ADVERTISEMENT

ಚಿಂತಾಮಣಿ | ಒತ್ತುವರಿ ತೆರವು: ಪರ, ವಿರೋಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:00 IST
Last Updated 29 ಜನವರಿ 2026, 6:00 IST
ಚಿಂತಾಮಣಿ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ಅಧಿಕಾರಿಗಳ ಪರ ಗ್ರಾಮಸ್ಥರ ಪ್ರತಿಭಟನೆ
ಚಿಂತಾಮಣಿ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ಅಧಿಕಾರಿಗಳ ಪರ ಗ್ರಾಮಸ್ಥರ ಪ್ರತಿಭಟನೆ   

ಚಿಂತಾಮಣಿ: ತಾಲ್ಲೂಕಿನ ಸೀಕಲ್ಲು ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಶೌಲಯ ತೆರವುಗೊಳಿಸಿ ಜನರ ಸಂಚಾರಕ್ಕೆ ಸಹಕಾರ ನೀಡಿದ ಅಧಿಕಾರಿಗಳ ಪರ ಹಾಗೂ ವಿರುದ್ಧ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.

‘ಅಧಿಕಾರಿಗಳು ನಾವು ಕಟ್ಟಿಕೊಂಡ ಮನೆ ಹಾಗೂ ಶೌಚಾಲಯವನ್ನು ಏಕಾಏಕಿ ತೆರವುಗೊಳಿಸಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ನ್ಯಾಯ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ’ ಸೀಕಲ್ಲು ಗ್ರಾಮದ ನರಸಿಂಹಪ್ಪ ತಿಳಿಸಿದರು. 

ಸೀಕಲ್ಲು ಗ್ರಾಮದ ನರಸಿಂಹಪ್ಪ ಒತ್ತುವರಿ ಮಾಡಿಕೊಂಡ ರಸ್ತೆಗೆ ಅಡ್ಡಲಾಗಿ ಶೌಚಾಲಯ ನಿರ್ಮಿಸಿದ್ದು, ಜನರ ಸಂಚಾರಕ್ಕೆ ತೊಂದರೆಯಾಗಿದೆ. ಶೌಚಾಲಯ ತೆರವುಗೊಳಿಸುವಂತೆ ಗ್ರಾಮಸ್ಥರು ದೂರು ನೀಡಿದ್ದರು. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳು ನರಸಿಂಹಪ್ಪಗೆ ನಾಲ್ಕು ನೋಟಿಸ್ ನೀಡಿದ್ದರು. 

ADVERTISEMENT

ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ ಶೌಚಾಲಯ ತೆರವಿಗೆ ಅಧಿಕಾರಿಗಳು ಮತ್ತು ಪೊಲೀಸರ ಬಳಿ ನರಸಿಂಹಪ್ಪ ಒಪ್ಪಿಕೊಂಡಿದ್ದರು. ಆದರೆ, ಶೌಚಾಲಯವನ್ನು ಮಾತ್ರ ತೆರವುಗೊಳಿಸಿರಲಿಲ್ಲ. ಹೀಗಾಗಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಖುದ್ದಾಗಿ ತೆರವು ಕಾರ್ಯಾಚರಣೆ ಮಾಡಿದರು. 

ಇದನ್ನು ವಿರೋಧಿಸಿ ನರಸಿಂಹಪ್ಪ ತಾಲ್ಲೂಕು ಪಂಚಾಯಿತಿ ಆವರಣದ ಬಳಿ ಅಂಬೇಡ್ಕರ್ ಭಾವಚಿತ್ರ ಇಟ್ಟು ಪ್ರತಿಭಟನೆಗೆ ನಡೆಸಿದರು.

ಗ್ರಾಮದ ಶಿವಣ್ಣ ಎಂಬುವರ ನೇತೃತ್ವದಲ್ಲಿ ಮತ್ತೊಂದು ಗುಂಪು ಅಧಿಕಾರಿಗಳ ಪರ ಪ್ರತಿಭಟನೆ ನಡೆಸಲಾಯಿತು. ಅಧಿಕಾರಿಗಳು ಕಾನೂನುಬದ್ಧವಾಗಿ ಕ್ರಮ ಕೈಗೊಂಡಿದ್ದಾರೆ. ನರಸಿಂಹಪ್ಪ ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ವಿನಾಕಾರಣ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಶಿವಣ್ಣ ಹೇಳಿದ್ದಾರೆ. 

ಅಧಿಕಾರಿಗಳ ವಿರುದ್ಧದ ಪ್ರತಿಭಟನೆಯಲ್ಲಿ ನರಸಿಂಹಪ್ಪ ಕುಟುಂಬದವರು, ಅಧಿಕಾರಿಗಳ ಪರ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಮುನಿಸ್ವಾಮಿ, ಮಂಜುನಾಥ್, ಗೋವಿಂದಪ್ಪ, ದೇವರಾಜ್, ಆನಂದಮ್ಮ, ನಂದಿನಿ, ಶಿಲ್ಪ, ಪ್ರಭ, ಸೀತಮ್ಮ, ಮಾಲತಿ, ಕವಿತಮ್ಮ ಭಾಗವಹಿಸಿದ್ದರು.

ಚಿಂತಾಮಣಿ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ಅಧಿಕಾರಿಗಳ ಧೋರಣೆ ಖಂಡಿಸಿ ಪ್ರತಿಭಟನೆ 
ನರಸಿಂಹಪ್ಪ ಕುಟುಂಬಸ್ಥರು ರಸ್ತೆಗೆ ಅಡ್ಡಲಾಗಿ ಶೌಚಾಲಯ ನಿರ್ಮಿಸಿದ್ದರು. ಈ ಸಂಬಂಧ ಅವರಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ನೋಟಿಸ್ ನೀಡಿದ್ದರು. ಆದರೆ ಅವರು ತೆರವುಗೊಳಿಸಿರಲಿಲ್ಲ
–ಆನಂದ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.