ಚಿಂತಾಮಣಿ: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶಿಕ್ಷಕರಿಗೆ ಶಿಕ್ಷೆಯಾಗಿ ಪರಿಣಮಿಸಿದೆ. ಸೇವಾವಧಿಯಲ್ಲಿ ಅನೇಕ ಜನಗಣತಿ, ಸಮೀಕ್ಷೆಗಳನ್ನು ನಡೆಸಿದ್ದ ಶಿಕ್ಷಕರು ಎಂದಿಗೂ ಇಂಥ ಗೊಂದಲ, ಅವ್ಯವಸ್ಥೆ ಹಾಗೂ ಒತ್ತಡಕ್ಕೆ ಒಳಗಾಗಿರಲಿಲ್ಲ ಎಂಬ ಮಾತುಗಳು ಶಿಕ್ಷಕರಿಂದ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಕ್ಟೋಬರ್ 7ರ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂಬ ಕಠಿಣ ಆದೇಶ ಹೊರಡಿಸಲಾಗಿದೆ. ಹಬ್ಬ–ಹರಿದಿನ, ಎಲ್ಲ ರಜೆ ದಿನಗಳಂದೂ ಸಮೀಕ್ಷೆ ನಡೆಸುವ ಅನಿವಾರ್ಯತೆಗೆ ಶಿಕ್ಷಕರು ಸಿಲುಕಿದ್ದಾರೆ. ಇದರ ಜೊತೆಗೆ ನೆಟ್‌ವರ್ಕ್ ಸಮಸ್ಯೆ, ಸರ್ವರ್ ಡೌನ್ ಸೇರಿದಂತೆ ಇನ್ನಿತರ ತಾಂತ್ರಿಕ ಸಮಸ್ಯೆಗಳಿಂದಾಗಿ ಪ್ರತಿ ದಿನದ ನಿಗದಿತ ಗುರಿಯನ್ನು ತಲುಪಲಾಗದೆ ಹಲವು ಶಿಕ್ಷಕರು ಪರದಾಡುವ ದುಃಸ್ಥಿತಿ ಎದುರಾಗಿದೆ. ಸರ್ವರ್ ಡೌನ್ ಮತ್ತು ತಾಂತ್ರಿಕ ಸಮಸ್ಯೆಗಳು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿವೆ.
‘ನಿಗದಿತ ಅವಧಿಯಲ್ಲಿ ನಿರ್ದಿಷ್ಟ ಗುರಿ ತಲುಪಲೇಬೇಕು ಎಂಬ ಅಧಿಕಾರಿಗಳ ಒತ್ತಡದಿಂದ ಆತಂಕಕ್ಕೆ ಸಿಲುಕಿದ ಶಿಕ್ಷಕರೊಬ್ಬರು ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನೂ ಅನೇಕ ಶಿಕ್ಷಕರು ಇದೇ ರೀತಿಯ ಒತ್ತಡದಲ್ಲಿ ಸಿಲುಕಿದ್ದಾರೆ’ ಎಂದು ಶಿಕ್ಷಕರು ಅಲವತ್ತುಕೊಂಡರು.
ತರಾತುರಿಯಲ್ಲಿ ಸಮೀಕ್ಷೆ ಕೈಗೊಂಡಿರುವುದೇ ಎಲ್ಲ ಗೊಂದಲಗಳಿಗೆ ಕಾರಣ ಎಂದು ಶಿಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲಿಗೆ ಸಮೀಕ್ಷೆಗೆ ಶಿಕ್ಷಕರ ನೇಮಕಾತಿಯೇ ಸಮರ್ಪಕವಾಗಿಲ್ಲ. ಈ ಹಿಂದೆ ನಡೆಸುತ್ತಿದ್ದ ಗಣತಿ, ಸಮೀಕ್ಷೆಗಳಲ್ಲಿ ಬಹುತೇಕ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲೇ ಶಿಕ್ಷಕರನ್ನು ನಿಯೋಜಿಸಲಾಗುತ್ತಿತ್ತು. ಈ ಬಾರಿ ಶಿಕ್ಷಕರು ವಾಸವಿರುವ ಸ್ಥಳದಿಂದ 20–30 ಕಿ.ಮೀ ದೂರದ ಸ್ಥಳಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. 2–3 ಹಳ್ಳಿಗಳಿಗೆ ಹೋಗುವಂತೆ ಯು.ಎಚ್.ಐ.ಡಿ ಸಂಖ್ಯೆ ಅಲಾಟ್ ಮಾಡಿರುವುದು ತೊಂದರೆಯಾಗಿದೆ.
ಮನೆಗಳಿಗೆ ನಂಬರ್ ಕೊಟ್ಟಿರುವುದು ಕೆಇಬಿ ಸಿಬ್ಬಂದಿ. ಅವರು ಒಂದು ಕಡೆಯಿಂದ ನಂಬರ್ ನೀಡಿಲ್ಲ. ಒಂದು ಮನೆ ಒಂದೆಡೆ ಇದ್ದರೆ, ಮತ್ತೊಂದು ಮನೆ ಬೇರೊಂದು ರಸ್ತೆಯಲ್ಲಿ ಇರುತ್ತದೆ. ಸರಿಯಾಗಿ ಮ್ಯಾಪಿಂಗ್ ಮಾಡಿಲ್ಲ. ಸಮೀಕ್ಷೆಗಾರರು ಸ್ಥಳಕ್ಕೆ ಹೋದಾಗ, ಲೊಕೇಷನ್ ತೋರಿಸಲು ಸುತ್ತಾಡಿಸುತ್ತದೆ. ಶಿಕ್ಷಕರು ಮನೆ ಹುಡಕಲು ಹರಸಾಹಸ ಪಡುವಂತಾಗಿದೆ. ಹಿಂದಿನ ದಿನಗಳಲ್ಲಿ ಜನಗಣತಿ ಮತ್ತು ವಿವಿಧ ಆಯೋಗಗಳು ಕೈಗೊಳ್ಳುವ ಸಮೀಕ್ಷೆಯಲ್ಲಿ ಶಿಕ್ಷಕರೇ ಮನೆಪಟ್ಟಿ, ರೂಟ್ ಮ್ಯಾಪ್ ಮಾಡಿಕೊಳ್ಳುತ್ತಿದ್ದರು. ಇದರಿಂದ ಶಿಕ್ಷಕರು ಸುಲಭವಾಗಿ ಸಮೀಕ್ಷೆ ಕೆಲಸ ಮಾಡುತ್ತಿದ್ದರು. ಮನೆ ಪಟ್ಟಿ ಮಾಡಿರುವುದು ಕೆಇಬಿ ಸಿಬ್ಬಂದಿ. ಸಮೀಕ್ಷೆ ಮಾಡುತ್ತಿರುವುದು ಶಿಕ್ಷಕರು. ಹೀಗಾಗಿ, ಹೊಂದಾಣಿಕೆ, ಸಂಪರ್ಕದ ಕೊರತೆ ಎದುರಾಗಿದೆ ಎನ್ನುತ್ತಾರೆ ಹಲವು ಶಿಕ್ಷಕರು.
‘ನಿವೃತ್ತಿಯ ಅಂಚಿನಲ್ಲಿರುವ ಹಿರಿಯ ಶಿಕ್ಷಕರು, ವಿಶೇಷ ಚೇತನರು, ಗರ್ಭಿಣಿಯರು, ಸೊಂಟ, ಮಂಡಿ ನೋವು ಇರುವವರು, ಹೃದಯ ರೋಗಿಗಳು, ಇತರೆ ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರಿಗೆ ಸಮೀಕ್ಷೆಯು ಬಿಸಿ ತುಪ್ಪವಾಗಿದೆ. ಒಂದೆಡೆ ಸಮೀಕ್ಷೆ ಮಾಡಲು ಆಗುತ್ತಿಲ್ಲ, ಮಾಡಲ್ಲ ಎಂದು ಹೇಳಲು ಆಗುತ್ತಿಲ್ಲ. ನನ್ನ ಸೇವಾವಧಿಯಲ್ಲಿ ಎಂದೂ ಇಂತಹ ಅಸಮರ್ಪಕ, ಗೊಂದಲು ಸಮೀಕ್ಷೆ, ಗಣತಿ ನೋಡಿಲ್ಲ’ ಎಂದು ನಿವೃತ್ತಿಗೆ ಸಮೀಪವಿರುವ ಶಿಕ್ಷಕರೊಬ್ಬರು ನೋವು ತೋಡಿಕೊಂಡರು.
ಕಡಿಮೆ ಸಮಯ ನೀಡಿ ನಿಗದಿತ ದಿನಾಂಕದ ಒಳಗೆ ಕಡ್ಡಾಯವಾಗಿ ಸಮೀಕ್ಷೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಒತ್ತಡ ಹಾಕುವುದು ಸರಿಯಲ್ಲ. ಇದರಿಂದ ಸಮೀಕ್ಷೆಯು ಪರಿಪೂರ್ಣವಾಗಿ ಆಗುವುದಿಲ್ಲ. ಸಮರ್ಪಕವಾಗಿ ಮಾಹಿತಿ ಪಡೆಯದೆ ಕಾಟಾಚಾರಕ್ಕೆ ಮುಗಿಸಲು ಪ್ರಯತ್ನಿಸುತ್ತಾರೆ. ಶಿಕ್ಷಕರು ಒತ್ತಡ ರಹಿತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಒಂದು ವಾರ ಅಥವಾ 15 ವಿಸ್ತರಣೆ ಮಾಡಬೇಕು ಎಂಬುದು ಶಿಕ್ಷಕರ ಮನವಿ.
ಮನೆ ಹುಡುಕಿ ಸಮೀಕ್ಷೆಗೆ ತೆರಳಿದರೆ ಮನೆಯ ಪ್ರತಿಯೊಬ್ಬ ಸದಸ್ಯರಿಗೆ 60 ಪ್ರಶ್ನೆಗಳನ್ನು ಕೇಳಿ ಉತ್ತರ ಭರ್ತಿ ಮಾಡಬೇಕು. 60 ಪ್ರಶ್ನೆ ಮುಗಿಯುವಷ್ಟರಲ್ಲಿ ಸರ್ವರ್ ಸಮಸ್ಯೆ ಅಥವಾ ಯಾವುದಾದರೂ ತಾಂತ್ರಿಕ ಸಮಸ್ಯೆ ಎದುರಾದರೆ ಮತ್ತೆ ಒಂದರಿಂದ ಪ್ರಾರಂಭಿಸಬೇಕು. ಪ್ರತಿ ಕುಟುಂಬದ ಸಮೀಕ್ಷೆ ಪೂರ್ಣಗೊಳಿಸಲು ಸರಾಸರಿ 2 ಗಂಟೆ ಬೇಕು. ಕೆಲವು ಮನೆಗಳಲ್ಲಿ ಸದಸ್ಯರು ಸಮರ್ಪಕವಾದ ಮಾಹಿತಿಯನ್ನೇ ನೀಡುವುದಿಲ್ಲ. ಜೊತೆಗೆ ಒಟಿಪಿ ನೀಡುವುದಿಲ್ಲ. ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸಿ ದಿನಕ್ಕೆ 5-10 ಮನೆಗಳ ಸಮೀಕ್ಷೆ ಮಾಡುವುದು ಕಷ್ಟವಾಗುತ್ತದೆ ಎಂದು ಶಿಕ್ಷಕರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.