ADVERTISEMENT

ಚಿಮುಲ್ ಚುನಾವಣೆ: ಸಚಿವ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಗೆಲುವು

ಎಂ.ರಾಮಕೃಷ್ಣಪ್ಪ
Published 7 ಫೆಬ್ರುವರಿ 2026, 5:46 IST
Last Updated 7 ಫೆಬ್ರುವರಿ 2026, 5:46 IST
ಚಿಮುಲ್
ಚಿಮುಲ್   

ಚಿಂತಾಮಣಿ: ಇತ್ತೀಚೆಗೆ ಮುಕ್ತಾಯಗೊಂಡ ಚಿಮುಲ್ ಚುನಾವಣೆಯಲ್ಲಿ ತಾಲ್ಲೂಕಿನ ಕೈವಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ, ಮೈತ್ರಿ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿರುವುದು ಕಾಂಗ್ರೆಸ್‌ನಲ್ಲಿ ದಿಗ್ಭ್ರಮೆ ಮೂಡಿಸಿದೆ.

ಈ ಗೆಲುವಿನೊಂದಿಗೆ ಜೆಡಿಎಸ್ ಹೊಸ ಉತ್ಸಾಹದಿಂದ ಪುಟಿದೇಳುವಂತಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಇದ್ದರೂ ಜೆಡಿಎಸ್–ಬಿಜೆಪಿಯ ಮೈತ್ರಿ ಅಭ್ಯರ್ಥಿ ಜಯಗಳಿಸಿರುವುದು ಅಚ್ಚರಿ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಕೈವಾರ ಕ್ಷೇತ್ರದಲ್ಲಿನ ಒಟ್ಟಾರೆ 71 ಮತಗಳ ಪೈಕಿ ಕಾಂಗ್ರೆಸ್ ಬೆಂಬಲಿತ 50 ಹಾಗೂ ಜೆಡಿಎಸ್ ಬೆಂಬಲಿತ 21 ಮತದಾರರಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ಚಿನ್ನಪ್ಪ ಜಯಗಳಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಜೆಡಿಎಸ್ ಜಯಗಳಿಸಿರುವುದು ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆಯಾಗಿದೆ. ಕಾಂಗ್ರೆಸ್‌ನ 17 ಮತದಾರರು ಮೈತ್ರಿ ಅಭ್ಯರ್ಥಿ ಪರ ಮತ ಚಲಾಯಿಸಿರುವುದು ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. 

ADVERTISEMENT

ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾಗ ನಡೆದ ಒಕ್ಕೂಟದ 2 ಚುನಾವಣೆಯಲ್ಲಿ ಸತತವಾಗಿ ಅದೇ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದ ಹಿರಿಯ ಸಹಕಾರಿ ಧುರೀಣ ಟಿ.ಎನ್.ರಾಜಗೋಪಾಲ್ ಅವರನ್ನು ಕಾಂಗ್ರೆಸ್ ಎರಡು ಬಾರಿ ಮಣಿಸಿತ್ತು. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿನ ಅಸಮಾಧಾನ, ಕ್ಷೇತ್ರದ ಮುಖಂಡರಲ್ಲಿ ಭಿನ್ನಾಭಿಪ್ರಾಯ, ಅತಿಯಾದ ಆತ್ಮವಿಶ್ವಾಸ, ಮತದಾರರ ವಿಶ್ವಾಸ ಗಳಿಸುವಲ್ಲಿ ವಿಫಲತೆ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. 

ಪಕ್ಷದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ಮಾಜಿ ಸದಸ್ಯ ಈರುಳ್ಳಿ ಶಿವಣ್ಣ, ತಳಗವಾರ ಮಂಜುನಾಥ್, ಲಕ್ಷ್ಮಿದೇವನಕೋಟೆಯ ನಾಗೇಶ್ ಪ್ರಬಲ ಆಕಾಂಕ್ಷಿಗಳಾಗಿದ್ದರು. 

ಎಸ್.ಎನ್. ಚಿನ್ನಪ್ಪ ಈಗಾಗಲೇ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಅಧ್ಯಕ್ಷರಾಗಿದ್ದರು. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು. ಆದರೆ, ಅವರೇ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ, ಈ ಬಗ್ಗೆ ಬೇಸರಗೊಂಡಿದ್ದ ಇತರ ಮುಖಂಡರು ಸಚಿವ ಡಾ.ಎಂ.ಸಿ. ಸುಧಾಕರ್ ಅವರ ಬಳಿ ಹೇಳದೆ ಮೌನ ವಹಿಸಿದ್ದರು. ಆದರೆ, ಚುನಾವಣೆಯಲ್ಲಿ ಉತ್ಸಾಹದಿಂದ ಕೆಲಸ ಮಾಡದೆ ಒಳಗೊಳಗೆ ಮೈತ್ರಿ ಅಭ್ಯರ್ಥಿಗೆ ಸಹಕಾರ ನೀಡುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಲಿಗೆ ಶ್ರಮಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಕೈವಾರದ ಮುಖಂಡ ಸುಬ್ಬಾರೆಡ್ಡಿ ಮತ್ತು ಬನಹಳ್ಳಿ ರವಿ ಗೆಲುವಿನ ಸೂತ್ರಧಾರಿಗಳು. ಬಹಳ ಚಾಣಾಕ್ಷತನದಿಂದ ಅಭ್ಯರ್ಥಿ ಒಬ್ಬರನ್ನೇ ಕಳುಹಿಸಿ ಎಲ್ಲ 70 ಮತದಾರರನ್ನು ವೈಯುಕ್ತಿಕವಾಗಿ ಭೇಟಿ ಮಾಡಿ ಮತಯಾಚನೆ ಮಾಡಿಸಿದ್ದರು. ಅವರ ಚುನಾವಣಾವ್ಯೂಹ ಮತ್ತು ತಂತ್ರಗಾರಿಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ. ಚುನಾವಣೆಯಲ್ಲಿ ಕಾಂಚಾಣ ಎರಡು ಕಡೆಯಿಂದ ಜಣಜಣಿಸಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.