ADVERTISEMENT

ಬಾಗೇಪಲ್ಲಿ: ಚಿತ್ರಾವತಿ ಬ್ಯಾರೇಜಿಂದ ನೀರು ಹರಿಸಿದ್ದ ಎಸ್.ಎಂ.ಕೃಷ್ಣ

ಪಿ.ಎಸ್.ರಾಜೇಶ್
Published 12 ಡಿಸೆಂಬರ್ 2024, 6:44 IST
Last Updated 12 ಡಿಸೆಂಬರ್ 2024, 6:44 IST
ಚಿತ್ರಾವತಿ ಬ್ಯಾರೇಜಿನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಅಂದಿನ ಶಾಸಕ ಎನ್.ಸಂಪಂಗಿ, ಎ.ಜಿ.ಸುಧಾಕರ್, ಬಿ.ಆರ್.ನರಸಿಂಹನಾಯ್ಡು ನಿಯೋಗ ಮನವಿ ಸಲ್ಲಿಸಿತ್ತು
ಚಿತ್ರಾವತಿ ಬ್ಯಾರೇಜಿನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಅಂದಿನ ಶಾಸಕ ಎನ್.ಸಂಪಂಗಿ, ಎ.ಜಿ.ಸುಧಾಕರ್, ಬಿ.ಆರ್.ನರಸಿಂಹನಾಯ್ಡು ನಿಯೋಗ ಮನವಿ ಸಲ್ಲಿಸಿತ್ತು   

ಬಾಗೇಪಲ್ಲಿ: ತಾಲ್ಲೂಕನ್ನು ಪ್ಲೋರೊಸಿಸ್ ರೋಗದಿಂದ ಮುಕ್ತಗೊಳಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಮತ್ತು ಬಾಗೇಪಲ್ಲಿ, ಗುಡಿಬಂಡೆ ಪಟ್ಟಣದ ಜನರ ಕುಡಿಯುವ ನೀರಿನ ಬವಣೆ ತಪ್ಪಿಸಲು ತಾಲ್ಲೂಕಿನ ಪರಗೋಡು ಬಳಿ ಚಿತ್ರಾವತಿ ಬ್ಯಾರೇಜು ನಿರ್ಮಿಸಲು ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಶ್ರಮಿಸಿದ್ದರು.

ಮುಂಗಾರು, ಹಿಂಗಾರು ಮಳೆ ಇಲ್ಲದೇ ಪರಿತಪಿಸುವಂತಹ ಕಾಲಘಟ್ಟದಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿತ್ತು. ಗೂಳೂರು, ಮಿಟ್ಟೇಮರಿ ಚೇಳೂರು, ಮಿಟ್ಟೇಮರಿಯ ಗ್ರಾಮಗಳಲ್ಲಿ ಪ್ಲೋರೊಸಿಸ್ ರೋಗ ಉಲ್ಬಣಗೊಂಡಿತ್ತು.

ಚಿತ್ರಾವತಿ ನದಿ ನೀರು ಆಂಧ್ರಕ್ಕೆ ಹರಿಯುತ್ತಿತ್ತು. ತಾಲ್ಲೂಕಿನ ಪರಗೋಡು ಬಳಿ ಚಿತ್ರಾವತಿ ಬ್ಯಾರೇಜು ನಿರ್ಮಾಣ ಮಾಡಲು ಅಂದಿನ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಂತರ ಬಂದ ಪಕ್ಷೇತರ ಶಾಸಕ ಎನ್.ಸಂಪಂಗಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಳಿಗೆ ಪುರಸಭೆ ಅಧಿಕಾರಿ, ಸದಸ್ಯರ ನಿಯೋಗ ಕರೆದುಕೊಂಡು ಹೋಗಿದ್ದರು. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಚಿತ್ರಾವತಿ ಬ್ಯಾರೇಜಿನ ನಿರ್ಮಾಣಕ್ಕೆ ₹80 ಕೋಟಿ ನೀಡಿದ್ದರು.

ADVERTISEMENT

ಚಿತ್ರಾವತಿ ಬ್ಯಾರೇಜು ನಿರ್ಮಾಣಕ್ಕೆ ಆಂಧ್ರದ ಅಂದಿನ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಹಾಗೂ ಶಾಸಕ ಪೆರಿಟಾಲರವಿ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಬೆಂಬಲಿಗರೊಂದಿಗೆ ಗಡಿಯನ್ನು ಪ್ರವೇಶ ಮಾಡಲು ಪಾದಯಾತ್ರೆ ಮಾಡಿ, ಚಿತ್ರಾವತಿ ಬ್ಯಾರೇಜಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದರು. ರಾಜ್ಯದ ಗಡಿಗೆ ಪ್ರವೇಶ ಮಾಡಿದ ಆಂಧ್ರಪ್ರದೇಶದ ಟಿಡಿಪಿ ಶಾಸಕ ಪೆರಿಟಾಲ ರವಿ ಹಾಗೂ ಬೆಂಬಲಿಗರನ್ನು ಪೊಲೀಸರು ಬಂಧಿಸಿದರು.

ಈ ಭಾಗದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಕೊಡಿ ಎಂದು ಅಂದಿನ ಶಾಸಕ ಎನ್.ಸಂಪಂಗಿ, ಎಸ್.ಎಂ.ಕೃಷ್ಣ ಸರ್ಕಾರದ ಮೂಲಕ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಬಳಿ ಪ್ಲೋರೊಸಿಸ್ ಬಾಧಿತ ಮಕ್ಕಳನ್ನು, ಮಹಿಳೆಯರನ್ನು ದೆಹಲಿಗೆ ಕಳಿಸಿದ್ದರು.

ಕುಡಿಯುವ ನೀರಿಗೆ ಯೋಜನೆ ಬಗ್ಗೆ ಕೇಂದ್ರ ಜಲ ಆಯೋಗ ಸ್ಥಳ ಪರಿಶೀಲನೆ ಮಾಡಿಸುವಂತೆ ಮಾಡಿಸಿದ್ದರು. ಇದರಿಂದ ಕೃಷಿಗೆ ಹಾಗೂ ನೀರಾವರಿ ಯೋಜನೆಗೆ ಇದ್ದ ಕಾಮಗಾರಿಯನ್ನು ಕೇವಲ ಕುಡಿಯುವ ನೀರಿನ ಬಳಕೆ ಮಾಡಿಕೊಳ್ಳಲು ಆಯೋಗ ಅನುಮತಿ ನೀಡಿತ್ತು. ನಂತರ ಒಂದೇ ವರ್ಷದಲ್ಲಿ ಚಿತ್ರಾವತಿ ಬ್ಯಾರೇಜಿನ ಕಾಮಗಾರಿ ಪೂರ್ಣವಾಯಿತು. ಬಾಗೇಪಲ್ಲಿ, ಗುಡಿಬಂಡೆಯ ಎರಡು ಪಟ್ಟಣ ಹಾಗೂ ಗ್ರಾಮೀಣ ಭಾಗದ 128 ಗ್ರಾಮಗಳಿಗೆ ಕುಡಿಯುವ ನೀರು ಹರಿಸುವ ಯೋಜನೆ ಮಾಡಿಸಿದ್ದರು.

ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜಿನ ಬೆಳ್ಳಿ ಮಹೋತ್ಸವದ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಷ ಡಾ.ಎಚ್.ನರಸಿಂಹಯ್ಯರವರಿಗೆ ಎಸ್.ಎಂ.ಕೃಷ್ಣ ಗೌರವಿಸಿದರು. ಅಂದಿನ ಸಂಸದ ಆರ್.ಎಲ್.ಜಾಲಪ್ಪ ಶಾಸಕ ಎನ್.ಸಂಪಂಗಿ ಇದ್ದರು.

ನ್ಯಾಷನಲ್ ಕಾಲೇಜಿನ ಬೆಳ್ಳಿ ಮಹೋತ್ಸವ: ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರು ಪಟ್ಟಣದಲ್ಲಿ ನ್ಯಾಷನಲ್ ಕಾಲೇಜು ಆರಂಭಿಸಿದ್ದರು. ಡಾ.ಎಚ್.ಎನ್ ಅವರ ಆಹ್ವಾನದ ಮೇರೆಗೆ ಕಾಲೇಜಿನ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಆಹ್ವಾನಿಸಲಾಗಿತ್ತು. ಬೆಳ್ಳಿ ಮಹೋತ್ಸವದ ಭವನದ ನಿರ್ಮಾಣಕ್ಕೆ ಎಸ್.ಎಂ.ಕೃಷ್ಣ ಭೂಮಿಪೂಜೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.