ಚಿಂತಾಮಣಿ: ಗ್ರಾಮೀಣ ಭಾಗದ ಕೃಷಿಕರು ಮತ್ತು ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೆ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರವು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ’ ಯೋಜನೆ ರೂಪಿಸಿದೆ.
ಆದರೆ, ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ದಿನಗೂಲಿ ಕಾರ್ಮಿಕರು 6 ತಿಂಗಳ ವೇತನವಿಲ್ಲದೆ ಪರದಾಡುವ ದುಃಸ್ಥಿತಿ ಎದುರಾಗಿದೆ.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿಂತಾಮಣಿ ತಾಲ್ಲೂಕು ಸೇರಿ ಸುಮಾರು 95 ಮಂದಿ ತಾಂತ್ರಿಕ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್‌ಗಳು, ಕೊ-ಆರ್ಡಿನೇಟರ್‌ಗಳು, 60 ಮಂದಿ ಗ್ರಾಮ ಕಾಯಕ ಮಿತ್ರ ನೌಕರರು, 70 ಮಂದಿ ಬೇಸಿಕ್ ಫುಡ್ ತಂತ್ರಜ್ಞರು ವೇತನವಿಲ್ಲದೆ, ಜೀವನದ ಬಂಡಿ ಎಳೆಯಲು ಹರಸಾಹಸಪಡುತ್ತಿದ್ದಾರೆ.
ನೌಕರರು ತಮ್ಮ ಸಂಕಷ್ಟಗಳ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಈ ವಿಚಾರವನ್ನು ಯಾವುದೇ ಅಧಿಕಾರಿ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಪದವೀಧರರು, ಸ್ನಾತಕೋತ್ತರ ಪದವಿ, ಎಂ.ಟೆಕ್, ಸಿವಿಲ್ ಎಂಜಿನಿಯರ್‌ಗಳು, ಬಿಬಿಎಂ, ಬಿಎಸ್‌ಸಿ (ಕೃಷಿ) ಸೇರಿದಂತೆ ಇನ್ನಿತರ ಉನ್ನತ ಶಿಕ್ಷಣ ಪಡೆದವರೂ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಬೇಸಿಕ್ ಕಂಪ್ಯೂಟರ್ ಕಲಿತವರು ಅನೇಕ ವರ್ಷಗಳಿಂದ ನರೇಗಾ ಯೋಜನೆಯಡಿ ಗುತ್ತಿಗೆ ನೌಕರರಾಗಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ.
ನರೇಗಾ ಅನುದಾನದಲ್ಲೇ ವೇತನ ಭರಿಸಲಾಗುತ್ತದೆ. ಈವರೆಗೆ ಇಂತಹ ಸಮಸ್ಯೆ ಎದುರಾಗಿರಲಿಲ್ಲ. ವೇತನ ವಿತರಿಸುವ ಪದ್ಧತಿ ಬದಲಾಗುತ್ತಿದೆ. ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಇಂದಿನ ತಾಂತ್ರಿಕ ಯುಗದಲ್ಲಿ ವೇತನ ವಿತರಣೆ ತಂತ್ರಾಂಶ ಅಳವಡಿಸಿಕೊಳ್ಳಲು 6 ತಿಂಗಳು ಅಗತ್ಯವಿದೆಯೇ ಎಂಬುದು ನೌಕರರ ಪ್ರಶ್ನೆ.
ವೇತನವಿಲ್ಲದೆ ಜೀವನ ದುಸ್ತರ ಯಾವುದೇ ಸರ್ಕಾರಿ ಸೌಲಭ್ಯಗಳು ಮತ್ತು ಉದ್ಯೋಗ ಭದ್ರತೆ ಇಲ್ಲದೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದರೂ ಮಾಸಿಕ ಕನಿಷ್ಠ ವೇತನ ನೀಡುತ್ತಿಲ್ಲ ಎಂದು ನೌಕರರು ಅವಲತ್ತುಕೊಂಡರು. ಒಂದು ತಿಂಗಳು ವೇತನ ತಡವಾದರೆ ನೌಕರರ ಪರಿಸ್ಥಿತಿ ಪರದಾಡುವಂತಾಗುತ್ತದೆ. ಆದರೆ 6 ತಿಂಗಳಿನಿಂದ ವೇತನವಿಲ್ಲದೆ ಬದುಕು ಸಾಗಿಸುವುದು ಹೇಗೆ. ಶಾಲಾ ಕಾಲೇಜುಗಳು ಆರಂಭವಾಗಿದ್ದು ಮಕ್ಕಳ ಶುಲ್ಕ ಕಟ್ಟಲು ಕೈಸಾಲ ಮಾಡುವಂತಾಗಿದೆ. ಮಕ್ಕಳಿಗೆ ಲೇಖನ ಸಾಮಗ್ರಿಗಳು ಬ್ಯಾಗು ಬಟ್ಟೆ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕೂಲಿ ಕಾರ್ಮಿಕರು ತಮ್ಮ ಸಂಕಷ್ಟ ಹಂಚಿಕೊಂಡರು.
ಸಮಸ್ಯೆ ಶೀಘ್ರ ಪರಿಹಾರ ನೌಕರರ ವೇತನವನ್ನು ಖಜಾನೆ ಮೂಲಕ ಪಾವತಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಖಜಾನೆ ವೆಬ್‌ಸೈಟ್ ಮತ್ತು ನರೇಗಾ ವೆಬ್‌ಸೈಟ್ ಎರಡನ್ನು ಸಂಯೋಜಿಸಿ ‘ಎಸ್.ಎನ್.ಎ ಸ್ಪರ್ಶ್’ ಮೂಲಕ ವೇತನ ವಿತರಣೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಎರಡು ವೆಬ್‌ಸೈಟ್‌ಗಳಲ್ಲಿ ಹೊಂದಾಣಿಕೆಯಾಗದೆ ತಾಂತ್ರಿಕ ಸಮಸ್ಯೆ ಆಗಿದ್ದರಿಂದ ವೇತನ ವಿತರಣೆ ತಡವಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.