ಚಿಂತಾಮಣಿ: ತಾಲ್ಲೂಕಿನ ಗ್ರಾಮ ಅಡಳಿತಾಧಿಕಾರಿಗಳು ಹಲವು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಗುರುವಾರ ತಾಲ್ಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ತಾಲ್ಲೂಕಿನ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿ ನಗರದ ಪ್ರವಾಸಿ ಮಂದಿರದಲ್ಲಿ ಜಮಾವಣೆಗೊಂಡರು. ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.
ಮೊಬೈಲ್ ಆ್ಯಪ್ ಮೂಲಕ ಏಕ ಕಾಲದಲ್ಲಿ ಪ್ರಗತಿ ಸಾಧಿಸಲು ಒತ್ತಡ ಹೇರುತ್ತಿರುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ವ್ಯತಿರಿಕ್ತ ಪರಿಣಾಮ ಬೀರಲಿದೆ. ವೃತ್ತಕ್ಕೆ ಒಂದರಂತೆ ಮೊಬೈಲ್, ಲ್ಯಾಪ್ ಟಾಪ್, ಪ್ರಿಂಟರ್, ಇಂಟರ್ ನೆಟ್ ಸೌಲಭ್ಯ ನೀಡುವವರೆಗೆ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗುರ್ ಹುಕುಂ, ಹಕ್ಕುಪತ್ರ, ನಮೂನೆ 1-5 ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆ್ಯಪ್ ತಂತ್ರಾಂಶ ಕೆಲಸ ಮುಷ್ಕರ ಮುಗಿಯುವವರೆಗೂ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.
ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಮ ಆಡಳಿತಾಧಿಕಾರಿಗಳು ಸುಮಾರು 30 ವರ್ಷಗಳಿಂದ ಪದೋನ್ನತಿಯಲ್ಲಿ ವಂಚಿತರಾಗಿದ್ದಾರೆ. ರಾಜ್ಯದಲ್ಲಿನ 1196 ಗ್ರೇಡ್-1 ಗ್ರಾಮ ಪಂಚಾಯತ್ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್ 1 ಆಡಳಿತಾಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ರಾಜಸ್ವ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಗ್ರೇಡ್-1 ಗ್ರಾಮ ಆಡಳಿತಾಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸಿ ಪದೋನ್ನತಿ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯನ್ನು ಜಿಲ್ಲಾ ಮಟ್ಟದಲ್ಲಿ ಮಾತ್ರ ವರ್ಗಾವಣೆಗೆ ಅವಕಾಶವಿದೆ. ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಜೇಷ್ಠತಾ ಪಟ್ಟಿ ತಯಾರಿಸಿ ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಪ್ರಯಾಣ ಭತ್ಯೆ ದರ ₹500ರಿಂದ ₹3ಸಾವಿರಕ್ಕೆ ಏರಿಸಬೇಕು. ಕೆಲಸದ ಅವಧಿ ಮುನ್ನ ಮತ್ತು ಕೆಲಸದ ಅವಧಿ ಮುಕ್ತಾಯ ನಂತರ ನಡೆಸಲಾಗುವ ಎಲ್ಲ ಬಗೆ ವರ್ಚುಯಲ್ ಸಭೆ ಕಡ್ಡಾಯವಾಗಿ ನಿಷೇಧಿಸಬೇಕು ಆಗ್ರಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.