ಚಿಂತಾಮಣಿ: ಜಿಲ್ಲೆಯ ಮಾವು ಬೆಳೆಗಾರರ ಅನುಕೂಲಕ್ಕಾಗಿ ನಗರ ಹೊರವಲಯದ ಬೂರಗಮಾಕಲಹಳ್ಳಿಯಲ್ಲಿ ಸ್ಥಾಪಿಸಿರುವ ಮಾವು ಕೋಯ್ಲೋತ್ತರ ಅಭಿವೃದ್ಧಿ ಕೇಂದ್ರಕ್ಕೆ ಗ್ರಹಣ ಬಡಿದಿದೆ.
ಸರ್ಕಾರ ಮತ್ತು ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ನಿರ್ಲಕ್ಷ್ಯದಿಂದ ಇಲ್ಲಿ ಚಟುವಟಿಕೆಯೇ ಸ್ಥಬ್ತವಾಗಿದೆ. ಬೂರಗಮಾಕಲಹಳ್ಳಿಯ ಬಳಿ ₹ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕೇಂದ್ರದಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆಯಿಂದ ಬಹುತೇಕ ಚಟುವಟಿಕೆಗಳು ಸ್ಥಗಿತವಾಗಿವೆ.
2 ಎಕರೆಯಲ್ಲಿ ತರಬೇತಿ ಕೇಂದ್ರ, ಅಧಿಕಾರಿಗಳ ಕೊಠಡಿಗಳು, ಪ್ರಾತ್ಯಕ್ಷಿಕೆ ಕೇಂದ್ರ, ಮಾವಿನ ಗ್ರೇಡಿಂಗ್ ಕೇಂದ್ರ, ಮಾಗಿಸುವ ಘಟಕ, ಬೇರೆ ಬೇರೆ ಜಿಲ್ಲೆಗಳಿಂದ ರೈತರು ಉಳಿದುಕೊಳ್ಳಲು 50 ಜನರಿಗೆ ವಸತಿ ಸೌಲಭ್ಯ, ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ವಿಶ್ರಾಂತಿ ಗೃಹ ಸೇರಿದಂತೆ ಸುಸಜ್ಜಿತ ಕಟ್ಟಡವಿದೆ. ಕಟ್ಟಡದ ಬಹುತೇಕ ಭಾಗ ಚಟುವಟಿಕೆರಹಿತವಾಗಿದೆ.
ರಾಜ್ಯದಲ್ಲಿ 1.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಅದರಲ್ಲಿ ಶೇ 40 ರಷ್ಟು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೊಡುಗೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಂತಾಮಣಿ ಹಾಗೂ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕು ಪ್ರಥಮ ಸ್ಥಾನದಲ್ಲಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರದೇಶ 15,778 ಹೆಕ್ಟೇರ್ ಇದೆ. ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿಯೇ 7,947 ಹೆಕ್ಟೇರ್ ಪ್ರದೇಶವಿದೆ. ಈ ಎಲ್ಲ ಕಾರಣದಿಂದ ಜಿಲ್ಲೆಯ ಮಾವು ಬೆಳೆಗಾರರಿಗೆ ಅನುಕೂಲವಾಗಲಿ ಎಂದು ಮಾವು ಕೋಯ್ಲೋತ್ತರ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗಿದೆ.
ಜಿಲ್ಲೆಯಲ್ಲಿ ಮಾವಿನ ಹಂಗಾಮು ಆರಂಭವಾಗಿದೆ. ಮಾವಿನ ವಿವಿಧ ತಳಿಗಳ ಕೊಯ್ಲು ನಡೆಯುತ್ತಿದೆ. ಮಾವು ಕೊಯ್ಲು, ಹಣ್ಣಿನ ಸ್ವಚ್ಛತೆ, ಬಿಸಿನೀರಿನ ಉಪಚಾರ, ಮಾಗಿಸುವುದು, ಪ್ಯಾಕ್ ಮಾಡುವುದು, ರಫ್ತು, ಜತೆಗೆ ಬೆಳೆಗಾರರಿಗೆ ಗಿಡದ ನಾಟಿಯಿಂದ ಹಣ್ಣು ಬಿಡುವವರೆಗೂ ಋತುವಿಗೆ ತಕ್ಕಂತೆ ವಾರಕ್ಕೆ ಒಂದು ತರಬೇತಿ ನೀಡವುದು ಕೇಂದ್ರದ ಪ್ರಮುಖ ಕೆಲಸವಾಗಿದೆ. ಆದರೆ ಸಿಬ್ಬಂದಿಯ ಕೊರತೆಯಿಂದ ಕೇಂದ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆಗಳು ನಡೆಯುತ್ತಿಲ್ಲ.
ಕೇಂದ್ರದಲ್ಲಿ ಮಾವಿನ ಜತೆಗೆ ವರ್ಷದ ಎಲ್ಲ ಕಾಲದಲ್ಲೂ ವಿವಿಧ ತರಕಾರಿಗಳನ್ನು ಸಹ ರಫ್ತು ಮಾಡಲಾಗುತ್ತಿದೆ. 2024 ರ ಡಿಸೆಂಬರ್ ನಿಂದ 2025 ರ ಏಪ್ರಿಲ್ 22 ರವರೆಗೆ 191 ಟನ್ ತರಕಾರಿ ಮತ್ತು ಸೊಪ್ಪನ್ನು ಹೊರ ದೇಶಗಳಿಗೆ ಕಳುಹಿಸಲಾಗಿದೆ. ತರಕಾರಿಯಲ್ಲೂ ಗುಣಮಟ್ಟವನ್ನು ಕಾಯ್ದುಕೊಂಡು ಸ್ವಚ್ಛಗೊಳಿಸಿ ಬೇಡಿಕೆಗೆ ತಕ್ಕಂತೆ ಪ್ಯಾಕ್ ಮಾಡಿ ಕಳುಹಿಸಲಾಗುತ್ತದೆ.
ಕೇಂದ್ರದಿಂದ ಈ ವರ್ಷ ಏಪ್ರಿಲ್‌ನಲ್ಲಿ 104 ಟನ್ ಮಾವನ್ನು ಅಮೆರಿಕ, ಜರ್ಮನಿ, ಬ್ರಿಟನ್‌ಗೆ ರಫ್ತು ಮಾಡಲಾಗಿದೆ. ನೇರವಾಗಿ ಕೇಂದ್ರ ರಫ್ತು ಮಾಡುವುದಿಲ್ಲ. ಟೆಂಡರ್ ಮೂಲಕ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಮಾವು ಕೋಯ್ಲೋತ್ತರ ಅಭಿವೃದ್ಧಿ ಕೇಂದ್ರಕ್ಕೆ ಅಪೆಡಾ ಮತ್ತು ಎನ್.ಪಿ.ಪಿ.ಓ ನಿಂದ ಮಾನ್ಯತೆ ಇದೆ.
ಅಪೆಡಾ ನೋಂದಾಯಿತ ರೈತರಿಂದ ಮಾವು ಖರೀದಿಸುತ್ತದೆ. ಹಣ್ಣನ್ನು ಸ್ವಲ್ಪ ತೊಟ ಇರುವಂತೆ ಕಟ್ ಮಾಡಿ ಕ್ರೇಟ್ ಗಳಲ್ಲಿ ತರಬೇಕು. ಮಾವು ಅಭಿವೃದ್ಧಿ ಕೇಂದ್ರದಲ್ಲಿ ಗಾತ್ರ ಮತ್ತು ಗುಣಮಟ್ಟದ ಗ್ರೇಡಿಂಗ್ ಮಾಡಲಾಗುತ್ತದೆ. ಕೇಂದ್ರದಲ್ಲಿ ಸ್ವಚ್ಛಗೊಳಿಸಲಾಗುತ್ತದೆ. 48 ಡಿಗ್ರಿ ಸೆಲ್ಷಿಯಸ್‌ನಲ್ಲಿ ಒಂದು ಗಂಟೆ ಬಿಸಿ ನೀರಿನ ಉಪಚಾರ ಘಟಕದಲ್ಲಿ ಇಡಲಾಗುತ್ತದೆ. ಮತ್ತೆ ಸಾಮಾನ್ಯ ಸ್ಥಿತಿಗೆ ಬರಲು ಪ್ರೀ ಕೂಲಿಂಗ್ ನಲ್ಲಿ ಇರಿಸಲಾಗುತ್ತದೆ.
ಇಥಲೀನ್ ಬಳಸಿ ಮಾಗಿಸಲಾಗುತ್ತದೆ. ಮೂರು ದಿನಗಳ ಕಾಲ ಅಲ್ಲೇ ಬಿಡಲಾಗುತ್ತದೆ. ನಂತರ ಬೇಡಿಕೆ ಅನುಗುಣವಾಗಿ ಬಾಕ್ಸ್ ಗಳಲ್ಲಿ ಹೊರ ದೇಶಗಳ ಪ್ರಕೃತಿಗೆ ತಕ್ಕಂತೆ ಕಾಯಿ, ಹಣ್ಣುಗಳನ್ನು ಪ್ಯಾಕ್ ಮಾಡಿಕೊಡಲಾಗುತ್ತದೆ. ಇಲ್ಲಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗುತ್ತದೆ. ಕನಿಷ್ಠ ಶುಲ್ಕವನ್ನು ನಿಗಧಿಪಡಿಸಲಾಗಿದೆ. ಗುಣಮಟ್ಟಕ್ಕೆ ಪ್ರಾಧಾನ್ಯ ಹಾಗೂ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಕೇಂದ್ರದ ಸಹಾಯಕ ನಿರ್ದೇಶಕಿ ರಮಾದೇವಿ ತಿಳಿಸಿದರು.
ಕೇಂದ್ರವು ಮಾವಿನ ಚಿಗುರು, ಪೀಚು, ಕಾಯಿಯವರೆಗೂ ಬರುವ ರೋಗಗಳು ಮತ್ತು ಅವುಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೈತರ ತೋಟಗಳಲ್ಲೇ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಬೇಕು. ತೋಟಗಳಿಗೂ ತೆರಳಿ ಕಟಾವು ಮಾಡುವ ಬಗ್ಗೆ ತರಬೇತಿ ನೀಡುವುದು ಕೇಂದ್ರದ ಉದ್ದೇಶ. ರೈತರ ಎಲ್ಲ ಬೆಳೆಗಳಿಗೆ ವಸತಿಸಹಿತ ತರಬೇತಿ ನೀಡಲು ಅನುಕೂಲ ಒದಗಿಸಲಾಗಿದೆ. ಸಿಬ್ಬಂದಿಯ ಕೊರತೆಯಿಂದ ಯಾವುದೇ ತರಬೇತಿ ನಡೆಯುತ್ತಿಲ್ಲ ಎಂದು ರೈತರು ದೂರುತ್ತಾರೆ.
ಬಹುರಾಷ್ಟ್ರೀಯ ಕಂಪನಿಗಳ ಜತೆ ಸಭೆಗಳನ್ನು ನಡೆಸಲಾಗಿದೆ. ಅವರು ರೈತರ ತೋಟಗಳಿಗೆ ತೆರಳಿ ನೇರವಾಗಿ ಮಾವು ಖರೀದಿಸುವರು. ಆನ್ ಲೈನ್ ಮಾರಾಟಕ್ಕೆ ರೈತರಿಗೆ ನೇರ ಲಿಂಕ್ ಒದಗಿಸಲಾಗುವುದು. ನೋಂದಣಿ ಮಾಡಿಕೊಂಡ ರೈತರಿಗೆ ಬೆಂಗಳೂರಿನ ವಿವಿಧ ಅಪಾರ್ಟ್ ಮೆಂಟ್ ಗಳೊಂದಿಗೆ ಹಾಗೂ ಅಂಚೆಕಚೇರಿಯ ಮೂಲಕ ದಲ್ಲಾಳಿಗಳ ಕಾಟವಿಲ್ಲದೆ ಗ್ರಾಹಕರಿಗೆ ಮಾರಾಟ ಮಾಡಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಶೇ 60ರಷ್ಟು ಇಳುವರಿ ನಿರೀಕ್ಷೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೊಯ್ಲಿಗೆ ಬಂದಿಲ್ಲ. ಮೇ 15 ರ ನಂತರ ಜಿಲ್ಲೆಯ ಮಾವು ಮಾರುಕಟ್ಟೆಗೆ ಬರಲಿದೆ. ಈ ವರ್ಷ ಶೇ 50-60 ರಷ್ಟು ಇಳುವರಿ ನಿರೀಕ್ಷಿಸಲಾಗಿದೆ.ಎಂ.ಗಾಯತ್ರಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ
ಮಾವು ಅಭಿವೃದ್ಧಿ ಕೇಂದ್ರದಿಂದ ಬೆಳೆಗಾರರಿಗೆ ಸಹಾಯವಾಗುತ್ತಿಲ್ಲ. ಕೇಂದ್ರ ಸ್ಥಾಪನೆಯ ಉದ್ದೇಶ ಈಡೇರಿಲ್ಲ. ಸಿಬ್ಬಂದಿ ಕೊರತೆಯಿಂದ ರೈತರಿಗೆ ಯಾವುದೇ ಮಾಹಿತಿ ದೊರೆಯುತ್ತಿಲ್ಲ. ಕಾಟಾಚಾರಕ್ಕೆ ಯಾವು ದೋ ಒಂದು ದಿನ ತರಬೇತಿ ಮಾಡಿ ದಾಖಲೆ ಮಾಡಿಕೊಳ್ಳುತ್ತಾರೆ.
ರಮಣಾರೆಡ್ಡಿ, ಮಾವು ಬೆಳೆಗಾರ ಸೀಕಲ್
ಮಾವು ಬೆಳೆಗಾರರಿಗೆ ಅನುಕೂಲವಾದ ಕೇಂದ್ರವನ್ನು ಸ್ಥಗಿತಗೊಳಿಸಿ, ತೋಟಗಾರಿಕೆ ಇಲಾಖೆಯ ವಶಕ್ಕೆ ನೀಡಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ. ಅದು ನಿಜವಾದರೆ ಹೋರಾಟ ಅನಿವಾರ್ಯ. ಮಾವು ಬೆಳೆಗಾರರಿಗಾಗಿಯೇ ಸ್ಥಾಪಿಸಲಾಗಿರುವ ಕೇಂದ್ರವನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು. ಕೇಂದ್ರಕ್ಕೆ ಅಗತ್ಯ ಅಧಿಕಾರಿಗಳನ್ನು ನೇಮಿಸಿ ಎಲ್ಲ ಯೋಜನೆಗಳನ್ನು ಪುನರ್ ಆರಂಭಿಸಬೇಕು.
ರಘುನಾಥರೆಡ್ಡಿ, ರೈತ ಮುಖಂಡ
ಮಾವು ಅಭಿವೃದ್ಧಿ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆಯ ಇಬ್ಬರು ಸಹಾಯಕ ನಿರ್ದೇಶಕರನ್ನು ಹೊರತುಪಡಿಸಿ ಎಲ್ಲ ಹುದ್ದೆಗಳು ಖಾಲಿ ಇವೆ. ಉಪನಿರ್ದೇಶಕರ ಹುದ್ದೆ ಖಾಲಿ ಇದೆ. ಸಹಾಯಕ ತೋಟಗಾರಿಕೆ ಅಧಿಕಾರಿಯ ಎರಡು ಹುದ್ದೆ, ವ್ಯವಸ್ಥಾಪಕರು, ಪ್ರಥಮ ದರ್ಜೆ ಸಹಾಯಕ, ತೋಟಗಾರಿಕೆ ಸಹಾಯಕ, ತೋಟದ ಕೆಲಸಗಾರರ ತಲಾ ಒಂದು ಹುದ್ದೆ ಖಾಲಿ ಇವೆ. ಹೊರಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್, ಕಾವಲುಗಾರ, ತೋಟದ ಕೆಲಸಕ್ಕೆ ತಲಾ ಒಬ್ಬರನ್ನು ನೇಮಿಸಿಕೊಳ್ಳಲಾಗಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೊಯ್ಲಿಗೆ ಬಂದಿಲ್ಲ. ಮೇ 15 ರ ನಂತರ ಜಿಲ್ಲೆಯ ಮಾವು ಮಾರುಕಟ್ಟೆಗೆ ಬರಲಿದೆ. ಈ ವರ್ಷ ಶೇ 50-60 ರಷ್ಟು ಇಳುವರಿ ನಿರೀಕ್ಷಿಸಲಾಗಿದೆ.
ಎಂ.ಗಾಯತ್ರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ
ಮಾವು ಅಭಿವೃದ್ಧಿ ಮಂಡಳಿ ಆನ್‌ಲೈನ್ ಮೂಲಕ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕು. ಖರೀದಿದಾರರು ಆನ್‌ಲೈನ್ ಮೂಲಕ ಅಥವಾ ದೂರವಾಣಿ ಮೂಲಕ ಗ್ರಾಹಕರೊಂದಿಗೆ ನೇರ ಸಂಪರ್ಕದ ವ್ಯವಸ್ಥೆ ಮಾಡಬೇಕು. ದಲ್ಲಾಳಿಗಳ ಕಾಟವಿಲ್ಲದೆ ಬೆಳೆಗಾರ ಮತ್ತು ಗ್ರಾಹಕರ ನಡುವೆ ನೇರ ವ್ಯವಹಾರಕ್ಕೆ ವ್ಯವಸ್ಥೆ ಮಾಡಬೇಕು.
ಮುನಿರೆಡ್ಡಿ, ಮಾವು ಬೆಳೆಗಾರ, ಅಕ್ಕಿಮಂಗಲ
ಮಾವು ಕೋಯ್ಲೋತ್ತರ ಅಭಿವೃದ್ಧಿ ಕೇಂದ್ರವು ರೈತರಿಗೆ ವರದಾನವಾಗಿತ್ತು. ಮಾವು ಬೆಳೆಗಾರರಿಗೆ ಗುಣಮಟ್ಟ ಹಾಗೂ ಹೆಚ್ಚಿನ ಇಳುವರಿ ಪಡೆಯಲು ಅಗತ್ಯವಾದ ತರಬೇತಿ, ಪ್ರಾತ್ಯಕ್ಷಿಕೆ ನೀಡುತ್ತಿದ್ದರು. ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ಔಷಧಿಗಳು, ಹಲವಾರು ಪರಿಕರಗಳು, ರಫ್ತು ಮಾಡಲು ಅಗತ್ಯವಾದ ರಟ್ಟಿನ ಬಾಕ್ಸ್, ಪ್ಲಾಸ್ಟಿಕ್ ಕ್ರೇಟ್ ಸಿಗುತ್ತಿದ್ದವು. ಕೇಂದ್ರವನ್ನು ಹಿಂದಿನ ಸ್ಥಿತಿಗೆ ಮರಳುವಂತೆ ಮಾಡಿ ಬೆಳೆಗಾರರಿಗೆ ಅನುಕೂಲ ಮಾಡಬೇಕು.
ಎನ್.ನಾಗಿರೆಡ್ಡಿ, ಮಾವು ಬೆಳೆಗಾರ, ಚಿಂತಾಮಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.