ಚಿಂತಾಮಣಿ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಆಂಧ್ರದ ಗಡಿಭಾಗದಲ್ಲಿರುವ ಚಿಂತಾಮಣಿ ತಾಲ್ಲೂಕಿನಲ್ಲಿ ಸೂರ್ಯನ ಕೋಪದಿಂದ ನೆತ್ತಿ ಸುಡುತ್ತಿದೆ. ಮುಂಜಾನೆ 9ರಿಂದ ಬಿಸಿಲಿನ ಝಳ ಏರುತ್ತಿದ್ದು, ಜನರು ಅದರಿಂದ ಪಾರಾಗಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಬೇಸಿಗೆಯಲ್ಲಿ ಬಡವರ ಫ್ರಿಜ್ ಎಂದೇ ಖ್ಯಾತಿಯಾಗಿರುವ ಮಡಿಕೆ ಖರೀದಿಗೆ ಜನರು ಮುಗಿಬಿದ್ದಿದ್ದು, ಬೇಡಿಕೆ ಹೆಚ್ಚಾಗಿದೆ. ಬಡವರು, ಶ್ರೀಮಂತರು ಎಲ್ಲರೂ ಖರೀದಿಸುತ್ತಿದ್ದು, ನಗರದ ಸುಭಾಷ್ ರಸ್ತೆ ಮತ್ತಿತರ ಕಡೆ ಮಣ್ಣಿನ ಮಡಕೆಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ನೀರು ಶೇಖರಣಾ ಸಾಮರ್ಥ್ಯಕ್ಕೆ ತಕ್ಕಂತೆ ಒಂದು ಮಡಕೆ ₹100 ರಿಂದ ₹600 ವರೆಗೂ ಮಾರಾಟವಾಗುತ್ತಿವೆ. ಬಿಸಿಲಿನ ಝಳದಿಂದ ಬೆಲೆ ಹೆಚ್ಚಾದರೂ ಖರೀದಿ ಜೋರಾಗಿದೆ. ರಾಜಸ್ತಾನದಿಂದ ಬರುವ ಮಡಿಕೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅಲ್ಲಲ್ಲಿ ರಾಜಸ್ತಾನದ ಮಡಿಕೆಗಳು ಮಾರಾಟವಾಗುತ್ತಿವೆ. ಈ ಮಡಿಕೆಗಳು ಕೆಂಪು ಮಣ್ಣಿನಿಂದ ಮಾಡಿದ್ದು ಜನರನ್ನು ಆಕರ್ಷಿಸುತ್ತಿವೆ.
ಮಡಿಕೆಗೆ ಆಧುನಿಕತೆ ಸ್ಪರ್ಶ: ಆಧುನಿಕತೆ ತಕ್ಕಂತೆ ಗ್ರಾಹಕರಿಗೆ ಆಕರ್ಷಕವಾಗಿ ಕಾಣುವಂತೆ ಬಣ್ಣ ಬಣ್ಣದ ಚಿತ್ತಾರ ಬಿಡಿಸಿದ, ಹೂಜಿ, ಸಿಲಿಂಡರ್, ಕೈ ಹಿಡಿಕೆ ಇರುವ, ಬಾಟಲಿ ತರಹದ ವಿವಿಧ ಆಕಾರ, ಮುಚ್ಚಳ ಇರುವ, ನಲ್ಲಿಗಳನ್ನು ಅಳವಡಿಸಿರುವ ಮಡಿಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಮಣ್ಣಿನ ಮಡಿಕೆಗಳು ನೈಸರ್ಗಿಕವಾಗಿ ನೀರನ್ನು ತಂಪಾಗಿರುವ ಗುಣವನ್ನು ಹೊಂದಿವೆ. ಮಣ್ಣಿನ ಪಾತ್ರೆಗಳು ನೈಸರ್ಗಿಕವಾಗಿ ನೀರನ್ನು ಶುದ್ಧೀಕರಿಸುತ್ತವೆ. ಮಣ್ಣಿನಲ್ಲಿರುವ ಖನಿಜಗಳೊಂದಿಗೆ ಬೆರೆತ ನೀರು ಕುಡಿದರೆ ದೇಹದಲ್ಲಿರುವ ವಿಷವನ್ನು ಹೊರ ಹಾಕುತ್ತದೆ.
ಮಡಕೆಯ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಜತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಡಕೆಯ ನೀರು ಬಿಸಿಲಿನ ತಾಪಕ್ಕೆ ಒಳಗಾಗುವ ಶರೀರಕ್ಕೆ ತಂಪು ನೀಡುತ್ತದೆ. ಮಡಕೆಯ ನೀರು ಕುಡಿಯುವುದು ಉತ್ತಮ ಎಂದು ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ ಹೇಳುತ್ತಾರೆ.
ವ್ಯಾಪಾರಿಗಳ ಅಳಲು:
ಆಧುನಿಕ ಯಾಂತ್ರಿಕ ಕಾಲದಲ್ಲಿ ಮಡಿಕೆಗಳ ಖರೀದಿ ಕಡಿಮೆಯಾಗಿದೆ. ಬೆಲೆ ಏರಿಕೆಯ ತಾಪದಲ್ಲಿ ಮಡಿಕೆಗಳ ನಿರ್ಮಾಣ ವೆಚ್ಚವೂ ಅಧಿಕವಾಗುತ್ತದೆ. ಮಣ್ಣಿನ ಮಡಿಕೆಗಳಿಗೆ ಬೇಸಿಗೆಯಲ್ಲಿ ಮಾತ್ರ ಬೇಡಿಕೆ ಇರುತ್ತದೆ. ಉಳಿದ ದಿನಗಳಲ್ಲಿ ವ್ಯಾಪಾರ ಇರುವುದಿಲ್ಲ. ಶೇಖರಣೆ ಮತ್ತು ಸಾಗಾಟ ಮಾಡುವಾಗ ಮಡಿಕೆಗಳು ಒಡೆದು ನಷ್ಟವಾಗುತ್ತದೆ ಎನ್ನುತ್ತಾರೆ ಮಡಕೆ ವ್ಯಾಪಾರಿ ಶೈಲಮ್ಮ.
ಬೇಸಿಗೆ ಸಮಯದಲ್ಲಿ ಮಾತ್ರ ಕುಡಿಯುವ ನೀರಿನ ಮಡಿಕೆಗಳು ಮಾರಾಟವಾಗುತ್ತವೆ. ಉಳಿದ ದಿನಗಳಲ್ಲಿ ಮಡಿಕೆಗಳನ್ನು ಕೇಳುವವರೇ ಇರುವುದಿಲ್ಲ. ಕುಂಬಾರ ವೃತ್ತಿಯನ್ನೇ ಅವಲಂಬಿಸಿದರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾಗುತ್ತದೆ.ನರಸಿಂಹಯ್ಯ ಕುಂಬಾರ ಚಿಂತಾಮಣಿ
ಬೇಸಿಗೆಯ ತಾಪ ತಣಿಸಲು ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಾರೆ. ಇತ್ತೀಚೆಗೆ ಆರೋಗ್ಯದ ದೃಷ್ಟಿಯಿಂದ ಶ್ರೀಮಂತರೂ ಸಹ ಮಣ್ಣಿನ ಮಡಿಕೆಗಳಿಗೆ ಮೊರೆ ಹೋಗುತ್ತಿದ್ದಾರೆ.ನೀಲಮ್ಮ ಮಡಿಕೆ ವ್ಯಾಪಾರಿ ಚಿಂತಾಮಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.