ADVERTISEMENT

ಚಿಂತಾಮಣಿ | 8ನೇ ಸುತ್ತಿನಲ್ಲಿ ಶೇ100 ಗುರಿ ಸಾಧನೆ

ಕಾಲುಬಾಯಿ ರೋಗ ನಿರೋಧಕ ಲಸಿಕೆ

ಎಂ.ರಾಮಕೃಷ್ಣಪ್ಪ
Published 17 ಫೆಬ್ರುವರಿ 2026, 5:19 IST
Last Updated 17 ಫೆಬ್ರುವರಿ 2026, 5:19 IST
ಚಿಂತಾಮಣಿ ತಾಲ್ಲೂಕಿನ ಯನಮಲಪಾಡಿಯಲ್ಲಿ ಹಸುವಿಗೆ ರೋಗ ನಿರೋಧಕ ಲಸಿಕೆ ನೀಡುತ್ತಿರುವುದು.
ಚಿಂತಾಮಣಿ ತಾಲ್ಲೂಕಿನ ಯನಮಲಪಾಡಿಯಲ್ಲಿ ಹಸುವಿಗೆ ರೋಗ ನಿರೋಧಕ ಲಸಿಕೆ ನೀಡುತ್ತಿರುವುದು.   

ಚಿಂತಾಮಣಿ: ತಾಲ್ಲೂಕಿನಲ್ಲಿ ಜಾನುವಾರು ಕಾಲುಬಾಯಿ ರೋಗವನ್ನು ನಿಯಂತ್ರಿಸಲು ಪಶುವೈದ್ಯಕೀಯ ಇಲಾಖೆ ನಡೆಸಿದ ನಿರಂತರ ಲಸಿಕೆ ಅಭಿಯಾನ ಯಶಸ್ವಿಯಾಗಿದೆ. ಸದ್ಯ ರೋಗ ಹತೋಟಿಗೆ ಬಂದಿದೆ. ಇದುವರೆಗೆ 8 ಸುತ್ತುಗಳಲ್ಲಿ ಲಸಿಕೆ ನೀಡಲಾಗಿದೆ.

ನವೆಂಬರ್ 2025ಕ್ಕೆ ಮುಕ್ತಾಯವಾದ 8ನೇ ಸುತ್ತಿನಲ್ಲಿ ಶೇ100ರಷ್ಟು ಗುರಿ ಸಾಧಿಸಲಾಗಿದೆ. ತಾಲ್ಲೂಕಿನ 35,044 ಹಸು-ಎತ್ತುಗಳು ಮತ್ತು 5,045 ಎಮ್ಮೆಗಳು ಸೇರಿದಂತೆ ಒಟ್ಟು 40,089 ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಕ್ಷೀರ ಸಂಘಗಳ ಸಹಯೋಗದೊಂದಿಗೆ ಇಲಾಖೆ ಈ ಕಾರ್ಯಕ್ರಮ ನಿರ್ವಹಿಸುತ್ತಿದೆ ಎಂದು ಸಹಾಯಕ ನಿರ್ದೇಶಕ ಡಾ.ವೀರರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಲುಬಾಯಿ ರೋಗದಿಂದ ಹಾಲು ಉತ್ಪಾದನೆ ಕುಸಿತ, ಜಾನುವಾರು ಸಾವು, ದುಡಿಯುವ ಸಾಮರ್ಥ್ಯ ಕುಂಠಿತ ಸೇರಿದಂತೆ ರೈತರಿಗೆ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 2019ರಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ (NADCP) ಆರಂಭಿಸಲಾಯಿತು. 2020ರಿಂದ ಜಾರಿಯಲ್ಲಿರುವ ಈ ಯೋಜನೆಯಡಿ ವರ್ಷಕ್ಕೆ ಎರಡು ಬಾರಿ (6 ತಿಂಗಳಿಗೊಮ್ಮೆ) ಲಸಿಕೆ ನೀಡಲಾಗುತ್ತಿದೆ. ಏಪ್ರಿಲ್‌ನಿಂದ 9ನೇ ಸುತ್ತಿನ ಲಸಿಕೆ ಅಭಿಯಾನ ಆರಂಭವಾಗಲಿದೆ.

ADVERTISEMENT

ಗರ್ಭಕಟ್ಟಿದ ಮತ್ತು ರೋಗಗ್ರಸ್ತ ಜಾನುವಾರುಗಳಿಗೆ ಲಸಿಕೆ ನೀಡುವುದಿಲ್ಲ. ಲಸಿಕೆ ಹಾಕಿಸದ ರೈತರು ಸಮೀಪದ ಪಶುಚಿಕಿತ್ಸಾ ಕೇಂದ್ರ ಅಥವಾ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಸಂಪರ್ಕಿಸಬಹುದು. 6 ತಿಂಗಳು ಮೇಲ್ಪಟ್ಟ ಜಾನುವಾರು ರೋಗದಿಂದ ಮೃತಪಟ್ಟರೆ ವಿಮೆ ಇಲ್ಲದಿದ್ದಲ್ಲಿ ಸರ್ಕಾರದಿಂದ ಪರಿಹಾರ ದೊರೆಯುತ್ತದೆ. ಮರಣೋತ್ತರ ಪರೀಕ್ಷೆ ವರದಿ ಆಧಾರದಲ್ಲಿ ಇಲಾಖೆ ಪರಿಹಾರ ನೀಡಲಿದೆ.

ತಾಲ್ಲೂಕನ್ನು ‘ಕಾಲುಬಾಯಿ ರೋಗ ಮುಕ್ತ ವಲಯ'ವನ್ನಾಗಿ ಘೋಷಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ನಂದಿ ಮತ್ತು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ. ಅಧ್ಯಯನದ ಬಳಿಕ ಯೋಜನೆಯನ್ನು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ವಿಸ್ತರಿಸುವುದು ಇಲಾಖೆ ಗುರಿ ಡಾ.ವೀರರಾಜು ತಿಳಿಸಿದರು.

ಚಿಂತಾಮಣಿ ತಾಲ್ಲೂಕಿನ ಗುಟ್ಟಹಳ್ಳಿಯಲ್ಲಿ ಹಸುವಿಗೆ ರೋಗ ನಿರೋಧಕ ಲಸಿಕೆ ನೀಡುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.