ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಪಂಚಾಯಿತಿಯ ರಂಗೇನಹಳ್ಳಿ ಗ್ರಾಮದಲ್ಲಿ ಪುರಾತನ ಕಾಲದಿಂದ ಇದ್ದ ಸ್ಮಶಾನವನ್ನು ಒತ್ತುವರಿ ಮಾಡಿ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡದಿರುವುದನ್ನು ಖಂಡಿಸಿ ರಸ್ತೆಯಲ್ಲಿ ಶವವಿಟ್ಟು ನಡೆಸುತ್ತಿದ್ದ ಶನಿವಾರ ಪ್ರತಿಭಟನೆ ಅಂತ್ಯಗೊಂಡಿದೆ.
ಗ್ರಾಮದ ಸರ್ವೆ ನಂ 8ರಲ್ಲಿ ಸ್ಮಶಾನವಿದೆ. ಇತ್ತೀಚೆಗೆ ಕೆಲವು ವ್ಯಕ್ತಿಗಳು ಸ್ಮಶಾನ ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ಮೃತಪಟ್ಟಾಗ ಅಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಮದಲ್ಲಿ ಕೊಂಡಪ್ಪ (60) ಎಂಬುವರು ಶುಕ್ರವಾರ ಮೃತಪಟ್ಟಿದ್ದು ಅವರ ಅಂತ್ಯಕ್ರಿಯೆ ನಡೆಸಲು ಜಮೀನಿನಲ್ಲಿ ಗುಣಿ ತೋಡಲು ಹೋದಾಗ ಅಡ್ಡಿಪಡಿಸಿದರು. ಎರಡು ಗುಂಪಿನವರಿಗೂ ವಾಗ್ವಾದ ನಡೆದಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಭೂ ಮಾಪನ ಇಲಾಖೆ ಅಧಿಕಾರಿಗಳು ಪೊಲೀಸರ ಬಂದೋಬಸ್ತ್‌ನಲ್ಲಿ ಸ್ಥಳಕ್ಕೆ ಬಂದು ಸ್ಮಶಾನ ಜಾಗ ಗುರುತಿಸಿ ಕೊಡಲು ಸರ್ವೆ ಕಾರ್ಯ ನಡೆಸಿದರು.
ತಹಶೀಲ್ದಾರ್ ಮತ್ತು ಡಿವೈಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಪ್ರಕಾರ ಸರ್ವೆ ನಂ 8 ಹಿಡುವಳಿ ಜಮೀನಾಗಿದೆ. ಅದರ ಪಕ್ಕದಲ್ಲಿರುವ ಸರ್ಕಾರಿ ಜಮೀನಿನಲ್ಲಿ 10 ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ. ಅಲ್ಲಿ ಅಂತ್ಯಕ್ರಿಯೆ ಎಂದು ಸಮಾಧಾನಪಡಿಸಿದರು. ಪ್ರತಿಭಟನಾಕಾರರು ಅಸಮ್ಮತಿ ಸೂಚಿಸಿದರು. ಕೊನೆಗೆ ಮೃತರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಮೃತರ ಕುಟುಂಬಸ್ಥ ಚಲಪತಿ, ಹರೀಶ್ ಮಾತನಾಡಿ, ಅಧಿಕಾರಿಗಳು ಸೂಕ್ತ ರೀತಿಯಲ್ಲಿ ನ್ಯಾಯ ಕೊಡಿಸದೆ ಇರುವ ಹಿನ್ನೆಲೆಯಲ್ಲಿ ಸ್ಮಶಾನಕ್ಕಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ. ಹೋರಾಟವನ್ನು ಕಾನೂನು ಬದ್ಧವಾಗಿ ಮುಂದುವರಿಸುತ್ತೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.