ADVERTISEMENT

ಕೂಲಿಗೆ ಚಕ್ಕರ್‌, ಪ್ರಚಾರಕ್ಕೆ ಹಾಜರ್!

ಬಿಸಿಲಲ್ಲಿ ಬಸವಳಿಯುವುದು ತಪ್ಪಿಸಿಕೊಂಡು ಮನೆ ಮನೆ ಮತಯಾಚನೆಗೆ ಮುಂದಾದ ಕೂಲಿಕಾರರು, ಊಟ–ಉಪಾಹಾರದ ಜತೆಗೆ ಸಂಬಳವೂ ಉಂಟು

ಜರುಗಹಳ್ಳಿ ರಾಮಾಂಜಿ
Published 21 ನವೆಂಬರ್ 2019, 19:45 IST
Last Updated 21 ನವೆಂಬರ್ 2019, 19:45 IST
ಇತ್ತೀಚೆಗೆ ನಾಮಪತ್ರ ಸಲ್ಲಿಸುವ ದಿನ ಚಿಕ್ಕಬಳ್ಳಾಪುರಕ್ಕೆ ಹರಿದು ಬಂದ ಜನಸಾಗರ
ಇತ್ತೀಚೆಗೆ ನಾಮಪತ್ರ ಸಲ್ಲಿಸುವ ದಿನ ಚಿಕ್ಕಬಳ್ಳಾಪುರಕ್ಕೆ ಹರಿದು ಬಂದ ಜನಸಾಗರ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಉಪ ಚುನಾವಣೆ ರಣ ಕಣ ರಂಗೇರಿದ್ದೇ, ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರು ಸಿಗದೆ ರೈತರು ಹೈರಾಣಾಗುತ್ತಿದ್ದಾರೆ.

ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ, ಬಹಿರಂಗ ಸಭೆ, ಸಮಾರಂಭ, ರೋಡ್ ಶೋ, ಮನೆ ಮನೆ ಪ್ರಚಾರ ಚುರುಕುಗೊಳ್ಳುತ್ತಿದ್ದಂತೆ ವಿವಿಧ ಪಕ್ಷಗಳ ಮುಖಂಡರು ಕಾರ್ಮಿಕರನ್ನು ಪ್ರಚಾರ ಕಾರ್ಯಕ್ಕೆ ಕರೆದುಕೊಂಡು ಹೋಗುತ್ತಿರುವ ಕಾರಣ ರೈತರು ಆಳುಗಳಿಗಾಗಿ ಪರದಾಡುವ ಸ್ಥಿತಿ ತಲೆದೋರಿದೆ.

ಅಭ್ಯರ್ಥಿಗಳು ತಮ್ಮ ಪ್ರತಿಷ್ಠೆಗಾಗಿ ಸ್ಥಳೀಯ ಮಟ್ಟದ ಮುಖಂಡರಿಂದ ಸಭೆ, ಪ್ರಚಾರಗಳಿಗೆ ರಾಜಕೀಯ ಶಕ್ತಿ ಪ್ರದರ್ಶಿಸಲು ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕಾರ್ಮಿಕರು ಕಷ್ಟದ ಕೆಲಸಕ್ಕಿಂತ ಸುತ್ತಾಡಿ ಬರುವ ಪ್ರಚಾರ ಕಾರ್ಯದತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಒಂದು ದಿನ ಒಂದು ಪಕ್ಷ, ಇನ್ನೊಂದು ದಿನ ಮತ್ತೊಂದು ಪಕ್ಷಕ್ಕೆ ಹೀಗೆ ಕರೆದ ಕಡೆಗಳೆಲ್ಲ ಪ್ರಚಾರಕ್ಕೆ ಹೋಗಿ ಹಣ ಪಡೆಯುತ್ತಿದ್ದಾರೆ.

ADVERTISEMENT

ಪ್ರಚಾರ ಕಾರ್ಯಕ್ಕೆ ಬರುವ ಕಾರ್ಮಿಕರಿಗೆ ದಿನಕ್ಕೆ ₹400 ರಿಂದ ₹500 ಕೂಲಿ ನೀಡುವ ಜತೆಗೆ ಊಟ, ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಹೀಗಾಗಿ, ಸುಲಭಕ್ಕೆ ಸಿಗುವ ಹಣದ ಆಸೆಗೆ ಕೂಲಿ ಆಳುಗಳು ತಾತ್ಕಾಲಿಕವಾಗಿ ಕೆಲಸಕ್ಕೆ ವಿರಾಮ ನೀಡಿ, ಪ್ರಚಾರದತ್ತ ಮುಖ ಮಾಡಿದ್ದಾರೆ ಎನ್ನುತ್ತಾರೆ ಮುಖಂಡರು.

ಈ ಬಾರಿ ಉತ್ತಮ ಮಳೆಯಾಗಿರುವ ಕಾರಣಕ್ಕೆ ರಾಗಿ ಬೆಳೆ ಚೆನ್ನಾಗಿ ಬೆಳೆದಿದೆ. ಸದ್ಯ ರಾಗಿ ಬೆಳೆ ಕಟಾವು ಹಂತ ತಲುಪಿದ್ದು, ಕೊಯ್ಲಿಗೆ ಕಾರ್ಮಿಕರು ಸಿಗದೆ ರೈತರು ಕಂಗಾಲಾಗುತ್ತಿದ್ದಾರೆ. ಕೂಲಿ ಕಾರ್ಮಿಕರ ಅಭಾವದಿಂದ ಮಾಲೀಕರೇ ಕೂಲಿಗಳಾಗಿ ಬದಲಾಗಿ ಜಮೀನುಗಳಲ್ಲಿ ಹಂತಹಂತವಾಗಿ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಅಳಿದುಳಿದ ಕಾರ್ಮಿಕರಿಗೆ ದುಂಬಾಲು ಬಿದ್ದು, ದುಬಾರಿ ಕೂಲಿ ನೀಡಿ ಕರೆತಂದು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.

ರೈತರು ಕೂಲಿ ಆಳುಗಳು ಸಿಗದ ಕಾರಣಕ್ಕೆ ಕೆಲ ರೈತರು ರಾಗಿ ಕಟಾವಿಗೆ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಹಿಗಾಗಿ, ಕಟಾವು ಯಂತ್ರಕ್ಕೆ ಬೇಡಿಕೆ ಬಂದಿದ್ದು, ಸದ್ಯ ಒಂದು ಎಕರೆ ರಾಗಿ ಬೆಳೆ ಕೊಯ್ಲಿಗೆ ₹3 ರಿಂದ ₹4 ಸಾವಿರ ನೀಡಲಾಗುತ್ತಿದೆ.

ಇನ್ನೊಂದೆಡೆ ಕಟ್ಟಡಗಳ ನಿರ್ಮಾಣ, ಪ್ಲಂಬರ್ ಕೆಲಸ, ಎಲೆಕ್ಟ್ರಿಕಲ್, ಮರಗೆಲಸ, ಟೈಲ್ಸ್, ಗ್ರಾನೈಟ್, ಪೇಂಟಿಂಗ್, ಕಬ್ಬಿಣದ ಕೆಲಸ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೆಲಸದ ಮೇಸ್ತ್ರಿಗಳಿಗೆ ಕೈಗೆ ಸಿಗದಂತಾಗಿದ್ದಾರೆ.

ದಿನವೀಡಿ ಬಿಸಿಲಿನಲ್ಲಿ ಬೆವರು ಹರಿಸುತ್ತಿದ್ದ ಕಾರ್ಮಿಕರು ಇದೀಗ ಬೆಳಿಗ್ಗೆ ಮತ್ತು ಸಂಜೆ ಕೆಲ ಹೊತ್ತು ಮನೆ ಮನೆಗೆ ಸುತ್ತಾಡಿ ತಮ್ಮನ್ನು ಕರೆತಂದ ಅಭ್ಯರ್ಥಿಯ ಕರಪತ್ರವನ್ನು ಹಂಚುತ್ತ ಕಂಡವರ ಬಳಿ ಮತಯಾಚನೆಯ ‘ಶಾಸ್ತ್ರ’ ಪೂರೈಸುತ್ತಿದ್ದಾರೆ. ಹೀಗಾಗಿ ನಿಗದಿತ ಗಡುವಿನೊಳಗೆ ಕಾಮಗಾರಿ ಮುಗಿಸಿಕೊಡುವ ಭರವಸೆ ನೀಡಿದ ಮೇಸ್ತ್ರಿಗಳಿಗೆ ಪೀಕಲಾಟ ಶುರುವಾಗಿದೆ.

ಪ್ರಚಾರ ಕಾರ್ಯಕ್ಕೆ ಹೋಗುವ ಮಹಿಳೆಯರಿಗೆ ಕನಿಷ್ಠ ₹300 ನೀಡಲಾಗುತ್ತಿದೆ. ಕೆಲವೆಡೆ ಪುರುಷರು ₹500ರ ವರೆಗೆ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ಮತದಾನ ಆಸುಪಾಸು ವಿಶೇಷ ಉಡುಗೊರೆ ನೀಡುವುದಾಗಿ ಅಭ್ಯರ್ಥಿಗಳು ಕಾರ್ಮಿಕರಿಗೆ ಆಮಿಷ ಒಡ್ಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪ್ರಚಾರ ಕಾರ್ಯದಲ್ಲಿ ಪುರುಷರಿಗಿಂತಲೂ ಮಹಿಳೆಯರದೇ ಸಿಂಹಪಾಲಿದೆ.

‘ಸುಲಭವಾಗಿ ಸಿಗುವ ಹಣದ ಆಸೆಗೆ ಕಾರ್ಮಿಕರು ಪ್ರಚಾರಕ್ಕೆ ಹೆಚ್ಚಾಗಿ ಹೋಗುತ್ತಿದ್ದಾರೆ. ಚುನಾವಣೆಯಲ್ಲಿ ಯಾರ ಪರ ಪ್ರಚಾರ ಮಾಡುತ್ತಾರೋ ಆ ಅಭ್ಯರ್ಥಿ ಒಂದೊಮ್ಮೆ ಗೆದ್ದರೆ ತಮಗೆ ಸರ್ಕಾರದ ಸವಲತ್ತುಗಳನ್ನು ಕೊಡಿಸುತ್ತಾರೆ ಎಂದು ಆಸೆ ಇಟ್ಟುಕೊಂಡು ಕೆಲವರು ಪ್ರಚಾರಕ್ಕೆ ಹೋಗುತ್ತಾರೆ. ಮತದಾನ ಮುಗಿಯುವ ವರೆಗೆ ತಾಲ್ಲೂಕಿನಲ್ಲಿ ಕೆಲಸಕ್ಕೆ ಕಾರ್ಮಿಕರು ಸಿಗುವುದು ಕಷ್ಟವಿದೆ’ ಎನ್ನುತ್ತಾರೆ ದೊಡ್ಡಪೈಲಗುರ್ಕಿ ನಿವಾಸಿ ಶ್ರೀನಿವಾಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.