ADVERTISEMENT

ಚಿಂತಾಮಣಿ: ಚಿನ್ನದ ಅಂಗಡಿಗೆ ಕನ್ನ

ಕಳ್ಳರ ಕಾರ್ಯಾಚರಣೆಗೆ ವಿಶೇಷ ತಂಡ ರಚನೆ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 8:06 IST
Last Updated 11 ಫೆಬ್ರುವರಿ 2026, 8:06 IST
ಸೋಮವಾರ ರಾತ್ರಿ ಕಳ್ಳತನವಾದ ಚಿಂತಾಮಣಿ ಆಜಾದ್‌ ಚೌಕದ ಶಿವಾ ಜ್ಯೂವಲರ್ಸ್‌ ಅಂಗಡಿಗೆ ಮಂಗಳವಾರ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು
ಸೋಮವಾರ ರಾತ್ರಿ ಕಳ್ಳತನವಾದ ಚಿಂತಾಮಣಿ ಆಜಾದ್‌ ಚೌಕದ ಶಿವಾ ಜ್ಯೂವಲರ್ಸ್‌ ಅಂಗಡಿಗೆ ಮಂಗಳವಾರ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು   

ಚಿಂತಾಮಣಿ: ನಗರದ ಆಜಾದ್ ಚೌಕದಲ್ಲಿರುವ ಶಿವ ಜ್ಯೂಯಲರ್ಸ್ ಚಿನ್ನದ ಅಂಗಡಿಯ ಶೆಟರ್ ಬೀಗವನ್ನು ಸೋಮವಾರ ರಾತ್ರಿ ಮುರಿದಿರುವ ದುಷ್ಕರ್ಮಿಗಳು ಅಂಗಡಿಗಳಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಅಂಗಡಿ ಮಾಲೀಕ ಆರ್. ಶಿವಕುಮಾರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 

ಸೋಮವಾರ ರಾತ್ರಿ ಎಂದಿನಂತೆ ಶೆಟರ್ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದೆ. ಮಂಗಳವಾರ ಬೆಳಗ್ಗೆ ಅಂಗಡಿ ತೆಗೆಯಲು ಬಂದಾಗ ಶೆಟರ್ ಬೀಗ ಮುರಿದಿರುವುದು ಗೊತ್ತಾಗಿದೆ ಎಂದು ಅಂಗಡಿ ಮಾಲೀಕ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಲಾಕರ್‌ನಲ್ಲಿದ್ದ ಒಡವೆಗಳು ಸುರಕ್ಷಿತವಾಗಿವೆ. ಅಂಗಡಿಯಲ್ಲಿದ್ದ ಆಭರಣಗಳು ಕಳ್ಳತನವಾಗಿವೆ. ಕಳ್ಳತನವಾಗಿರುವ ಒಡವೆಗಳನ್ನು ಲೆಕ್ಕಾಚಾರ ಹಾಕಿದರೆ, ಎಷ್ಟು ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ. 

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಎಸ್‌ಪಿ ಜಗನ್ನಾಥ ರೈ, ಡಿವೈಎಸ್‌ಪಿ ವಿ. ಮುರಳೀಧರ್, ನಗರಠಾಣೆ ಇನ್‌ಸ್ಪೆಕ್ಟರ್ ವಿಜಿಕುಮಾರ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವರಾಜ್, ಶಿಡ್ಲಘಟ್ಟ ಠಾಣೆ ಇನ್‌ಸ್ಪೆಕ್ಟರ್ ಆನಂದ್, ಕೆಂಚಾರ್ಲಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ ಹಾಗೂ ಪತ್ತೆದಾರಿ ತಂಡದವರು ಪರಿಶೀಲನೆ ನಡೆಸಿದರು. 

ಬೆರಳಚ್ಚು ತಜ್ಞರ ತಂಡ, ಶ್ವಾನದಳವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿದರು. 

ಎಸ್‌ಪಿ ಕುಶಾಲ್ ಚೌಕ್ಸೆ ಮಾತನಾಡಿ, ‘ಹಲವಾರು ಪ್ರಕರಣಗಳಲ್ಲಿ ರಾಜ್ಯದ ಮತ್ತು ಬೇರೆ ರಾಜ್ಯದ ಕಳ್ಳರು ಸಿಕ್ಕಿದ್ದಾರೆ. ಪೊಲೀಸರು ರಾತ್ರಿ ರೌಂಡ್ಸ್ ನಡೆಸುತ್ತಾರೆ. ಡಿವೈಎಸ್‌ಪಿ ಅಂಗಡಿ ಮಾಲೀಕರ ಸಭೆ ನಡೆಸಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಹಾಕಬೇಕು ಎಂದು ಸಲಹೆ ಕೊಡಲಾಗಿದೆ ಎಂದು ಹೇಳಿದರು.

ಈ ಪ್ರಕರಣ ಭೇದಿಸಲು ವಿಶೇಷ ತಂಡ ರಚಿಸಿ, ಶೀಘ್ರವೇ ಅಪರಾಧಿಗಳನ್ನು ಪತ್ತೆ ಮಾಡಲಾಗುವುದು ಎಂದರು.

ಅಪ್ರಾಪ್ತನ ವಶಕ್ಕೆ ಪಡೆದು ವಿಚಾರಣೆ

ಕಳ್ಳತನವಾದ ಅಂಗಡಿ ಇರುವ ರಸ್ತೆಯಲ್ಲಿ ರಾತ್ರಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರ ಪೈಕಿ 16 ವರ್ಷದ ಬಾಲಕನೊಬ್ಬನನ್ನು ಗೂರ್ಖಾ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ ತಪ್ಪಿಸಿಕೊಂಡಿದ್ದಾನೆ. ಇದೀಗ ಪೊಲೀಸರ ವಶದಲ್ಲಿರುವ ಬಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಂಗಡಿ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮೆರಾಗಳ ಫುಟೇಜ್ ಅನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.