ADVERTISEMENT

ಕ್ರಿಸ್‌ಮಸ್‌ ಸಂಭ್ರಮ: ಆಚರಣೆಗೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:24 IST
Last Updated 24 ಡಿಸೆಂಬರ್ 2025, 7:24 IST
ಚಿಂತಾಮಣಿಯ ಚರ್ಚ್ ನಲ್ಲಿ ಯೇಸುವಿನ ಗೋದಲಿ ಚಿತ್ರ
ಚಿಂತಾಮಣಿಯ ಚರ್ಚ್ ನಲ್ಲಿ ಯೇಸುವಿನ ಗೋದಲಿ ಚಿತ್ರ   

ಚಿಂತಾಮಣಿ: ವಿಶ್ವಕ್ಕೆ ಶಾಂತಿ, ಪ್ರೀತಿ, ವಿಶ್ವಾಸ, ಕರುಣೆ, ಪರೋಪಕಾರದ ಸಂದೇಶವ ಸಾರಿದ ಯೇಸುಕ್ರಿಸ್ತನ ಜನ್ಮ ದಿನವಾದ ಗುರುವಾರ ಕ್ರಿಸ್ಮಸ್ ಅನ್ನು ಸಡಗರ, ಸಂಭ್ರಮದಿಂದ ಆಚರಿಸಲು ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಚರ್ಚ್‌ಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.

ನಗರದ ಬಾಗೇಪಲ್ಲಿ ವೃತ್ತದಲ್ಲಿರುವ ಕ್ಯಾಥೋಲಿಕ್ ಚರ್ಚ್, ಎನ್.ಆರ್.ಬಡಾವಣೆಯ ಪ್ರೊಟಿಸ್ಟಂಟ್ ಚರ್ಚ್ ಹಾಗೂ ಕೋಲಾರ ರಸ್ತೆಯಲ್ಲಿರುವ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಚರ್ಚ್ ಹೊರಭಾಗದಲ್ಲಿ ನಕ್ಷತ್ರ ಮಾದರಿ ಆಕಾಶ ಬುಟ್ಟಿಗಳು ತೂಗಾಡುತ್ತಿವೆ. ಚರ್ಚ್‌ಗಳ ಒಳಗೆ ಹಾಗೂ ಹೊರಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಒಳಗೆ ಗೋದಲಿ ಮತ್ತು ಕ್ರಿಸ್ಮಸ್ ಟ್ರೀ ನಿರ್ಮಾಣ, ಯೇಸುವಿನ ಆರಾಧನೆ, ವಿಶೇಷ ಪ್ರಾರ್ಥನೆ ಸಲ್ಲಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ. 

ಕ್ರೈಸ್ತರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಹೊಸ ಬಟ್ಟೆ ಖರೀದಿ, ಮನೆಗಳ ಮುಂದೆ ಚಿಕ್ಕ ಚಿಕ್ಕ ಗೋದಲಿಗಳ ನಿರ್ಮಾಣವೂ ಪೂರ್ಣಗೊಂಡಿದೆ. ಬಾಲ ಯೇಸುವಿನ ಪುಟ್ಟ ಮೂರ್ತಿಯನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಲು ಅಲಂಕಾರಿಕ ಮಂಟಪಗಳನ್ನು ನಿರ್ಮಿಸಲಾಗಿದೆ. ಕೆಲವು ಮನೆಗಳಲ್ಲಿ ವಿದ್ಯುತ್ ದೀಪಗಳು, ನಕ್ಷತ್ರ, ಕ್ರಿಸ್ ಮಸ್ ಟ್ರೀ ಅಲಂಕರಿಸುವ ಸಿದ್ಧತೆಗಳು ಭರದಿಂದ ನಡೆಯುತ್ತಿದೆ.

ADVERTISEMENT

ಹಬ್ಬದ ಉಡುಗೊರೆ ಪಡೆಯಲು ಮಕ್ಕಳು ಹುಮ್ಮಸ್ಸಿನಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಪುಟ್ಟ ನಕ್ಷತ್ರದ ಆಕೃತಿಗಳು, ಕ್ರಿಸ್ಮಸ್ ಟ್ರೀ, ಬಲೂನು, ಸೇಂಟ್ ಸೇರಿ ವಿವಿಧ ರೀತಿಯ ಉಡುಗೊರೆಗಳು ಹೆಚ್ಚಾಗಿ ಮಾರಾಟವಾಗುತ್ತಿವೆ. ಬೇಕರಿಗಳಲ್ಲಿ ವಿವಿಧ ವಿನ್ಯಾಸದ ಕೇಕ್‌ಗಳು ಜನರ ಬಾಯಲ್ಲಿ ನೀರು ತರಿಸುತ್ತಿದೆ. 

ಡಿಸೆಂಬರ್ ಬಂತೆಂದರೆ ಕ್ರೈಸ್ತರ ಮನೆಗಳಲ್ಲಿ  ಸಂಭ್ರಮ ಇಮ್ಮಡಿಸುತ್ತದೆ. ಕ್ರೈಸ್ತ ಧರ್ಮದ ಸಂಪ್ರದಾಯದಂತೆ ಭಾನುವಾರಗಳಂದು ಮನೆ, ಮನೆಗಳಿಗೆ ತೆರಳಿ ಕ್ಯಾರಲ್ ಗಾಯನ ಮೂಲಕ ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಲಾಗುತ್ತದೆ. ನಂಬಿಕೆ, ನಿರೀಕ್ಷೆ, ಸಂತಸ ಮತ್ತು ಶಾಂತಿಯ ನಾಲ್ಕು ಮಂತ್ರಗಳನ್ನು ಪಠಿಸಿ ಮೊಂಬತ್ತಿ ಬೆಳಗಿ ಧರ್ಮಸಂದೇಶ ಸಾರಲಾಗಿದೆ ಎನ್ನುತ್ತಾರೆ ಧರ್ಮಗುರು ಸಿರಿಯಾಕ್.
ಡಿಸೆಂಬರ್ 25 ರಂದು ಗುರುವಾರ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವುದು, ಮುನ್ನಾ ದಿನ ಬುಧವಾರ ರಂದು ರಾತ್ರಿ "ಈವ್' ಆಚರಿಸುವುದು ಸಂಪ್ರದಾಯವಾಗಿದೆ. ಅಂದು ಕ್ರಿಸ್ಮಸ್ ಮರಕ್ಕೆ ಅಲಂಕಾರ ಮಾಡಿ ಸಂಭ್ರಮಿಸುತ್ತಾರೆ. ಚರ್ಚ್ಗಳಿಗೆ ಹೋಗಿ ವಿಶೇಷ ಪ್ರಾರ್ಥನೆ, ಕ್ಯಾರಲ್ ಗಾಯನ, ಬಲಿಪೂಜೆ ನೆರವೇರಿಸುತ್ತಾರೆ. ಕೇಕ್ ಹಂಚಿಕೆ, ಬಿಷಪ್ ಅವರಿಂದ ಧರ್ಮ ಸಂದೇಶ ಪಡೆದುಕೊಂಡು ಪರಸ್ಪರ ಹಸ್ತಲಾಘವದ ಮೂಲಕ ಹಬ್ಬದ ಶುಬಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಬಳಿಕ ಮನೆಗಳಿಗೆ ತೆರಳಿ ವಿಶೇಷ ಭೋಜನವನ್ನು ಸವಿಯುತ್ತಾರೆ. ಸ್ನೇಹಿತರು, ಸಂಬಂಧಿಕರನ್ನು ಆಹ್ವಾನಿಸುತ್ತಾರೆ ಎಂದು ಧರ್ಮಗುರುಗಳು ಹೇಳುತ್ತಾರೆ.

ಮಕ್ಕಳ ನೆಚ್ಚಿನ ಸಾಂತಾಕ್ಲಾಸ್

ಸಾಂತಾಕ್ಲಾಸ್ ಇಲ್ಲದೆ ಕ್ರಿಸ್ಮಸ್ ಹಬ್ಬದ ಸಡಗರ ಪೂರ್ಣವಾಗದು. ಮಕ್ಕಳಿಗೆ ಮಜಾ ನೀಡುವ ಬಿಳಿ ಕಡುಗೆಂಪು ಬಣ್ಣದ ವೇಷ ಧರಿಸಿ ಚೂಪು ಮೂತಿಯ ಟೋಪಿ ಹಾಕಿಕೊಂಡು ಡೊಳ್ಳು ಹೊಟ್ಟೆ ಮಾಡಿಕೊಂಡು ಬರುವ ಸಾಂತಾಕ್ಲಾಸ್ ವೇಷಧಾರಿ ಮಕ್ಕಳಿಗೆ ಮನರಂಜನೆ ಕೇಂದ್ರಬಿಂದು. ಮಕ್ಕಳಿಗೆ ಪುಟ್ಟ ಉಡುಗೊರೆ ನೀಡಿ ಆಕರ್ಷಿಸುವುದು ಮಕ್ಕಳಲ್ಲಿ ಸಂತಸ ಮೂಡಿಸುವುದು ಸಾಂತಾಕ್ಲಾಸ್ ಗುರಿ. ಕೆಲವೆಡೆ ಮಕ್ಕಳು ಸಹ ಸಾಂತಾಕ್ಲಾಸ್ ವೇಷ ಧರಿಸಿ ತಮ್ಮ ಗೆಳೆಯರು ಮತ್ತು ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡುತ್ತಾರೆ. ಕ್ಯಾಂಡಲ್ ದೀಪಾರಾಧನೆ ಕ್ರಿಸ್ ಮಸ್ ಟ್ರೀ ಅಲಂಕಾರ ಸ್ಪರ್ಧೆ ಹಾಗೂ ವಿವಿಧ ಧಾರ್ಮಿಕ ಆರಾಧನೆಗಳು ನಡೆಯಲಿವೆ ಎಂದು ಕ್ರೈಸ್ತ ಮುಖಂಡ ಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಂತಾಮಣಿಯಲ್ಲಿ ಕ್ರಿಸ್ ಮಸ್ ಅಂಗವಾಗಿ ಚರ್ಚ್ ಅಲಂಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.