಪಲ್ಲಿ ವಿದ್ಯಾರ್ಥಿನಿಲಯದಲ್ಲಿದ್ದ ಮೇಘಾಲಯದ 25 ಬಾಲಕಿಯರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕದವರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಮಂಗಳವಾರ ದಾಳಿ ಮಾಡಿ ಬಾಲಕಿಯನ್ನು ಚಿಕ್ಕಬಳ್ಳಾಪುರದ ಬಾಲಮಂದಿರಕ್ಕೆ ಕಳುಹಿಸಿದ್ದಾರೆ.
ವಿದ್ಯಾರ್ಥಿನಿಲಯದಲ್ಲಿ ಹೆಣ್ಣುಮಕ್ಕಳಿಗೆ ಊಟ, ವಸತಿ, ಶಿಕ್ಷಣ, ಆರೋಗ್ಯ ಉಚಿತವಾಗಿ ನೀಡಲಾಗುವುದು ಎಂದು ಖಾಸಗಿ ಸಂಸ್ಥೆಯವರು ಹೊರ ರಾಜ್ಯಗಳಿಂದ ಅನಾಥ, ಏಕ ಪೋಷಕರು ಇರುವ, ಬುಡಕಟ್ಟಿನ ಹೆಣ್ಣುಮಕ್ಕಳನ್ನು ವಿದ್ಯಾರ್ಥಿನಿಲಯಗಳಲ್ಲಿ ಇರಿಸಿದ್ದಾರೆ.
ಇದೇ ಮಾದರಿಯಲ್ಲಿ ತಾಲ್ಲೂಕಿನ ಪೆನುಮಲೆ ಗ್ರಾಮದಲ್ಲಿನ ಸೌಮ್ಯ ಕೇಸಾನುಪಲ್ಲಿ ವಿದ್ಯಾರ್ಥಿನಿಲಯದಲ್ಲಿ ಒಂದು ತಿಂಗಳ ಹಿಂದೆ ಮೇಘಾಲಯದಿಂದ 25 ಮಂದಿ ಬುಡಕಟ್ಟಿನ, ಏಕಪೋಷಕರು, ಅನಾಥ ಹೆಣ್ಣುಮಕ್ಕಳನ್ನು ಕರೆತಂದಿದ್ದಾರೆ. ವಿದ್ಯಾರ್ಥಿನಿಲಯದಲ್ಲಿ ಉಚಿತವಾಗಿ ಊಟ, ವಸತಿ ಕಲ್ಪಿಸಿದ್ದರು. ಹೆಣ್ಣುಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿದ್ದಾರೆ.
ಆದರೆ ಹೊರ ರಾಜ್ಯ, ಜಿಲ್ಲೆಗಳಿಂದ ಬಾಲಕ, ಬಾಲಕಿಯರನ್ನು ಖಾಸಗಿ ವಿದ್ಯಾರ್ಥಿನಿಲಯಗಳಲ್ಲಿ ಇರಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬೇಕು. ಪೋಷಕರ ಅನುಮತಿ ಪತ್ರ, ಊಟ, ವಸತಿ, ಮಾತನಾಡುವ ಭಾಷೆಗೆ ಅನುಗುಣವಾದ ವಾತಾವರಣ ಇರಬೇಕು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ.ನೌತಾಜ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ಎನ್.ಮಂಜುನಾಥ್, ಡಿ.ಕೆ.ರಾಮೇಗೌಡ, ಸಮಿತಿ ಸದಸ್ಯೆ ತ್ರಿಭುವೇನೇಶ್ವರಿ, ಲಕ್ಷ್ಮಿ, ತಾಲ್ಲೂಕು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಎ.ಜಿ.ಸುಧಾಕರ್, ಮಕ್ಕಳ ಸಹಾಯವಾಣಿ ಅಧಿಕಾರಿ ನಂದಿನಿ, ಸಬ್ ಇನ್‌ಸ್ಪೆಕ್ಟರ್ ನಾಗಮ್ಮ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರ ತಂಡ ಪೆನುಮಲೆ ಗ್ರಾಮದ ಸೌಮ್ಯ ಕೇಸಾನುಪಲ್ಲಿ ವಿದ್ಯಾರ್ಥಿನಿಲಯಕ್ಕೆ ದಾಳಿ ಮಾಡಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಎನ್.ಮಂಜುನಾಥ್ ಮಾತನಾಡಿ, ‘ಹೊರ ರಾಜ್ಯ, ಜಿಲ್ಲೆಯ ಮಕ್ಕಳು ಮಾತನಾಡುವ ಭಾಷೆ, ಸೇವಿಸುವ ಊಟ, ವಸತಿ, ಆರೋಗ್ಯ ಕಲ್ಪಿಸುವುದು ಬಾಲ ಹಕ್ಕು ಆಗಿವೆ. ಖಾಸಗಿ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳ ಪಾಲನೆ, ಪೋಷಣೆ, ರಕ್ಷಣೆ ಮಾಡಲು ಕಾನೂನು ಇವೆ. ಮೇಘಾಲಯದ ಬಾಲಕಿಯರಿಗೆ ಕನ್ನಡ ಬರುವುದಿಲ್ಲ. ಸ್ಥಳೀಯರಿಗೆ ಅವರ ಭಾಷೆ ಅರ್ಥ ಆಗುವುದಿಲ್ಲ. ಪೆನುಮಲೆಯ ವಿದ್ಯಾರ್ಥಿನಿಲಯದಲ್ಲಿ ಮಕ್ಕಳನ್ನು ಇರಿಸಿಕೊಳ್ಳಲು ಅನುಮತಿ ಪಡೆದಿಲ್ಲ. ಮಕ್ಕಳನ್ನು ಬಾಲಭವನದಲ್ಲಿ ಇರಿಸಲಾಗುವುದು. ಮೇಘಾಲಯದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗುವುದು’ ಎಂದು ತಿಳಿಸಿದರು.
ತಾಲ್ಲೂಕು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಎ.ಜಿ.ಸುಧಾಕರ್ ಮಾತನಾಡಿ, ಖಾಸಗಿ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳನ್ನು ಇರಿಸಿಕೊಳ್ಳಲು ಸರ್ಕಾರದ ಅನುಮತಿ ಇರಬೇಕು. ಸರ್ಕಾರದಿಂದ ಅನುಮತಿ ಪಡೆದಿರುವ ದಾಖಲೆ ನೀಡದೇ ಇರುವುದರಿಂದ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡಿ, ಬಾಲಭವನಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಕಸಬಾ ಕಂದಾಯ ಅಧಿಕಾರಿ ಪ್ರಶಾಂತ್, ದೇವರಗುಡಿಪಲ್ಲಿ ಗ್ರಾಮ ಆಡಳಿತಾಧಿಕಾರಿ ಸಂತೋಷ್‍ಕುಮಾರ್, ಶಿಕ್ಷಣ ಅಧಿಕಾರಿ ಪದ್ಮಾವತಿ, ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ರುದ್ರಮ್ಮ ಇದ್ದರು.
Cut-off box - ಸರ್ಕಾರದಿಂದ ಅನುಮತಿ ಪಡೆದಿಲ್ಲ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ.ನೌತಾಜ್ ಮಾತನಾಡಿ ‘ಪೆನುಮಲೆ ಗ್ರಾಮದ ಸೌಮ್ಯಕೇಸಾನುಪಲ್ಲಿ ವಿದ್ಯಾರ್ಥಿನಿಲಯದಲ್ಲಿದ್ದ ಮೇಘಾಲಯದ 25 ಬಾಲಕಿಯರನ್ನು ವಶಕ್ಕೆ ಪಡೆಯಲಾಗಿದೆ. ವಿದ್ಯಾರ್ಥಿನಿಲಯದಲ್ಲಿ ಇರಿಸಿಕೊಳ್ಳಲು ಸರ್ಕಾರದಿಂದ ಅನುಮತಿ ಪಡೆದಿಲ್ಲ. ಖಾಸಗಿ ಸಂಸ್ಥೆಗಳ ಮೂಲಕ ವಿದ್ಯಾರ್ಥಿನಿಲಯಕ್ಕೆ ಬಾಲಕಿಯರು ಬಂದಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಬಾಲಕಿಯರಿಗೆ ಕೌನ್ಸಿಲಿಂಗ್ ಮಾಡಲಾಗುವುದು. ಊಟ ವಸತಿ ಆರೋಗ್ಯ ಶಿಕ್ಷಣ ಕಲ್ಪಿಸಲಾಗುವುದು. ಮೇಘಾಲಯದ ಮಕ್ಕಳ ಕಲ್ಯಾಣ ಸಮಿತಿಗೆ ಪತ್ರ ಬರೆದು ಮಕ್ಕಳನ್ನು ವಶಕ್ಕೆ ಪಡೆದು ಪೋಷಕರಿಗೆ ಒಪ್ಪಿಸುವಂತೆ ಪತ್ರ ಬರೆಯುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.