ADVERTISEMENT

ಚಿಂತಾಮಣಿ | ಪ್ರಶಸ್ತಿ ತಂದುಕೊಟ್ಟ ಸಮಗ್ರ ಬೇಸಾಯ

ಕುರುಟಹಳ್ಳಿಯ ಪ್ರಗತಿಪರ ರೈತ ರಾಧಾಕೃಷ್ಣಗೆ ರಾಜ್ಯಮಟ್ಟದ ಪರಿತೋಷಕ

ಎಂ.ರಾಮಕೃಷ್ಣಪ್ಪ
Published 13 ಏಪ್ರಿಲ್ 2024, 7:22 IST
Last Updated 13 ಏಪ್ರಿಲ್ 2024, 7:22 IST
ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯ ಪ್ರಗತಿಪರ ರೈತ ಸಿ.ಆರ್.ರಾಧಾಕೃಷ್ಣ ಗುರುವಾರ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಶಸ್ತಿ ಸ್ವೀಕರಿಸಿದರು
ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯ ಪ್ರಗತಿಪರ ರೈತ ಸಿ.ಆರ್.ರಾಧಾಕೃಷ್ಣ ಗುರುವಾರ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಶಸ್ತಿ ಸ್ವೀಕರಿಸಿದರು   

ಚಿಂತಾಮಣಿ: ಸಮಗ್ರ ಮತ್ತು ಸಾವಯವ ಕೃಷಿ‌ ಮೂಲಕ ಯಶಸ್ವಿಯಾಗುವ ಜತೆಗೆ ಸೌರ ವಿದ್ಯುತ್‌ ಪ್ಯಾನಲ್‌ ಮೂಲಕ ವಿದ್ಯುತ್‌ ಉತ್ಪಾದಿಸುತ್ತಿರುವ ತಾಲ್ಲೂಕಿನ ಕುರುಟಹಳ್ಳಿಯ ಪ್ರಗತಿಪರ ರೈತ ಕುರುಟಹಳ್ಳಿಯ ಸಿ.ಆರ್.ರಾಧಾಕೃಷ್ಣ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪ್ರೊ.ಜಿ.ಕೆ.ವೀರೇಶ್ ದತ್ತಿ ನಿಧಿಯಡಿಯಲ್ಲಿ ದಕ್ಷಿಣ ಕರ್ನಾಟಕ ಭಾಗದಲ್ಲಿ 2023-24ನೇ ಸಾಲಿನ ಅತ್ಯುತ್ತಮ ಸಮಗ್ರ ಕೃಷಿ ಪದ್ಧತಿ ವಿಭಾಗದಲ್ಲಿ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಿ.ಆರ್.ರಾಧಾಕೃಷ್ಣ ಅವರಿಗೆ ಪ್ರಶಸ್ತಿ ಪತ್ರ, ₹25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ADVERTISEMENT

ಬಿ.ಎಸ್ಸಿ ಪದವೀಧರರಾದ ರಾಧಾಕೃಷ್ಣ ಬಾಲ್ಯದಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ 33 ಎಕರೆ ಜಮೀನಿನಲ್ಲಿ ಸಮಗ್ರ ಹಾಗೂ ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿದ್ದಾರೆ. ಇವರ ಜಮೀನಿನಲ್ಲಿ ರಾಗಿ, ತೊಗರಿ, ಹಿಪ್ಪುನೇರಳೆ, ಜೋಳ, ತರಕಾರಿ, ತೋಟಗಾರಿಕೆ ಬೆಳೆಗಳಾದ ಮಾವು, ತೆಂಗು, ಹುಣಸೆ, ನುಗ್ಗೆ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಅರಣ್ಯ ಕೃಷಿಯಲ್ಲಿ ಶ್ರೀಗಂಧ ಬೆಳೆಯುತ್ತಿದ್ದಾರೆ. ಜತೆಗೆ ಡೇರಿ, ಕೋಳಿ, ಕುರಿ, ಮೇಕೆ ಸಾಕಾಣಿಕೆ, ಜೇನುಕೃಷಿ, ಮೀನುಗಾರಿಕೆಯಂತಹ ಸೇರಿ ಹೈನುಗಾರಿಕೆ ಮಾಡುತ್ತಿದ್ದಾರೆ. 33 ಸಾವಿರ ಕೋಳಿ ಸಾಕಾಣಿಕೆ ಮಾಡುತ್ತಿದ್ದು, ಕೋಳಿ ಶೆಡ್ ಸ್ಥಾಪಿಸಿದ್ದಾರೆ. ಇದರ ಮೇಲ್ಚಾವಣಿಯ ಮೇಲೆ ಸೌರ ವಿದ್ಯುತ್ ಪ್ಯಾನಲ್ ಅಳವಡಿಸಿದ್ದಾರೆ. ಇದರಿಂದ ಪ್ರತಿದಿನ 4-5 ಸಾವಿರ ಯೂನಿಟ್ ವಿದ್ಯುತ್ ಉತ್ಪಾದಿಸುತ್ತಿದ್ದಾರೆ.

ಕೃಷಿ ಯಾಂತ್ರೀಕರಣದ ಪರಿಕರ ಅಳವಡಿಕೆ, ಕುಟುಂಬದ ಸದಸ್ಯರನ್ನು ಸಮರ್ಪಕವಾಗಿ ಕೃಷಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವ ಮೂಲಕ ಕಾರ್ಮಿಕರ ಮೇಲಿನ ಅವಲಂಬನೆ‌ ಕಡಿಮೆ ಮಾಡಿದ್ದಾರೆ.

ಕೇಷಿ ಬೆಳೆ ಮತ್ತು ಇತರೆ ಕೃಷಿ ಆಧಾರಿತ ಉದ್ಯಮಗಳಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೆಯಿಂದ ಕೃಷಿ ವೆಚ್ಚ ತಗ್ಗಿದೆ.  ಇದರಿಂದ ಉತ್ಪಾಶದನೆಯ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಿದೆ.

ಸಾವಯವ ಗೊಬ್ಬರವಾದ ಜೀವಾಮೃತ, ಬೀಜಾಮೃತ, ಪಂಚಗವ್ಯ, ತ್ರಾಜ್ಯ ಕೊಳೆತ ಮತ್ತು ಎರೆಹುಳು ಗೊಬ್ಬರವನ್ನು ತಯಾರಿಸಿಕೊಂಡು ಕೃಷಿಯಲ್ಲಿ ಬಳಸುತ್ತಿದ್ದಾರೆ. ಫೆರೋಮೋನ್ ಬಲೆಗಳು, ಹಳದಿ ಅಂಟುಬಲೆಗಳು, ಮಣ್ಣು ಮತ್ತು ನೀರಿನ ಸಂರಕ್ಷಣೆ ಅಳವಡಿಸಿಕೊಂಡಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರ ಹಾಗೂ ಇತರೆ ಇಲಾಖೆ ಆಯೋಜಿಸುವ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೇಡಿಯೋ ಮತ್ತು ಟಿ.ವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಾರೆ.

ಪ್ರಶಸ್ತಿ: ಇವರ ಕೃಷಿ ಮಾದರಿಯನ್ನು ಮೆಚ್ಚಿ 2014ರಲ್ಲಿ ಜಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, 2016ರಲ್ಲಿ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, 2017ರಲ್ಲಿ ಸಿ.ಬೈರೇಗೌಡ ರಾಜ್ಯಮಟ್ಟದ ಪ್ರಶಸ್ತಿ, 2018ರಲ್ಲಿ ಅತ್ಯುತ್ತಮ ಕುರಿ ರೈತ ಪ್ರಶಸ್ತಿ, 2023 ಮಿಲಿಯನೇರ್ ರೈತ ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.