
ಕಡತ
(ಸಾಂದರ್ಭಿಕ ಚಿತ್ರ)
ಚಿಂತಾಮಣಿ: ಚಿಮುಲ್ ಚುನಾವಣೆ ಎದುರಾಗಿದ್ದು ಚುನಾವಣೆಯ ಕಾವು ರಂಗೇರತೊಡಗಿದೆ. ಸ್ಪರ್ಧಾಕಾಂಕ್ಷಿಗಳು ಮೈಕೊಡವಿಕೊಂಡು ತೆರೆಮರೆಯಲ್ಲಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಒಕ್ಕೂಟದ ನಿರ್ದೇಶಕರ ಚುನಾವಣೆಗೆ ತಾಲ್ಲೂಕಿನಲ್ಲಿ ಒಂದು ಕ್ಷೇತ್ರವಿತ್ತು. ಈ ಬಾರಿ 2 ಕ್ಷೇತ್ರವಾಗಿದ್ದು ಆಕಾಂಕ್ಷಿಗಳ ಉತ್ಸಾಹ ಇಮ್ಮಡಿಯಾಗಿದೆ. ಕಸಬಾ ಮತ್ತು ಮುರುಗಮಲ್ಲ ಹೋಬಳಿ ಸೇರಿಸಿ ಚಿಂತಾಮಣಿ ಕ್ಷೇತ್ರ, ಕೈವಾರ, ಅಂಬಾಜಿದುರ್ಗ ಹೋಬಳಿ ಸೇರಿಸಿ ಕೈವಾರ ಕ್ಷೇತ್ರವಾಗಿದೆ. ಮುಂಗಾನಹಳ್ಳಿ, ಚಿಲಕಲನೇರ್ಪು ಹೋಬಳಿ, ಚೇಳೂರು ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ. ಚಿಂತಾಮಣಿ, ಶಿಡ್ಲಘಟ್ಟ, ಚೇಳೂರು, ಬಾಗೇಪಲ್ಲಿ ತಾಲ್ಲೂಕುಗಳನ್ನು ಸೇರಿಸಿ ಚಿಂತಾಮಣಿ ಮಹಿಳಾ ಕ್ಷೇತ್ರವನ್ನು ರೂಪಿಸಲಾಗಿದೆ.
ಚಿಂತಾಮಣಿ ತಾಲ್ಲೂಕಿನಿಂದ 2 ನಿರ್ದೇಶಕ ಸ್ಥಾನಕ್ಕೆ ಆಯ್ಕೆ ನಡೆಯಲಿದೆ. ತಾಲ್ಲೂಕಿನಲ್ಲಿ ಒಟ್ಟು 217 ಸಂಘಗಳಿವೆ. ಕರಡು ಮತದಾರರ ಪಟ್ಟಿ ಪ್ರಕಟವಾಗಿದೆ.
ಅಂತಿಮ ಮತದಾರರ ಪಟ್ಟಿ: ಕರಡು ಮತದಾರರಪಟ್ಟಿಯಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ 76 ಅರ್ಹ ಮತದಾರರು 2 ಅನರ್ಹ ಮತದಾರರು ಇದ್ದರು. ಕೈವಾರ ಕ್ಷೇತ್ರದಲ್ಲಿ 71 ಅರ್ಹ ಮತ್ತು 3 ಅನರ್ಹ ಮತದಾರರಿದ್ದರು. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಅರ್ಹ ಸಂಘಗಳು ಮತದಾರರ ಪಟ್ಟಿಗೆ ಸೇರಲು ಜನವರಿ 7 ರವರೆಗೆ ಅವಕಾಶ ನೀಡಲಾಗಿತ್ತು. ಜನವರಿ 10ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು ಮತಚಲಾಯಿಸಲು ಅರ್ಹತೆ ಪಡೆದವರ
ಸ್ಪಷ್ಟ ಚಿತ್ರಣ ಸಿಗಲಿದೆ.
ತಾಲ್ಲೂಕಿನಲ್ಲಿ ಹಿಂದಿನಿಂದಲೂ ಹಾಲು ಒಕ್ಕೂಟದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಡೆದಿದೆ. ಈ ಬಾರಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕಾಳಗ ನಡೆಯುವ ಸಾಧ್ಯತೆ ಇದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾವಣೆಯಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿ ಇದೆ.
ಕ್ಷೇತ್ರದ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅವರು ಆಯ್ಕೆ ಮಾಡುವ ವ್ಯಕ್ತಿಗಳು ಅಭ್ಯರ್ಥಿಗಳಾಗುತ್ತಾರೆ. ಎರಡು ಪಕ್ಷಗಳಿಂದ ಅವರನ್ನು ಮೀರಿ ಸ್ವತಂತ್ರವಾಗಿ ಸ್ಪರ್ಧಿಸುವ ಸಾಹಸವನ್ನು ಯಾರು ಮಾಡಲಾರರು
ಎನ್ನುವ ಪರಿಸ್ಥಿತಿ ಇದೆ.
ಚಿಂತಾಮಣಿ ಕಸಬಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವೈ.ಬಿ.ಅಶ್ವತ್ಥನಾರಾಯಣಬಾಬು ಸ್ಪರ್ಧಿಸುವುದು ಖಚಿತ. ಈಗಾಗಲೇ ಎರಡು ಅವಧಿಯ ಚುನಾವಣೆಯಲ್ಲಿ ಹಿರಿಯ ಸಹಕಾರಿ ಟಿ.ಎನ್.ರಾಜಗೋಪಾಲ್ ಅವರನ್ನು ಪರಾಭವಗೊಳಿಸಿ ನಿರ್ದೇಶಕರಾಗಿದ್ದರು. ಜೆಡಿಎಸ್‌ನಿಂದ ಅವರ ಎದುರಾಳಿ ಯಾರಾಗಬೇಕು ಎನ್ನುವ ಜಂಜಾಟ ಮುಂದುವರೆದಿದೆ ಎನ್ನಲಾಗಿದೆ.
ಕೈವಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಹೆಚ್ಚಿನ ಪೈಪೋಟಿ, ಒತ್ತಡವಿದೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ಮಾಜಿ ಸದಸ್ಯ ಶಿವಣ್ಣ, ಲಕ್ಷ್ಮಿದೇವನಕೋಟೆ ನಾಗೇಶ್, ತಳಗವಾರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮಂಜುನಾಥ್, ಜಂಗಮಶೀಗೇಹಳ್ಳಿ ಮುನಿನಾರಾಯಣಪ್ಪ ಸ್ಪರ್ಧಿಸಲು ಕಾತುರರಾಗಿದ್ದಾರೆ. ಜೆಡಿಎಸ್‌ನಿಂದ ಆವುಲಪ್ಪ, ಡಿ.ವಿ.ಗೋಪಾಲಕೃಷ್ಣ, ನಾಗರಾಜ್ ಆಕಾಂಕ್ಷಿಗಳಾಗಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.