
ಜೆಡಿಎಸ್, ಕಾಂಗ್ರೆಸ್
ಚಿಂತಾಮಣಿ: ಕೋಲಾರ ಹಾಲು ಒಕ್ಕೂಟದಿಂದ ಬೇರ್ಪಟ್ಟ ನಂತರ ನಡೆಯುತ್ತಿರುವ ಪ್ರಥಮ ಚಿಮುಲ್ ಚುನಾವಣೆ ಕಣ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ರಂಗೇರುತ್ತಿದೆ. ಚಿಂತಾಮಣಿಗೆ ಮೂರು ನಿರ್ದೇಶಕ ಸ್ಥಾನಗಳಿವೆ.
ಹಾಲು ಉತ್ಪಾದಕರ ಒಕ್ಕೂಟದ ಪ್ರಥಮ ಚುನಾವಣೆಯಲ್ಲಿ ಜಯಗಳಿಸಿ ಆಡಳಿತದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳ ನಾಯಕರು ನಾನಾ ತಂತ್ರ–ಪ್ರತಿತಂತ್ರಗಳನ್ನು ರೂಪಿಸುತ್ತಿದ್ದಾರೆ. ಒಕ್ಕೂಟ ಚುನಾವಣೆ ಸಹಕಾರಿ ಕ್ಷೇತ್ರದ ಚುನಾವಣೆಯಾಗಿದ್ದು ನೇರವಾಗಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸುವಂತಿಲ್ಲ. ಆದರೆ ಪರೋಕ್ಷವಾಗಿ ಪಕ್ಷದಿಂದಲೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ಸಾಮಾನ್ಯ.
ಕೋಟಗಲ್ಲು ಪಂಚಾಯಿತಿ ಹೊರತುಪಡಿಸಿ ಅಂಬಾಜಿ ದುರ್ಗ ಹೋಬಳಿಯ ಎಲ್ಲ ಪಂಚಾಯಿತಿಗಳು ಸೇರಿ ಕೈವಾರ ಕ್ಷೇತ್ರ ರಚನೆಯಾಗಿದೆ. ಕೈವಾರ ಕ್ಷೇತ್ರದಲ್ಲಿ 71 ಅರ್ಹ ಮತಗಳಿವೆ.
ಕೈವಾರ ಕ್ಷೇತ್ರದಿಂದ ಸ್ಪರ್ಧೆಗೆ ಎಸ್.ಎನ್, ಚಿನ್ನಪ್ಪ, ಮುನಿನಾರಾಯಣಪ್ಪ, ಕೆ.ಎನ್.ಆವುಲಪ್ಪ, ದೇವರಾಜ್ ನಾಮಪತ್ರ ಸಲ್ಲಿಸಿದ್ದರು. ಮುನಿನಾರಾಯಣಪ್ಪ ಮತ್ತು ದೇವರಾಜ್ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ.
ಸುಬ್ಬರಾಯನಪೇಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ ಹಾಗೂ ಕೆಂಪದೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಎನ್.ಆವಲಪ್ಪ ನಡುವೆ ನೇರ ಹಣಾಹಣಿ ಇದೆ. ಎಸ್.ಎನ್.ಚಿನ್ನಪ್ಪ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಗಿದ್ದರೆ ಕೆ.ಎನ್.ಆವಲಪ್ಪ ಎನ್.ಡಿ.ಎ ಬೆಂಬಲಿತ ಅಭ್ಯರ್ಥಿ.
ಎಸ್.ಎನ್.ಚಿನ್ನಪ್ಪ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಅನುಭವಸ್ಥ ರಾಜಕಾರಣಿ ಆಗಿದ್ದಾರೆ. ಕೆ.ಎನ್.ಆವಲಪ್ಪ ಇದೇ ಮೊದಲ ಬಾರಿ ಸ್ಫರ್ಧಿಸಿದ್ದಾರೆ. ಅವರು 30 ವರ್ಷಗಳಿಂದ ಸಂಘದ ಅಧ್ಯಕ್ಷರಾಗಿರುವುದು ವಿಶೇಷ.
ತಾಲ್ಲೂಕಿನಲ್ಲಿ ಹಿಂದಿನಿಂದಲೂ ಹಾಲು ಒಕ್ಕೂಟದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರ ನಡುವೆ ನೇರ ಹಣಾಹಣಿ ಇದೆ. ಈ ಬಾರಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕಾಳಗ ನಡೆಯುತ್ತಿದೆ. ಇಬ್ಬರೂ ಅಭ್ಯರ್ಥಿಗಳು ಕೈವಾರ ಕ್ಷೇತ್ರ ವ್ಯಾಪ್ತಿಯ ಡೆಲಿಗೇಟ್‌ಗಳನ್ನು ಭೇಟಿ ಮಾಡಿ ಮತಯಾಚಿಸುತ್ತಿದ್ದಾರೆ.
ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಿನ್ನಪ್ಪನ ಬೆನ್ನಿಗಿದ್ದರೆ, ಮಾಜಿ ಶಾಸಕ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಕೆ.ಎನ್.ಆವಲಪ್ಪನ ಬೆನ್ನಿಗೆ ನಿಂತಿದ್ದಾರೆ.
ಕೈವಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದರು. ಎಸ್.ಎನ್.ಚಿನ್ನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣ, ಲಕ್ಷ್ಮೀದೇವನಕೋಟೆ ನಾಗೇಶ್, ತಳಗವಾರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮಂಜುನಾಥ್, ಜಂಗಮಶೀಗೇಹಳ್ಳಿ ಮುನಿನಾರಾಯಣಪ್ಪ ಸ್ಪರ್ಧಿಸಲು ಕಾತುರರಾಗಿದ್ದರು. ಅಂತಿಮವಾಗಿ ಚಿನ್ನಪ್ಪ ಅಭ್ಯರ್ಥಿಯಾಗಿದ್ದಾರೆ.
ಉಳಿದ ಮುಖಂಡರು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಸಹಕಾರ ನೀಡುತ್ತಾರೆ ಎಂದು ಹೇಳುತ್ತಿದ್ದಾರೆ. ಜೆಡಿಎಸ್‌ನಿಂದ ಆವುಲಪ್ಪ, ಡಿ.ವಿ.ಗೋಪಾಲಕೃಷ್ಣ, ದೇವರಾಜ್, ನಾಗರಾಜ್ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಕೆ.ಎನ್.ಆವುಲಪ್ಪನ ಅವರಿಗೆ ಜೆಡಿಎಸ್ ನಿಶಾನೆ ತೋರಿದೆ.
ಡೇರಿಗಳ ಅಧ್ಯಕ್ಷರ ಚುನಾವಣೆಯಲ್ಲಿ ಪರೋಕ್ಷವಾಗಿ ಪಕ್ಷದ ಅಡಿಯಲ್ಲೇ ನಡೆದಿರುತ್ತದೆ. 50ಕ್ಕೂ ಹೆಚ್ಚಿನ ಡೇರಿಗಳ ಆಡಳಿತ ಮಂಡಳಿ ಕಾಂಗ್ರೆಸ್ ವಶದಲ್ಲಿರುವುದರಿಂದ ನಮಗೆ ಅನುಕೂಲಕರವಾಗಿದೆ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸುವರು. ಇದನ್ನು ಅಲ್ಲಗೆಳೆಯುವ ಜೆಡಿಎಸ್ ಮುಖಂಡರು ಕೈವಾರ ಹೋಬಳಿಯಲ್ಲಿ ಜೆಡಿಎಸ್‌ಗೆ ಹೆಚ್ಚಿನ ಬೆಂಬಲವಿದೆ. ಪರಿಸ್ಥಿತಿ ನಮಗೆ ಅನುಕೂಲಕರವಾಗಿದೆ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.