ADVERTISEMENT

ನೆಮ್ಮದಿಗೆ ಅಧ್ಯಾತ್ಮ ಮದ್ದು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 3:35 IST
Last Updated 8 ನವೆಂಬರ್ 2020, 3:35 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಶನಿವಾರ ನಡೆದ ಆತ್ಮ ಚಿಂತನೆ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್‌ ಮಾತನಾಡಿದರು 
ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಶನಿವಾರ ನಡೆದ ಆತ್ಮ ಚಿಂತನೆ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್‌ ಮಾತನಾಡಿದರು    

ಚಿಂತಾಮಣಿ: ‘ಮನುಷ್ಯ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಬದುಕಲು ಅಧ್ಯಾತ್ಮದ ಅಗತ್ಯವಿದೆ’ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಸಂಸ್ಕೃತ ಪಂಡಿತ ಡಾ.ಎಂ.ಇ. ರಂಗಾಚಾರ್ ಅಭಿಪ್ರಾಯಪಟ್ಟರು.

ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಶನಿವಾರ ಆಯೋಜಿಸಿದ್ದ ‘ಇಂದಿನ ಸಮಾಜಕ್ಕೆ ಆತ್ಮಚಿಂತನೆಯ ಅವಶ್ಯಕತೆ’ ಎಂಬ ಚಿಂತನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳು ನಾಶವಾಗುತ್ತಿವೆ. ಅಶೋಕ ಚಕ್ರವರ್ತಿಯ ಕಾಲದಲ್ಲಿ ಯಾರ ಮನೆಗೂ ಬೀಗ ಹಾಕುತ್ತಿರಲಿಲ್ಲ. ಅಂದಿನ ಜನರಲ್ಲಿ ತೃಪ್ತಿಯಿತ್ತು. ಇಂದು ಎಷ್ಟಿದ್ದರೂ ಸಾಲದಾಗಿದೆ. ಮಠಾಧಿಪತಿಗಳಿಂದ ಹಿಡಿದು ಸಾಮಾನ್ಯ ಪ್ರಜೆಯವರೆಗೂ ಯಾರಲ್ಲೂ ನೆಮ್ಮದಿಯಿಲ್ಲ. ಆಸೆಯೇ ತುಂಬಿ ತುಳುಕುತ್ತಿದೆ. ನಿರಂತರವಾಗಿ ಆತ್ಮಚಿಂತನೆ ನಡೆಸಬೇಕು. ನಾನು ಯಾರು ಎಂಬ ಪ್ರಶ್ನೆಯನ್ನು ಪ್ರತಿದಿನವೂ ಕೇಳಿಕೊಳ್ಳಬೇಕು. ಆತ್ಮ ಚಿಂತನೆಯಿಂದ ನಡೆದರೆ ಮನಸ್ಸು, ಶರೀರ ಸ್ವಸ್ಥವಾಗುತ್ತದೆ’ ಎಂದು ಹೇಳಿದರು.

ADVERTISEMENT

ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠದ ವಿದ್ವಾಂಸ ಡಾ.ಎ.ವಿ. ನಾಗಸಂಪಿಗೆ ಮಾತನಾಡಿ, ಸಹಜವಾದ ಜ್ಞಾನಶಕ್ತಿ ಎಲ್ಲಿದೆಯೋ ಅದೇ ಜೀವ. ಜ್ಞಾನ, ಇಚ್ಛೆ, ಪ್ರಯತ್ನ ಈ ಮೂರರ ಸಂಗಮವೇ ಜೀವ. ಮಾಯೆಯ ಪ್ರಭಾವದಿಂದ ದೇವರ ಶಕ್ತಿಯನ್ನು ಮರೆತಿದ್ದೇವೆ. ದೇವರನ್ನು ಮರೆತು ಪ್ರಾಪಂಚಿಕತೆಯಲ್ಲಿ ಮುಳುಗಿಬಿಟ್ಟಿದ್ದೇವೆ. ಜ್ಞಾನ ಸಂಪತ್ತು, ವಿವೇಕ ಸಂಪತ್ತು, ಧರ್ಮ ಸಂಪತ್ತನ್ನು ದೇವರಿಂದ ಪಡೆದಿದ್ದೇವೆ. ಆದರೆ, ಭೌತಿಕ ಜಗತ್ತಿನ ಆಕರ್ಷಣೆಗೆ ಒಳಪಟ್ಟು ಅದೆಲ್ಲವನ್ನು ಮರೆತು ಹಿಂಸೆ ಅನುಭವಿಸುವಂತಾಗಿದೆ ಎಂದು ವಿಷಾದಿಸಿದರು.

ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ಮಾತನಾಡಿ, ಪುರುಷಾರ್ಥಗಳನ್ನು ಸಾಧಿಸುವ ನಿಟ್ಟಿನಲ್ಲಿ ಅಹಂಕಾರ ಬಿಡಬೇಕು. ಸಕಲ ಜೀವಿಗಳಿಗೂ ಪ್ರಕೃತಿಯಲ್ಲಿ ಜೀವಿಸುವ ಅನುಕೂಲ ಮಾಡಿಕೊಡಬೇಕು. ಪ್ರಕೃತಿ ನಾಶದಿಂದ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಇನ್ನಾದರೂ ಅಂತರಂಗದ ಶೋಧನೆ ಮಾಡಿಕೊಂಡು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಆರಂಭದಲ್ಲಿ ಶ್ರೀಯೋಗಿನಾರೇಯಣ ತಾತಯ್ಯನವರ ಮಠದ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ತಾತಯ್ಯನವರ ಉತ್ಸವ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು. ವೇದಿಕೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಮಂಗಳಾರತಿಯನ್ನು ಬೆಳಗಲಾಯಿತು.

ಅಧ್ಯಾತ್ಮ ಚಿಂತಕ ಡಾ.ಬಾಬುಕೃಷ್ಣಮೂರ್ತಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿದ್ದ ಎಲ್ಲಾ ವಿದ್ವಾಂಸರನ್ನು ಧರ್ಮಾಧಿಕಾರಿ ಜಯರಾಮ್ಶಾ ಲು ಹೊದಿಸಿ, ಫಲತಾಂಬೂಲ ನೀಡಿ ಗೌರವಿಸಿದರು. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಕೈವಾರ ಮಠದ ಟ್ರಸ್ಟ್‌ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.