ಚಿಂತಾಮಣಿ: ಬೆಂಗಳೂರು–ಮದನಪಲ್ಲಿ ರಸ್ತೆಯ ಐಮರೆಡ್ಡಿಹಳ್ಳಿ ಬಳಿ ಭಾನುವಾರ ರಾತ್ರಿ ಕಾರು ಮೋರಿಗೆ ಡಿಕ್ಕಿ ಹೊಡೆದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಚಿಕ್ಕಜಾಲ ಸಮೀಪದ ಮಾರನಾಯಕನಹಳ್ಳಿಯ ಲಕ್ಷ್ಮೀಕಾಂತ್, ಅನಂತಕುಮಾರ್, ವೆಂಕಟೇಶ್, ಮೀನುಕುಂಟೆ ಗ್ರಾಮದ ಅಂಬರೀಶ್ ಮತ್ತು ರಾಮಚಂದ್ರ ಗಾಯಗೊಂಡವರು.
ಆಷಾಡ ಮಾಸದ ಅಂಗವಾಗಿ ನೆರೆಯ ಆಂಧ್ರಪ್ರದೇಶದ ಬಾಯಿಕೊಂಡಗೆ ಬೆಂಗಳೂರಿನಿಂದ ಕಾರಿನಲ್ಲಿ ತೆರಳಿ ಗಂಗಮ್ಮದೇವಿಯ ದರ್ಶನ ಮಾಡಿಕೊಂಡು ಬೆಂಗಳೂರಿಗೆ ವಾಪಸ್ ಹೋಗುವಾಗ ದುರ್ಘಟನೆ ನಡೆದಿದೆ.
ಐಮರೆಡ್ಡಿಹಳ್ಳಿ ಬಳಿ ಕಾರು ಮೋರಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.