
ಚಿಂತಾಮಣಿ: ತಾಲ್ಲೂಕಿನ ಕೈವಾರ ಅಂಬೇಡ್ಕರ್ ಅನುದಾನಿತ ಶಾಲೆಯಲ್ಲಿ ಇತ್ತೀಚೆಗೆ ಬಾಲ್ಯವಿವಾಹದ ದುಷ್ಪರಿಣಾಮಗಳು ಮತ್ತು ಪೋಕ್ಸೊ ಕಾಯ್ದೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ವೆಂಕಟೇಶ್ ಮಾತನಾಡಿ, ‘ಯುವಜನರು ವಿದ್ಯಾಭ್ಯಾಸದ ಕಾಲದಲ್ಲಿ ದಾರಿ ತಪ್ಪಿದರೆ ಭವಿಷ್ಯದಲ್ಲಿ ದುಃಖ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.
ಜಿಲ್ಲೆಯ ಕಾರಾಗೃಹದಲ್ಲಿ ಶೇ 70ರಷ್ಟು ಯುವಕರು ಪೋಕ್ಸೊ ಕಾಯ್ದೆ ಅಡಿ ಬಂಧಿತರಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ದುರುಪಯೋಗ ಹೆಚ್ಚಾಗುತ್ತಿದ್ದು, ಯುವಜನಾಂಗವು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಪರಿಚಯವಾಗಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳು ಬಹಳ ಜಾಗೃತಿಯಿಂದ ಇರಬೇಕು. ಬಣ್ಣದ ಮಾತು, ಗುಜರಿ ಶೋಕಿಗಳನ್ನು ನಂಬಿ ಮೋಸ ಹೋಗಬಾರದು. ತಂದೆ, ತಾಯಿ ನಿಮ್ಮ ಜೀವನವನ್ನು ರೂಪಿಸಲು ತುಂಬಾ ಕಷ್ಟ ಪಡುತ್ತಾರೆ. ಅವರಿಗೆ ಮೋಸ ಮಾಡಬಾರದು ಎಂದು ಸಲಹೆ ನೀಡಿದರು.
ವಕೀಲ ವೈಜಕೂರ್ ರಮೇಶ್ ಮಾತನಾಡಿ, ಬಾಲ್ಯವಿವಾಹ ಸಮಾಜದ ಒಂದು ಪಿಡುಗು. ಅದನ್ನು ಹೋಗಲಾಡಿಸಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ನಿಮ್ಮ ಗೆಳೆಯ, ಗೆಳತಿ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದರೆ ಮಕ್ಕಳ ಸಹಾಯವಾಣಿ 1098ಕ್ಕೆ ಉಚಿತ ಕರೆ ಮಾಡಿ ದೂರು ಸಲ್ಲಿಸಬೇಕು. ಬಡತನ, ಅನಕ್ಷರತೆ, ಮೂಢನಂಬಿಕೆ, ಗೊಡ್ಡು ಸಂಪ್ರದಾಯಗಳು ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣ. ಎಲ್ಲರೂ ಶಿಕ್ಷಣ ಪಡೆಯುವುದರಿಂದ ಇಂತಹ ಅನಿಷ್ಟಗಳನ್ನು ತೋಲಗಿಸಬಹುದು ಎಂದರು.
ಮಹಿಳಾ ಸಬಲೀಕರಣ ಜಿಲ್ಲಾ ಘಟಕದ ಲೆಕ್ಕಧಿಕಾರಿ ಬೃಂದಾ, ಆಪ್ತ ಸಮಾಲೋಚಕಿ ನಂದಿನಿ, ವಕೀಲ ಶ್ರೀನಿವಾಸ್ ಸಂಸ್ಥೆಯ ಮುಖ್ಯಸ್ಥೆ ಎಸ್.ಎಮ್. ರೋಜ, ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕರಾದ ಉಮೇಶ್, ಲೋಕೇಶಪ್ಪ, ರತ್ನ, ವಿವೇಕ್, ಧನುಷ್, ಶ್ರೀಧರ್ ಹಿರೇಮಠ, ವೆಂಕಟ್ ರತ್ನಮ್ಮ, ಮಂಜುಳಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.