ADVERTISEMENT

ವರ್ಣಾಲಂಕೃತ ಅಂಗನವಾಡಿ ಕೇಂದ್ರ

ಆನೂರು: ಗೋಡೆಗಳ ಮೇಲೆ ಆಕರ್ಷಕ ಕಲಾಕೃತಿಗಳ ರಚನೆ

ಡಿ.ಜಿ.ಮಲ್ಲಿಕಾರ್ಜುನ
Published 7 ಮಾರ್ಚ್ 2021, 3:49 IST
Last Updated 7 ಮಾರ್ಚ್ 2021, 3:49 IST
ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದಲ್ಲಿ ಸಿಂಗಾರಗೊಂಡ ಅಂಗನವಾಡಿ ಕೇಂದ್ರ
ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದಲ್ಲಿ ಸಿಂಗಾರಗೊಂಡ ಅಂಗನವಾಡಿ ಕೇಂದ್ರ   

ಶಿಡ್ಲಘಟ್ಟ: ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳು ವರ್ಣರಂಜಿತ ಗೋಡೆ, ಕೊಠಡಿಗಳ ನಾಲ್ಕು ಗೋಡೆಗಳ ಮೇಲೆ ವಿವಿಧ ಆಕರ್ಷಕ ಕಲಾಕೃತಿ ಬರವಣಿಗೆ ಹಾಗೂ ಅಂಕಿಗಳಿಂದ ಅಲಂಕೃತಗೊಂಡು ಚಿಣ್ಣರನ್ನು ಕೈಬೀಸಿ ಕರೆಯುತ್ತಿವೆ.

ಇತ್ತೀಚಿನ ದಿನ‌ಗ‌ಳಲ್ಲಿ ಪಾಲಕರು ಮಕ್ಕಳಿಗೆ ವೈಭವಪೂರಿತ ‌ಕಲಿಕೆ ನೀಡುವ ಭಾವನೆಗಳು ಹೆಚ್ಚಾಗಿದ್ದು, ಖಾಸಗಿ ಆಂಗ ಮಾಧ್ಯಮದ ಚಿಲ್ಡ್ರನ್ಸ್‌ ಪ್ಲೇ ಹೋಂ, ಕಿಡ್ಸ್ ಶಾಲೆಗಳಿಗೆ ಮೊರೆ ಹೋಗುತ್ತಿದ್ದಾರೆ. ಖಾಸಗಿ ಕಿಡ್ಸ್‌ ಸೆಂಟರ್‌ಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ತಾಲ್ಲೂಕಿನ ಆನೂರು ಗ್ರಾಮದ ಅಂಗ‌ನವಾಡಿಯನ್ನು ಮಾದರಿ ಕೇಂದ್ರವನ್ನಾಗಿ ಸಿಂಗಾರಗೊಳಿಸಲಾಗಿದೆ.

ಈ ಹಿಂದೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಫೌಜಿಯಾ ತರನ್ನುಮ್ ಅವರು ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರದ ಅಂಗನವಾಡಿಯನ್ನೂ ಮಾದರಿ ಅಂಗನವಾಡಿ ಕೇಂದ್ರವನ್ನಾಗಿಸಬೇಕೆಂದು ಪಿಡಿಒಗಳಿಗೆ ನಿರ್ದೇಶನ ನೀಡಿದ್ದರು. ಅದರಂತೆ ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳು ಸುಸಜ್ಜಿತವಾಗಿ ಅಲಂಕೃತಗೊಂಡಿದ್ದು ಮಕ್ಕಳನ್ನು ಆಕರ್ಷಿಸುತ್ತಿವೆ.

ADVERTISEMENT

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಸೌಲಭ್ಯಗಳನ್ನು ಬಳಸಿಕೊಂಡು ಮತ್ತು ದಾನಿಗಳ ನೆರವಿನೊಂದಿಗೆ ಅಂಗನವಾಡಿ ಕೇಂದ್ರವನ್ನು ಮಾದರಿಯನ್ನಾಗಿ ರೂಪಿಸುತ್ತಿದ್ದು, ಜೊತೆಯಲ್ಲಿ ಡಿಜಿಟಲ್ ಗ್ರಂಥಾಲಯ ಕೂಡ ಸಿದ್ಧಗೊಳ್ಳುತ್ತಿದೆ.

‘ಆನೂರು ಗ್ರಾಮದ ಅಂಗನವಾಡಿ ಕಟ್ಟಡವನ್ನು ನರೇಗಾ ಯೋಜನೆಯಡಿ ₹ 8 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ₹ 1.4 ಲಕ್ಷ ರೂ ವೆಚ್ಚದಲ್ಲಿ ಈ ಕಟ್ಟಡಕ್ಕೆ ಮಳೆ ನೀರು ಸಂಗ್ರಹ ಅಳವಡಿಸಿದ್ದೇವೆ. ಕೈತೋಟವನ್ನು ₹ 25 ಸಾವಿರ ರೂ ವೆಚ್ಚದಲ್ಲಿ, ಸೋಕ್ ಪಿಟ್ ₹ 17 ಸಾವಿರ ವೆಚ್ಚದಲ್ಲಿ, 15ನೇ ಹಣಕಾಸಿನ ಯೋಜನೆಯಡಿ ಕಾಂಪೌಂಡ್ ಮತ್ತು ಅಂಗನವಾಡಿ ಆವರಣದ ಉದ್ಯಾನವನ್ನು ಅಭಿವೃದ್ಧಿ ಮಾಡಿಸಿದ್ದೇವೆ. ಕಟ್ಟಡಕ್ಕೆ ಬಣ್ಣ ಬಳಿಸಲು ಬೋದಗೂರು ಪ್ರಭಾಕರ್ ನೆರವು ನೀಡಿದ್ದಾರೆ. ಈಗಿನ ಜಿಲ್ಲಾ ಪಂಚಾಯಿತಿ ಸಿಇಒ ಶಿವಶಂಕರ್ ಅವರ ಒತ್ತಾಸೆಯಿಂದ ನಾವು ಡಿಜಿಟಲ್ ಗ್ರಂಥಾಲಯವನ್ನೂ ಸ್ಥಾಪಿಸಲು ಮುಂದಾಗಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ ತಿಳಿಸಿದರು.

‘ಅಂಗನವಾಡಿ ಕಟ್ಟಡದ ಗೋಡೆಗಳ ಮೇಲೆ ಮಕ್ಕಳಿಗೆ ಜ್ಞಾನ ನೀಡುವ ಉದ್ದೇಶದಿಂದ ವೈವಿಧ್ಯಮಯ ಚಿತ್ರಗಳನ್ನು, ಕಾರ್ಟೂನ್ ಚಿತ್ರಗಳನ್ನು ಕಲಾವಿದ ವಿಜಯ ಅವರು ರಚಿಸಿದ್ದಾರೆ. ಆವರಣದ ಹುಲ್ಲುಹಾಸು ಮತ್ತು ಮಕ್ಕಳು ಆಡಲು ಉಯ್ಯಾಲೆ ಮುಂತಾದ ಆಟಿಕೆಗಳು ಆಕರ್ಷಕವಾಗಿವೆ. ಗೋಡೆ ಮೇಲೆ ವರ್ಲಿ ಕಲೆಯ ಮೂಲಕ ಕಲಾವಿದ ಅಗ್ರಹಾರ ರಮೇಶ್ ಜನಪದ ರನ್ನು ತೋರಿಸಿದ್ದಾರೆ’ ಎಂದರು.

‘ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್, ನರೇಗಾ ಎಡಿ ಚಂದ್ರಪ್ಪ ಅವರು ಆಗಿಂದಾಗ್ಗೆ ಭೇಟಿ ನೀಡುತ್ತಾ ಈ ಕೆಲಸಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜಯೇಂದ್ರ ಮತ್ತು ಅಕ್ಷರ ದಾಸೋಹದ ಆಂಜನೇಯ ಅವರ ನೆರವನ್ನು ಮರೆಯುವಂತಿಲ್ಲ. ಮಕ್ಕಳಿಗೆ ಎಳೆ ವಯಸ್ಸಿನಿಂದಲೇ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.