ADVERTISEMENT

ಎರಡು ವರ್ಷದಲ್ಲಿ ಎತ್ತಿನಹೊಳೆ ಪೂರ್ಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 6:51 IST
Last Updated 12 ಜೂನ್ 2025, 6:51 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಚಿಕ್ಕಬಳ್ಳಾಪುರ: ಮುಂದಿನ ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣವಾಗಬಹುದು. ಈ ಸಂಬಂಧ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸಚಿವರು, ಶಾಸಕರು ಮತ್ತು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗೌರಿಬಿದನೂರು ತಾಲ್ಲೂಕಿನ ಅಲಕಾಪುರ ಹೆಲಿಪ್ಯಾಡ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ADVERTISEMENT

ನಂದಿಗಿರಿಧಾಮದಲ್ಲಿ ಜೂ.19ರಂದು ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ  ಸಚಿವ ಸಂಪುಟ ಸಭೆ ನಡೆಯುತ್ತಿದೆ. ಅಲ್ಲಿ ಈ ಬೆಂಗಳೂರು ವಿಭಾಗದ ಜಿಲ್ಲೆಗಳ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಯಲಿದೆ ಎಂದರು.

ನರೇಂದ್ರ ಮೋದಿ ಅವರಿಂದ ದೇಶದಲ್ಲಿ ಬಡತನ ಕಡಿಮೆಯಾಗಿಲ್ಲ. ಬಡತನ ಹೋಗಲಾಡಿಸಲು ಅವರೇನು ಮಾಡಿದ್ದಾರೆ? ಗರೀಬಿ ಹಠಾವೋ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಂದ ಬಡತನ ಕಡಿಮೆಯಾಗಿದೆ. ಇವು ಕಾಂಗ್ರೆಸ್ ಸರ್ಕಾರದ ಯೋಜನೆಗಳು ಎಂದರು. 

ಜಲ ಜೀವನ್ ಯೋಜನೆಯಡಿ ರಾಜ್ಯ ಸರ್ಕಾರ ಶೇ 50 ಅನುದಾನ ನೀಡಿದ್ದಾರೆ ಕೇಂದ್ರ ಸರ್ಕಾರ ಶೇ 30 ಮತ್ತು ಫಲಾನುಭವಿಗಳು ಶೇ 20 ಹಣ ಭರಿಸುತ್ತಿದ್ದಾರೆ.  ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ರಾಜ್ಯ ಸರ್ಕಾರದ ಪಾಲು ಹೆಚ್ಚಿದ್ದರೂ ಆಯುಷ್ಮಾನ್ ಭಾರತ್ ಯೋಜನೆ ಕೇಂದ್ರ ಸರ್ಕಾರದ್ದು ಎನ್ನುತ್ತಾರೆ. ಅನೇಕ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಪ್ರಧಾನಿ ಹೆಸರಿರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಅನುದಾನ ಒದಗಿಸಲಾಗಿದೆ. ಕಳೆದ ವರ್ಷ ₹ 52,000 ಕೋಟಿ ಬಂಡವಾಳ ವೆಚ್ಚ ಇತ್ತು. ಈ ವರ್ಷ ₹ 83 ಸಾವಿರ ಕೋಟಿಯಾಗಿದೆ. ₹ 31,000 ಕೋಟಿ ಬಂಡವಾಳ ವೆಚ್ಚ ಒಂದು ವರ್ಷದಲ್ಲಿ ಹೆಚ್ಚಾಗಿದೆ. ಹೀಗಿರುವಾಗ ಸರ್ಕಾರ ದಿವಾಳಿ ಹೇಗೆ ಆಗಿದೆ ಎನ್ನುವ ಬಿಜೆಪಿಯವರ ಆರೋಪಗಳಲ್ಲಿ ಸತ್ಯವಿಲ್ಲ. ಗ್ಯಾರಂಟಿ ಯೋಜನೆಗಳಿಗೆ ₹ 50 ಸಾವಿರ ಕೋಟಿಗೂ ಹೆಚ್ಚು ಅನುದಾನ ಒದಗಿಸಲಾಗಿದೆ ಎಂದರು.

ನಮ್ಮ ಸರ್ಕಾರವು ಈ ಎರಡು ವರ್ಷಗಳಲ್ಲಿ 593 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಿದೆ. ಕೇಂದ್ರ ಸರ್ಕಾರ 600 ಭರವಸೆಗಳನ್ನು ನೀಡಿ ಶೇ 10ರಷ್ಟನ್ನೂ ಅನುಷ್ಠಾನಗೊಳಿಸಿಲ್ಲ ಎಂದು ಟೀಕಿಸಿದರು.

ಬೆಳಗಾವಿಯಲ್ಲಿ ಮಾತ್ರ ಹೊಸ ಜಿಲ್ಲೆ ರಚಿಸುವ ಬಗ್ಗೆ ಬೇಡಿಕೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಶಾಸಕರು, ಸಚಿವರು ಮಾತು ಸಂಸದರ ಸಭೆಯನ್ನು ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.