
ಚಿಂತಾಮಣಿ: ತಾಲ್ಲೂಕಿನ ಕಾಚಹಳ್ಳಿಯಲ್ಲಿ ಸುಮಾರು 50 ಕುರಿಗಳು ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಸಾವಿಗೆ ಕಾರಣ ಗೊತ್ತಾಗಿಲ್ಲ. ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ವೈದ್ಯರು ಸ್ಥಳಕ್ಕೆ ತೆರಳಿ ಎಲ್ಲ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಗ್ರಾಮದ ಜಾಫರ್ ಖಾನ್, ಖುರ್ಷಿದ್ ಮತ್ತು ಮಾಲಿಕ್ ಮೂರು ಜನ ಸುಮಾರು 200 ಕುರಿಗಳ ಮಂದೆಯನ್ನು ಬೆಳಗಿನಿಂದ ಸಂಜೆಯವರೆಗೆ ಹೊರಗಡೆ ಮೇಯಿಸಿಕೊಂಡು ಬಂದಿದ್ದಾರೆ. ಸಾಯಂಕಾಲ ಮನೆಗೆ ಬರುತ್ತಲೇ ಒಂದೊಂದಾಗಿ ಸುಮಾರು 50 ಕುರಿಗಳು ಸತ್ತಿವೆ. ಕೂಡಲೇ ಪಶುವೈದ್ಯಕೀಯ ಇಲಾಖೆಯ ವೈದ್ಯರಿಗೆ ಮಾಹಿತಿ ನೀಡಿದ್ದಾರೆ.
ವೈದ್ಯರು ಸ್ಥಳಕ್ಕೆ ಬಂದು ಉಳಿದ ಎಲ್ಲ ಕುರಿಗಳಿಗೆ ಚುಚ್ಚುಮದ್ದು ನೀಡಿದ್ದಾರೆ. ಬೆಳೆಗಳಿಗೆ ಯಾವುದಾದರೂ ರಾಸಾಯನಿಕ ಸಿಂಪಡಿಸಿದ್ದ ಹುಲ್ಲನ್ನು ತಿಂದಿರಬಹುದು ಅಥವಾ ನೀರನ್ನು ಕುಡಿದಿರಬಹುದು ಎಂಬ ಅನುಮಾನವಿದೆ ಎಂದು ಮಾಲೀಕ ಜಾಫರ್ ಖಾನ್ ತಿಳಿಸಿದರು.
ಸುಮಾರು 30-40 ವರ್ಷಗಳಿಂದ ಕುರಿಗಳನ್ನು ಸಾಕುವುದರಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಈಗಾಗಲೇ 50 ಕುರಿಗಳು ಸತ್ತಿವೆ. ಇನ್ನೂ ರಾತ್ರಿಯಲ್ಲಿ ಎಷ್ಟು ಸಾಯುತ್ತವೋ ಗೊತ್ತಿಲ್ಲ. ವೈದ್ಯರು ಬೆಳಿಗ್ಗೆ ಬಂದು ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಹೇಳಿದ್ದಾರೆ. ಸರ್ಕಾರ ನೆರವಿಗೆ ಬಂದು ಪರಿಹಾರ ನೀಡಬೇಕು ಎಂದರು.