
ಚಿಂತಾಮಣಿ: ಚಿಂತಾಮಣಿಯ ಇತಿಹಾಸದಲ್ಲಿ 2025ನೇ ವರ್ಷ ಅಭಿವೃದ್ಧಿಯ ವರ್ಷವಾಗಿ ದಾಖಲಾಗುತ್ತದೆ. ಹಿಂದೆಂದೂ ಕಾಣದಂತಹ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿವೆ ಎಂದರೆ ತಪ್ಪಾಗಲಾರದು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲ. ಅಭಿವೃದ್ಧಿ ಕುಂಠಿತವಾಗಿದೆ. ಅನುದಾನ ದೊರೆಯುತ್ತಿಲ್ಲ ಎನ್ನುವ ಆರೋಪಗಳ ನಡುವೆಯೇ, ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಚಿಂತಾಮಣಿ ತಾಲ್ಲೂಕು ಅಭಿೃದ್ಧಿಗೆ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯ ವಿರೋಧಿಗಳು ಸಹ ಕ್ಷೇತ್ರದ ಅಭಿವೃದ್ಧಿಗಳ ಬಗ್ಗೆ ತಲೆದೂಗುತ್ತಿದ್ದಾರೆ.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಚಿಂತಾಮಣಿ. ವಾಣಿಜ್ಯ ನಗರಿ ಎಂದೇ ಖ್ಯಾತವಾದ ನಗರದ ಬೆಳವಣಿಗೆಗೆ ತಕ್ಕಂತೆ ಮೂಲ ಸೌಲಭ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ ಮತ್ತು ಜವಾಬ್ದಾರಿ. ಚಿಂತಾಮಣಿಯ ಬಹು ದಿನಗಳ ಬೇಡಿಕೆಯಾಗಿದ್ದ ಎಂಜನಿಯರಿಂಗ್ ಕಾಲೇಜು ಸ್ಥಾಪನೆ ಮಾಡಲಾಗಿದ್ದು, ಪ್ರಸ್ತುತ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿವೆ.
ಎಂಜನಿಯರಿಂಗ್ ಕಾಲೇಜಿನ ಕಟ್ಟಡ, ಭಕ್ತರಹಳ್ಳಿ ಅರಸನ ಕೆರೆ ವಿಸ್ತರಣೆಗೆ ₹36 ಕೋಟಿ ಯೋಜನೆ, 119 ಕೆರೆಗಳಿಗೆ ನೀರು ತುಂಬಿಸಲು ಎಚ್.ಎನ್ ವ್ಯಾಲಿಯ ₹237.10 ಕೋಟಿ ಯೋಜನೆ, ಸರ್ಕಾರಿ ಪಾಲಿಟೆಕ್ನಿಕ್‌ನ ಅಧುನಿಕ ಕಟ್ಟಡ ನಿರ್ಮಾಣಕ್ಕೆ ₹74 ಕೋಟಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಸರ್ಕಾರಿ ಮಹಿಳಾ ಕಾಲೇಜು ಕಟ್ಟಡಗಳ ಆಧುನೀಕರಣ, ಕುಡಿಯುವ ನೀರಿನ ನೈಸರ್ಗಿಕ ಮೂಲಗಳಾದ ಕನಂಪಲ್ಲಿ ಕೆರೆ, ನೆಕ್ಕುಂದಿ ಕೆರೆ ಅಭಿವೃದ್ಧಿ, ನಗರದ ಹೃದಯ ಭಾಗದಲ್ಲಿ ಸುಮಾರು ₹60–₹70 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಉನ್ನತೀಕರಣ ಹೊಸದಾಗಿ ಕ್ರಿಟಿಕಲ್ ಕೇರ್ ಘಟಕ ಆಸ್ಪತ್ರೆ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗಿವೆ.
ಅಂಬೇಡ್ಕರ್ ಭವನ ಮತ್ತು ವಾಲ್ಮೀಕಿ ಭವನದ ನಿರ್ಮಾಣ ಕಾಮಗಾರಿ, ನಗರದ ಅಜಾದಚೌಕ, ಬಾಗೇಪಲ್ಲಿ ವೃತ್ತ, ಕೋಲಾರ ವೃತ್ತದ ಅಭಿವೃದ್ಧಿ, ಬೆಂಗಳೂರು ರಸ್ತೆಯ ಓಟಿ ಕೆರೆಯಿಂದ ಪಿಸಿಆರ್ ಕಾಂಪ್ಲೆಕ್ಸ್‌ವರೆಗೆ ಪಾದಚಾರಿ ಮಾರ್ಗದ ಅಭಿವೃದ್ಧಿ ಕಾಮಗಾರಿಯು ಪ್ರಗತಿ ಹಂತದಲ್ಲಿದೆ. ನಗರದ ರಾಮಕುಂಟೆ ಪ್ರದೇಶದಲ್ಲಿ ಖಾಸಗಿ ಬಸ್ ನಿಲ್ದಾಣ, ಟ್ರಕ್ ಟರ್ಮಿನಲ್ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರಥಮವಾಗಿ ಒಳಚರಂಡಿ ವ್ಯವಸ್ಥೆ ಪ್ರಾರಂಭವಾಗಿದ್ದು ಚಿಂತಾಮಣಿಯಲ್ಲಿ. ಹೊಸ ಬಡಾವಣೆಗಳಿಗೆ ಒಳಚರಂಡಿ ವ್ಯವಸ್ಥೆ ಮತ್ತು ಕೆಲವು ಪ್ರದೆಶಗಳಲ್ಲಿ ಹಾಳಾಗಿರುವ ಒಳಚರಂಡಿ ದುರಸ್ತಿಗಾಗಿ ₹52 ಕೋಟಿ ಯೋಜನೆಯ ಕಾಮಗಾರಿಯು ಇದೇ ವರ್ಷ ಆರಂಭವಾಗಿದೆ. ಲೋಕೋಪಯೋಗಿ ಕಚೇರಿ ಮುಂಭಾಗದಲ್ಲಿ ₹8 ಕೋಟಿ ವೆಚ್ಚದಲ್ಲಿ ನೂತನ ಕ್ರಿಕೆಟ್ ಕ್ರೀಡಾಂಗಣ ಮಂಜೂರಾಗಿದೆ. ನಗರದ ಡಿಸಿಸಿ ಬ್ಯಾಂಕಿನ ಬಳಿ ಒಳಾಂಗಣ ಕ್ರೀಡಾಂಗಳ ನಿರ್ಮಾಣದ ಪ್ರಕ್ರಿಯೆ ಚಾಲನೆಯಲ್ಲಿದೆ. ಹೀಗೆ 2025ನೇ ಸಾಲಿನ ವರ್ಷವು ಚಿಂತಾಮಣಿಯ ಅಭಿವೃದ್ಧಿ ಪರ್ವವಾಗಿದೆ.
ಜನವರಿ ತಿಂಗಳಿನಲ್ಲಿ ತಾಲ್ಲೂಕಿನ ಗಡಿಗವಾರಹಳ್ಳಿ ಗ್ರಾಮದ ನಿವಾಸಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕಾಮ್ರೇಡ್ ಜಿ.ಸಿ ಬಯ್ಯಾರೆಡ್ಡಿ ನಿಧನ.
ಫೆಬ್ರವರಿಯಲ್ಲಿ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ₹149.75 ಕೋಟಿ ಮಂಜೂರು ಆಗಿದ್ದು, ಕಾಮಗಾರಿ ನಡೆಯುತ್ತಿದೆ. ಚಿಂತಾಮಣಿಗೆ ಪ್ರವೇಶ ಪಡೆಯುವ ಸ್ವಾಗತ ಕಮಾನು ಬಳಿಯ ಗುಡ್ಡದ ಮೇಲೆ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ ನಿರ್ಮಾಣವಾಗುತ್ತಿದೆ. ಗುಡ್ಡದ ಮೇಲೆ ವಾಹನಗಳು ಸಂಚರಿಸುವುದಕ್ಕೆ ರಸ್ತೆ ಮತ್ತಿತರ ಆರಂಭಿಕ ಕೆಲಸಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸುಮಾರು ₹20 ಕೋಟಿ ಅನುದಾನ ಬಂದಿದೆ.
ಸುಮಾರು 12.5 ಎಕರೆಯಲ್ಲಿ ಎಂಜನಿಯರಿಂಗ್ ಕಾಲೇಜಿನ ಕಟ್ಟಡವನ್ನು ಅತ್ಯಾಧುನಿಕ ಕಾರ್ಪೋರೇಟ್ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳು, ಆಡಿಟೋರಿಯಂ ಮತ್ತಿತರ ಎಲ್ಲ ಸೌಲಭ್ಯಗಳುಳ್ಳ ಸುಸಜ್ಜಿತ ಕಟ್ಟಡವು ಚಿಂತಾಮಣಿಗೆ ಮುಕುಟಪ್ರಾಯವಾಗುವ ನಿರೀಕ್ಷೆಯಿದೆ.
ಕಾಲೇಜು ಕಟ್ಟಡದ ಹಿಂಭಾಗದಲ್ಲಿ ಪ್ರವಾಸಿ ಮಂದಿರ, ಗ್ರಾಮಾಂತರ ವಿಭಾಗದ ಬೆಸ್ಕಾಂ ಕಚೇರಿ, ವಿವಿಧ ಸಂಘ ಸಂಸ್ಥೆಗಳಿಗೆ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ನಿವೇಶನ ಮಂಜೂರು ಮಾಡಲಾಗಿದೆ.
ಅಂಬೇಡ್ಕರ್ ಭವನ ಕಾಮಗಾರಿಗೆ ಅಂದಿನ ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ಕೃಷ್ಣಾರೆಡ್ಡಿ 2015ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. 7-8 ವರ್ಷಗಳ ಬಳಿಕ ಇದೀಗ ಭವನವನ್ನು ₹18 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಏಪ್ರಿಲ್‌ನಲ್ಲಿ ಉದ್ಘಾಟನೆಗೊಳ್ಳಲಿದೆ.
ಆಗಸ್ಟ್‌ನಲ್ಲಿ ಕೈವಾರದ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸಂಪುಟ ಅನುಮೋದನೆ ನೀಡಿತು. 26 ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಪಿ.ಎಲ್.ಡಿ ಬ್ಯಾಂಕ್ ಪುನಶ್ಚೇತನಗೊಳಿಸಲಾಯಿತು. ಈ ಮೂಲಕ ರೈತರಿಗೆ ಮಧ್ಯಮಾವಧಿ, ದೀರ್ಘಾವಧಿ ಸಾಲ ಸೌಲಭ್ಯ ಮತ್ತು ಸಾಲಮನ್ನಾ ಸೌಲಭ್ಯಗಳು ರೈತರಿಗೆ ಸಿಕ್ಕವು.
ಅಕ್ಟೋಬರ್‌ನಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬುರುಡಗುಂಟೆ ಬಳಿ ಶಾಲಾವಾಹನ ದ್ವಿಚಕ್ರವಾಹಕ್ಕೆ ಡಿಕ್ಕಿ ಹೊಡೆದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದ ಕಹಿಘಟನೆ ನಡೆದಿತ್ತು. ಪಿಯುಸಿ ಶೈಕ್ಷಣಿಕ ಚಟುವಟಿಕೆಗಳ ಸಂಗ್ರಹಕ್ಕೆ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು.
ನವೆಂಬರ್‌ನಲ್ಲಿ ನಗರಸಭೆ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯ, ಆಡಳಿತಾಧಿಕಾರಿ ನೇಮಕ. ಕ್ಷೇತ್ರದ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿ ನೇಮಕ. ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಗೆ ಭೂಮಿಶೆಟ್ಟಿಹಳ್ಳಿಯ ಆದರ್ಶಶಾಲೆ ಆಯ್ಕೆ.
ಡಿಸೆಂಬರ್ ತಿಂಗಳಿನಲ್ಲಿ ತಾಲ್ಲೂಕಿನಾದ್ಯಂತ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿತ್ತು.
ಪ್ರಮುಖ ತೀರ್ಮಾನಗಳಿಗೆ ಸಂಪುಟ ಅಸ್ತು
ಮಾರ್ಚ್‌ನಲ್ಲಿ ಜಾನುವಾರು ಗಣತಿ ಆಕ್ಟೋಬರ್‌ನಲ್ಲಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಜೂನ್ ತಿಂಗಳಿನಲ್ಲಿ ನಂದಿಗಿರಿಧಾಮದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಎಚ್.ಎನ್. ವ್ಯಾಲಿಯಿಂದ 119 ಕೆರೆಗಳಿಗೆ ನೀರು ತುಂಬಿಸಲು ₹237 ಕೋಟಿ ಮೀಸಲಿಡಲು ಅನುಮೋದನೆ ನೀಡಿತು. ಭಕ್ತರಹಳ್ಳಿ ಅರಸನ ಕೆರೆ ಬಳಿ ₹36 ಕೋಟಿ ವೆಚ್ಚದಲ್ಲಿ ನೂತನ ಕೆರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. ಕೈವಾರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಸಚಿವಸಂಪುಟ ಅನುಮೋದಿಸಿತು.
ಹಂದಿಜ್ವರ ಪತ್ತೆ
ತಾಲ್ಲೂಕಿನ ಹೆಬ್ಬರಿ ಗ್ರಾಮದಲ್ಲಿ ಹಂದಿಜ್ವರ ಪತ್ತೆಯಾಗಿತ್ತು. ಪಶುಸಂಗೋಪನಾ ಇಲಾಖೆಯ ವೈದ್ಯರು ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರೊಬ್ಬರು ಶೆಡ್‌ನಲ್ಲಿ ಸಾಕಿದ್ದ ನೂರಾರು ಹಂದಿಗಳನ್ನು ಕೊಂದುಹಾಕಿದ್ದನ್ನು ಪತ್ತೆ ಹಚ್ಚಿದ್ದರು. ಜೊತೆಗೆ ಸತ್ತ ಹಂದಿಗಳನ್ನು ಕೆರೆಗೆ ಹಾಕಿದ್ದರಿಂದ ಅಧಿಕಾರಿಗಳು ಕೆರೆಯನ್ನು ಸ್ವಚ್ಛಗೊಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.