ADVERTISEMENT

ಬಕ್ರೀದ್: ನಾಗರಿಕರ ಶಾಂತಿ ಸಭೆ

ಕೋವಿಡ್‌ ಮಾರ್ಗಸೂಚಿ ಪಾಲಿಸಲು ಮುಸ್ಲಿಂ ಮುಖಂಡರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 4:27 IST
Last Updated 12 ಜುಲೈ 2021, 4:27 IST
ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ನಾಗರಿಕರ ಶಾಂತಿ, ಸೌಹಾರ್ದ ಸಭೆಯಲ್ಲಿ ಮಾತನಾಡಿದ ಆರಕ್ಷಕ ವೃತ್ತ ನಿರೀಕ್ಷಕ ಜಿ.ಪಿ. ರಾಜು
ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ನಾಗರಿಕರ ಶಾಂತಿ, ಸೌಹಾರ್ದ ಸಭೆಯಲ್ಲಿ ಮಾತನಾಡಿದ ಆರಕ್ಷಕ ವೃತ್ತ ನಿರೀಕ್ಷಕ ಜಿ.ಪಿ. ರಾಜು   

ಚೇಳೂರು: ‘ದೇಶದಲ್ಲಿ ಕೊರೊನಾ ಸೋಂಕು ಇನ್ನೂ ಕಡಿಮೆಯಾಗಿಲ್ಲ. ಹಾಗಾಗಿ, ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ಬಕ್ರೀದ್ ಹಬ್ಬದ ಆಚರಣೆ ವೇಳೆಯಲ್ಲಿ ಪ್ರತಿಯೊಬ್ಬರು ಶಾಂತಿ, ಸೌಹಾರ್ದ ಕಾಪಾಡಬೇಕು’ ಎಂದು ಆರಕ್ಷಕ ವೃತ್ತ ನಿರೀಕ್ಷಕ ಜಿ.ಪಿ. ರಾಜು ಸೂಚಿಸಿದರು.

ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರಿಕರ ಶಾಂತಿ ಸೌಹಾರ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬಕ್ರೀದ್ ಹಬ್ಬವನ್ನು ಹಿಂದಿನ ವರ್ಷ ಶಾಂತಿಯುತವಾಗಿ ಆಚರಿಸಿದ್ದೀರಿ. ಈ ಬಾರಿಯೂ ಶಾಂತಿಯುತವಾಗಿ ಆಚರಿಸಲು ಎಲ್ಲಾ ಸಮುದಾಯದವರು ಕೈ ಜೋಡಿಸಬೇಕು ಎಂದು
ಹೇಳಿದರು.

ಈದ್ಗಾ ಮೈದಾನಗಳಲ್ಲಿ ಈ ಬಾರಿ ಪ್ರಾರ್ಥನೆ ಮಾಡುವಂತಿಲ್ಲ. ತೆರೆದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಒಟ್ಟುಗೂಡುವುದನ್ನು ನಿಷೇಧಿಸಲಾಗಿದೆ. ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆ ಮಾಡಲು ಸರ್ಕಾರ ಆದೇಶ ನೀಡುವವರೆಗೂ ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗಸೂಚಿ ಪಾಲಿಸಬೇಕಾಗಿದೆ ಎಂದರು.

ADVERTISEMENT

ಕೊರೊನಾ ಸಂಕಷ್ಟದ ಸಂದರ್ಭ ಇದಾಗಿದೆ. ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಅದಕ್ಕಾಗಿ ಮುಸ್ಲಿಂ ಮೌಲ್ವಿ ಅಥವಾ ಧರ್ಮಗುರುಗಳಿಂದ ಒಂದು ವಿಡಿಯೊ ಮಾಡಿಸಿ ಎಲ್ಲಾ ಕಡೆಗಳಲ್ಲಿಯೂ ಪ್ರಸಾರ ಆಗುವಂತೆ ಮಾಡಬೇಕು.

ಹಬ್ಬದ ಸಂದರ್ಭದಲ್ಲಿ ಪ್ರಚೋದನಾಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ನಾಗರಿಕರ ಹಿತ ಕಾಪಾಡುವುದು, ಶಾಂತಿ, ಸುವ್ಯವಸ್ಥೆ ಪಾಲನೆಯು ಪ್ರತಿಯೊಬ್ಬರ ಜವಾಬ್ದಾರಿ. ಸಣ್ಣಪುಟ್ಟ ಅಹಿತಕರ ಘಟನೆ ನಡೆದರೂ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರಿದರು.

ಹಬ್ಬಕ್ಕೂ ಮುನ್ನ ಮಸೀದಿಗಳ ಹತ್ತಿರ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆ ಬದಿಯಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಬೇಕು ಎಂದು ಮುಖಂಡರು ಮನವಿ ಮಾಡಿದರು.

ಜಾಮೀಯಾ ಮಸೀದಿ ಅಧ್ಯಕ್ಷ ಎಂ.ಎಸ್. ಅಬ್ದುಲ್‌ ಲತೀಫ್ ಮಾತನಾಡಿ, ಸರ್ಕಾರದ ನಿಯಮ ಪಾಲಿಸಿ ಹಬ್ಬ ಆಚರಿಸಲು ನಮ್ಮೆಲ್ಲರ ಸಹಕಾರವಿದೆ. ಕೊರೊನಾ ಸಂದರ್ಭ ಇದಾಗಿದೆ. ಬಹಳಷ್ಟು ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತೇವೆ. ಆ ಮೂಲಕ ಸರಳವಾಗಿ ಹಬ್ಬ ಆಚರಿಸುತ್ತೇವೆ ಎಂದರು.

ಸಭೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರತಾಪ್, ಬಾಗೇಪಲ್ಲಿ ಎಎಸ್ಐ ವೆಂಕಟರಮಣಪ್ಪ, ದೋಣಿಮೂರ್ತಿ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಟಿ.ಎಲ್. ಅಂಜಿನಪ್ಪ, ವಿದ್ಯಾದರ್, ಮುಸ್ಲಿಂ ಮುಖಂಡರಾದ ಅಲಿಂ ಬಾಷಾ, ಚಾಂದ್ ಬಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.