ADVERTISEMENT

ಚಿಂತಾಮಣಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಚಿಂತನೆ: ಡಾ.ಎಂ.ಸಿ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 6:31 IST
Last Updated 22 ಡಿಸೆಂಬರ್ 2025, 6:31 IST
   

ಚಿಂತಾಮಣಿ: ನಗರದಲ್ಲಿ ವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್ ಕಾಲೇಜು ಸ್ಥಾಪಿಸಲು ಚಿಂತನೆ ನಡೆದಿದೆ. 10-15 ಎಕರೆ ಸ್ಥಳ ಕಾಯ್ದಿರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ನಗರದ ಬೆಂಗಳೂರು ರಸ್ತೆಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಂಭಾಗದಲ್ಲಿರುವ ಹರಿಶ್ಚಂದ್ರ ಘಾಟ್ ವಿದ್ಯುತ್ ಚಿತಾಗಾರವನ್ನು ₹5 ಕೋಟಿ ವೆಚ್ಚದಲ್ಲಿ ತಾಂತ್ರಿಕ ಉನ್ನತೀಕರಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

₹50-60 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಕ್ರಿಟಿಕಲ್ ಕೇರ್ ಆಸ್ಪತ್ರೆಯನ್ನು ಕಾರ್ಪೋರೇಟ್ ಶೈಲಿಯಲ್ಲಿ ಆಧುನೀಕರಿಸಲಾಗುತ್ತಿದೆ. ಮೇಲ್ದರ್ಜೆಗೇರಿಸಿರುವ ಆಸ್ಪತ್ರೆಗಳ ನಿರ್ವಹಣೆ ಮಾಡುವುದು ಮುಖ್ಯ. ಸರ್ಕಾರಿ ಆಸ್ಪತ್ರೆಯಲ್ಲಿ ಸ್ಪೆಷಲ್ ವಾರ್ಡ್ ತೆರೆಯಲಾಗುವುದು. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಉತ್ತಮ ನಿರ್ವಹಣೆ ಕಷ್ಟಕರವಾಗಿದೆ. ನಿರ್ವಹಣೆ ಮಾಡದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ. ಸಾರ್ವಜನಿಕರಿಗೂ ಉಪಯೋಗವಾಗುವುದಿಲ್ಲ ಎಂದರು.

ADVERTISEMENT

ಆಸ್ಪತ್ರೆಯ ಸಂಕೀರ್ಣವನ್ನು ಆಧುನಿಕ ರೀತಿಯಲ್ಲಿ ಉಳಿಸಬೇಕು ಎನ್ನುವ ಉದ್ದೇಶದಿಂದ ವೈದ್ಯಕೀಯ ಕಾಲೇಜು ಸ್ಥಾಪಿಸಲು ಚಿಂತಿಸಿ ಪ್ರಯತ್ನ ನಡೆಸುತ್ತಿದ್ದೇನೆ. ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದರೆ ಬಳಕೆಗಾಗಿ ಸರ್ಕಾರಿ ಆಸ್ಪತ್ರೆಯನ್ನು ನೀಡಲಾಗುವುದು. ಈಗಾಗಲೇ 2-3 ಸಂಸ್ಥೆಗಳೊಂದಿಗೆ ಮಾತುಕತೆ ನಡೆದಿದೆ. ಬೆಳಗಾವಿ ಅಧಿವೇಶನದ ಸಮಯದಲ್ಲಿ ವೈದ್ಯಕೀಯ ಸಚಿವ ಜತೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಕಾಲೇಜು ಸ್ಥಾಪನೆಗೆ ಸಿದ್ಧತೆ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಾಗ, ಸಮಗ್ರವಾಗಿ ಚಿಂತಿಸಿ ಮುಂದಿನ 50 ವರ್ಷಗಳ ದೂರದೃಷ್ಟಿ ಹೊಂದಿರಬೇಕು. ಈ ಆಲೋಚನಾ ಶಕ್ತಿಯನ್ನು ನಮ್ಮ ಕುಟುಂಬದ ಮೂರು ತಲೆಮಾರುಗಳಿಂದ ಶ್ರಮಿಸುತ್ತಿದೆ. ಕ್ಷೇತ್ರವನ್ನು ಸಾಮಾಜಿಕ, ಶೈಕ್ಷಣಿಕ, ಸೌಲಭ್ಯಗಳನ್ನು ಒದಗಿಸಿ ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯಬೇಕು ಎಂದು ತಾತನವರ ಇಚ್ಚೆಯಾಗಿತ್ತು. ನಂತರ ಮಾಜಿ ಸಚಿವ ಚೌಡರೆಡ್ಡಿ ಅದೇ ಹಾದಿಯಲ್ಲಿ ನಡೆದಿದ್ದರು. ಈಗ ನಾನು ಸಹ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದರು.

ನಗರದ ಜನರ ನಿರೀಕ್ಷೆ ಮನಗಂಡು ನಗರದ ಎನ್.ಆರ್.ಬಡಾವಣೆ, ಗೀತಾ ಮಂದಿರ, ರಾಘವೇಂದ್ರಸ್ವಾಮಿ ಮಠವನ್ನು ಸ್ಥಾಪನೆ ಮಾಡಿದ್ದರು. ಅಂಜನಿ ಬಡಾವಣೆಯಲ್ಲಿ ವೈಶ್ಯರ ಸ್ಮಶಾನಕ್ಕಾಗಿ 20 ಗುಂಟೆ ಜಾಗವಿತ್ತು. ನಗರದ ಬೆಳವಣಿಗೆಯಾದ ಕಾರಣ ಅದನ್ನು ಈಗಿನ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಹಳೆಯ ಪದ್ಧತಿಯಲ್ಲಿ ಚಿತಾಗಾರ ಇದ್ದುದರಿಂದ ಸುತ್ತಮುತ್ತಲಿನವರಿಗೆ ತೊಂದರೆ ಆಗುತ್ತಿದೆ ಎಂದು ದೂರು ಕೇಳಿಬರುತ್ತಿದ್ದವು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಚಿತಾಗಾರವನ್ನು ನಿರ್ಮಾಣ ಮಾಡುತ್ತಿದ್ದ ತಜ್ಞರನ್ನು ಸಂಪರ್ಕಿಸಿ, ನೂತನ ರೀತಿಯಲ್ಲಿ ವಿನ್ಯಾಸ ಮಾಡಿಸಲಾಯಿತು ಎಂದರು.

ಪೌರಾಯುಕ್ತ ಜಿ.ಎನ್.ಚಲಪತಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶ್ರೀನಾಥ್, ಆರ್ಯವೈಶ್ಯ ಮಂಡಳಿಯ ಪದಾಧಿಕಾರಿಗಳು ಹಾಗೂ ಮುಖಂಡರು, ನಗರಸಭೆ ಮಾಜಿ ಅಧ್ಯಕ್ಷ ಜಗನ್ನಾಥ್, ಮಾಜಿ ಸದಸ್ಯ ಅಕ್ಷಯ್, ಸುಬ್ರಮಣ್ಯಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.