ADVERTISEMENT

ಬಾಗೇಪಲ್ಲಿ | ಚಿತ್ರಾವತಿ ಹೆಸರು ಬದಲಾವಣೆ: ಸಂಘರ್ಷಕ್ಕೆ ನಾಂದಿ

ಭಾವನಾತ್ಮಕ ಬೆಸುಗೆ, ಹೋರಾಟದ ಫಲ

ಪಿ.ಎಸ್.ರಾಜೇಶ್
Published 4 ಆಗಸ್ಟ್ 2025, 7:11 IST
Last Updated 4 ಆಗಸ್ಟ್ 2025, 7:11 IST
ಬಾಗೇಪಲ್ಲಿ ತಾಲ್ಲೂಕಿನ ಐತಿಹಾಸಿಕ ಪರಗೋಡು ಬಳಿ ಇರುವ ಚಿತ್ರಾವತಿ ಜಲಾಶಯ
ಬಾಗೇಪಲ್ಲಿ ತಾಲ್ಲೂಕಿನ ಐತಿಹಾಸಿಕ ಪರಗೋಡು ಬಳಿ ಇರುವ ಚಿತ್ರಾವತಿ ಜಲಾಶಯ   

ಬಾಗೇಪಲ್ಲಿ: ಜನಪರ ಹೋರಾಟಗಳಿಂದ ನಿರ್ಮಾಣವಾದ ಚಿತ್ರಾವತಿ ಜಲಾಶಯ ಇದೀಗ ಹೆಸರು ಬದಲಾಯಿಸುವ ಹೇಳಿಕೆಯಿಂದ ಮತ್ತೆ ಮುನ್ನಲೆಗೆ ಬಂದಿದ್ದು, ರಾಜಕೀಯ ಸಂಘರ್ಷಕ್ಕೆ ನಾಂದಿ ಆಗಿದೆ.

ಚಿತ್ರಾವತಿ ಒಂದು ಸಣ್ಣನದಿ. ಉತ್ತರ ಪಿನಾಕಿನಿಯ ಉಪನದಿ. ನಂದಿಬೆಟ್ಟದ ಉತ್ತರಕ್ಕೆ 14 ಕಿಲೋಮೀಟರ್ ದೂರದಲ್ಲಿನ ಕರಗಾನಪಾಳ್ಯದ ಬಳಿ ಬಿದ್ದ ನೀರು ಹಳ್ಳವಾಗಿ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಹರಿಯುತ್ತದೆ. ಹಿಂದೆ ಚಿತ್ರಾವತಿ ನದಿಯು ಇದೀಗ ಅಕ್ಷರಶಃ ಕಸ, ತ್ಯಾಜ್ಯಗಳ ತಾಣ ಆಗಿದೆ.

ಚಿತ್ರಾವತಿ ಈ ಭಾಗದ ಜನರ ಬೆಸುಗೆಯ ಕೊಂಡಿಯಾಗಿದೆ. ಮಳೆ ಬಂದರೆ ಹರಿಯುವ ನೀರನ್ನು ನದಿಯ ಮರಳು ಹಿಡಿದಿಟ್ಟು, ಅಕ್ಕಪಕ್ಕದ ಭೂಮಿಗೆ ಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸಿತ್ತು. ಜನರಿಗೆ ಕುಡಿಯುವ ನೀರು ಸಿಗುತ್ತಿತ್ತು.

ADVERTISEMENT

ದಿ.ಅಪ್ಪಸ್ವಾಮಿರೆಡ್ಡಿ ಶಾಸಕರಾಗಿದ್ದಾಗ ಚಿತ್ರಾವತಿ ಜಲಾಶಯ ನಿರ್ಮಾಣ ಮಾಡಲು ಯೋಜನೆ ಮಾಡಿದ್ದರು. ಜಿ.ವಿ.ಶ್ರೀರಾಮರೆಡ್ಡಿ 1998 ಮಾರ್ಚ್ ತಿಂಗಳಿನಲ್ಲಿ ಚಿತ್ರಾವತಿ ಅಣೆಕಟ್ಟು ನಿರ್ಮಾಣ ಮಾಡಲು ಸರ್ವೆ ಕೆಲಸ ಪ್ರಾರಂಭ ಮಾಡಲಾಗಿತ್ತು. 1998 ಆಗಸ್ಟ್‌ನಲ್ಲಿ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಮಂಜೂರಾತಿ, ಯೋಜನೆ ಕೈಗೊಳ್ಳಲು ಸರ್ಕಾರದ ಆಡಳಿತಾತ್ಮಕ ಅನುಮತಿ ನೀಡಿ, 1999-2000ನೇ ಸಾಲಿನ ಆಯವ್ಯಯದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ₹8 ಕೋಟಿ ನಿಗದಿಪಡಿಸಿ ₹2.40 ಕೋಟಿ ಅನುದಾನ ಬಿಡುಗಡೆ ಮಾಡಿತ್ತು.

ನಂತರದ ಸರ್ಕಾರ ಬದಲಾಗಿ ಯೋಜನೆಗೆ ಹಣಕಾಸು ನೀಡಲಿಲ್ಲ. ಹೀಗಾಗಿ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ‘ಚಿತ್ರಾವತಿ ಅಣೆಕಟ್ಟು ಸಮಿತಿ’ ರಚನೆ ಮಾಡಿ 65 ದಿನ ಧರಣಿ ಸತ್ಯಾಗ್ರಹ ನಡೆಯಿತು. ಕಾಂಗ್ರೆಸ್ ಸರ್ಕಾರ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೂ ಕಳುಹಿಸಿತ್ತು.

ಚಿತ್ರಾವತಿ ಜಲಾಶಯ ವಿರೋಧಿಸಿ ಆಂಧ್ರಪ್ರದೇಶದ ಅಂದಿನ ತೆಲುಗುದೇಶಂ ಪಕ್ಷದ ಶಾಸಕ ಪೆರಿಟಾಲ ರವಿ ಹಾಗೂ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದರು. ಪಟ್ಟಣಕ್ಕೆ ಮೆರವಣಿಗೆ ಮೂಲಕ ಬಂದಿದ್ದರು. ಚಿತ್ರಾವತಿ ಜಲಾಶಯ ನಿರ್ಮಾಣಕ್ಕೆ ಒತ್ತಾಯಿಸಿ ಬೆಂಗಳೂರಿನಿಂದ ಚಿತ್ರಾವತಿವರೆಗೂ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಬೆಂಬಲಿಗರು ಪಾದಯಾತ್ರೆ ಮಾಡಿದ್ದರು. 

ಮೂಲ ಯೋಜನೆಯ ಪ್ರಕಾರ ಚಿತ್ರಾವತಿ ಅಣೆಕಟ್ಟಿನ ಶೇಖರಣಾ ಸಾಮಾರ್ಥ್ಯ 143.19 ಮೀಟರ್. ಇದನ್ನು ಬದಲಾಯಿಸಿ 106.11 ಮೀಟರ್‌ಗೆ ಇಳಿಸಲಾಯಿತು.  ಎನ್.ಸಂಪಂಗಿ ಶಾಸಕರಾದ ಅವಧಿಯಲ್ಲಿ ಚಿತ್ರಾವತಿ ಅಣೆಕಟ್ಟು ಜಲಾಶಯಕ್ಕೆ ಹಣ ಬಿಡುಗಡೆ ಮಾಡಿಸಿದರು. 2004ರಲ್ಲಿ ಶ್ರೀರಾಮರೆಡ್ಡಿ ಶಾಸಕರಾದ ನಂತರ ಬಾಗೇಪಲ್ಲಿ, ಗುಡಿಬಂಡೆ ಪಟ್ಟಣಗಳಿಗೆ ಚಿತ್ರಾವತಿ ನದಿಯಿಂದ ಪೈಪ್‍ಲೈನ್ ಹಾಗೂ ನೀರು ಶುದ್ಧೀಕರಣ ಘಟಕ ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸಿದರು. 

ಹೋರಾಟಗಳ ಪ್ರತಿಫಲದ ಚಿತ್ರಾವತಿ ಹೆಸರನ್ನು ಬದಲಾಯಿಸಿ ಎಂ.ಎಸ್.ಕೃಷ್ಣ ಹೆಸರು ಇಡಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಇದು ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣ ಆಗಿದೆ. ಎಸ್.ಎಂ.ಕೃಷ್ಣ ಹೆಸರಿಡಲು ಪುರಸಭೆಯಲ್ಲಿ ಆಡಳಿತ ಅನುಮೋದನೆಗೆ ಪತ್ರ ಬರೆದಿದ್ದಾರೆ.

ಎಸ್.ಎಂ.ಕೃಷ್ಣ ಹೆಸರಿನ ಹೇಳಿಕೆಗೆ ರಾಜಕೀಯ ಪಕ್ಷ, ರೈತ, ದಲಿತಪರ ಸಂಘಟನೆಗಳ ಮುಖಂಡರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಎಸ್.ಎಂ.ಕೃಷ್ಣಗೆ ಚಿತ್ರಾವತಿ ಜಲಾಶಯಕ್ಕೆ ಸಂಬಂಧವೇ ಇಲ್ಲ. ಭಾವನಾತ್ಮಕ ಬೆಸುಗೆಯಾದ ಚಿತ್ರಾವತಿ ಎಂಬ ಹೆಸರು ಮುಂದುವರೆಯಲಿ. ಚಿತ್ರಾವತಿ ಜಲಾಶಯ ಆಗಲು ಕಾರಣರಾದ ಜಿವಿಎಸ್ ಜಲಾಶಯ ಎಂದು ಹೆಸರು ಇಡುವಂತೆ ಪ್ರಗತಿಪರರು, ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಚಿತ್ರಾವತಿ ಜಲಾಶಯದ ನಿರ್ಮಾಣ ಮಾಡಲು ಒತ್ತಾಯಿಸಿ ಚಿತ್ರಾವತಿ ಅಣೆಕಟ್ಟು ಸಮಿತಿಯ ನೇತೃತ್ವದಲ್ಲಿ ನಡೆದ ಹೋರಾಟ

ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ.ಕೃಷ್ಣ ಅನುದಾನ ನೀಡಿ ಅಭಿವೃದ್ಧಿಪಡಿಸಿರುವುದರಿಂದ, ಎಸ್.ಎಂ.ಕೃಷ್ಣ ಹೆಸರು ಇಡಲು ಸರ್ಕಾರದಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದಿದ್ದೇವೆ. ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. ಹೋರಾಟಗಾರರಿಗೆ ಜಿ.ವಿ.ಶ್ರೀರಾಮರೆಡ್ಡಿ ಅವರ ಹೆಸರು ಇದೀಗ ನೆನಪಾಯಿತಾ? ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರಶ್ನಿಸಿದರು.

ಚಿತ್ರಾವತಿ ಜಲಾಶಯಕ್ಕೆ ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಹೋರಾಟ ಮಾಡಲಾಗಿದೆ. ಸಂಬಂಧ ಇಲ್ಲದ ವ್ಯಕ್ತಿಗಳ ಹೆಸರು ಬಿಟ್ಟು, ಹೋರಾಟಗಾರ ಶ್ರೀರಾಮರೆಡ್ಡಿ ಹೆಸರು ಇಡಬೇಕು ಎಂದು ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಒತ್ತಾಯಿಸಿದರು.

ಬಾಗೇಪಲ್ಲಿಗೆ ಭಾಗ್ಯನಗರ ಎಂದು, ಚಿತ್ರಾವತಿ ಜಲಾಶಯಕ್ಕೆ ಹೆಸರು ಬದಲಾವಣೆ ಮಾಡಿದರೆ ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ. ಶಾಸಕರು, ಸಚಿವರು ಅವರ ಸರ್ಕಾರದಲ್ಲಿ ಹೆಚ್ಚು ಅನುದಾನ ತಂದು ಅಭಿವೃದ್ಧಿಪಡಿಸಲಿ ಎಂದು ರೈತ ಸಂಘ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.