ADVERTISEMENT

ಎತ್ತುಗಳಿಗೆ ಬಣ್ಣಬಣ್ಣದ ಬುರುಕಾ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 4:11 IST
Last Updated 15 ಜನವರಿ 2021, 4:11 IST
ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯ ರೈತ ನಾರಾಯಣಸ್ವಾಮಿ ಅವರು ಸಂಕ್ರಾಂತಿ ಪ್ರಯುಕ್ತ ತಮ್ಮ ಎತ್ತುಗಳಿಗೆ ಬಣ್ಣಬಣ್ಣದ ಬುರುಕಾ ಹಾಕಿ ಸಿಂಗರಿಸಿರುವುದು
ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯ ರೈತ ನಾರಾಯಣಸ್ವಾಮಿ ಅವರು ಸಂಕ್ರಾಂತಿ ಪ್ರಯುಕ್ತ ತಮ್ಮ ಎತ್ತುಗಳಿಗೆ ಬಣ್ಣಬಣ್ಣದ ಬುರುಕಾ ಹಾಕಿ ಸಿಂಗರಿಸಿರುವುದು   

ಶಿಡ್ಲಘಟ್ಟ: ಸಂಕ್ರಾಂತಿ ಕೃಷಿಕರ ಹಬ್ಬವೂ ಹೌದು. ಬೆಳೆದ ಪೈರು ಫಲಬಿಟ್ಟು ಬಿಸಿಲಿಗೆ ಬಾಗಿ ಕಟಾವಿಗೆ ಬರುವ ಕಾಲವೇ ಮಕರ ಸಂಕ್ರಾಂತಿಯ ಕಾಲ. ರೈತಾಪಿ ವರ್ಗ ಈ ಸಂಕ್ರಾಂತಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.

ಸಂಕ್ರಾಂತಿ ಕೃಷಿ ಪ್ರಧಾನ ಹಬ್ಬವಾದ್ದರಿಂದ ಕೃಷಿ ಕಾರ್ಯದಲ್ಲಿ ರೈತರ ಸಂಗಾತಿಗಳಾದ ಎತ್ತುಗಳನ್ನು ಸಂಕ್ರಾಂತಿಯ ಸಂದರ್ಭದಲ್ಲಿ ವಿಶೇಷವಾಗಿ ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ. ಹೀಗೆ ಮಾಡುವುದರಿಂದ ಅವುಗಳ ಮೈಗೆ ಕೃಷಿ ಕೆಲಸದಲ್ಲಿ ತೊಡಗಿಕೊಂಡಾಗ ಹಿಡಿದಿರುವ ಕ್ರಿಮಿಕೀಟಗಳು ನಾಶವಾಗುತ್ತವೆ ಎಂಬ ಭಾವನೆ ಕೂಡ ಇದೆ.

ಎತ್ತುಗಳ ಕೊಂಬುಗಳನ್ನು ಜೀವಿ ಅದಕ್ಕೆ ಬಣ್ಣ ಬಣ್ಣದ ಟೇಪನ್ನು ಕಟ್ಟಿ, ಬಲೂನುಗಳು ಹಾಗೂ ಗೆಜ್ಜೆಯನ್ನು ಕಟ್ಟುತ್ತಾರೆ. ಹೊಸ ಮೂಗುದಾರ, ಹಗ್ಗ, ಕುತ್ತಿಗೆಗೆ ಕರಿದಾರ ಹಾಕಿ ಅಲಂಕರಿಸುವರು.

ADVERTISEMENT

ಎತ್ತುಗಳು ಕಡಿಮೆಯಾಗುತ್ತಿರುವ ಈ ದಿನಮಾನದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯ ರೈತ ನಾರಾಯಣಸ್ವಾಮಿ ಅವರು ತಮ್ಮ ಹಿಂದಿನವರಿಂದ ಬಳುವಳಿಯಾಗಿ ಬಂದ ಎತ್ತುಗಳಿಗೆ ಹೊದ್ದಿಸುವ ಬಣ್ಣಬಣ್ಣದ ಹೊದ್ದಿಕೆ (ಬುರುಕಾ) ಹಾಕಿ ತಮ್ಮ ಎತ್ತುಗಳನ್ನು ವಿಶೇಷವಾಗಿ ಸಿಂಗರಿಸಿದ್ದರು.

‘ಎತ್ತುಗಳಿಗೆ ಹೊದ್ದಿಸುವ ಬಣ್ಣಬಣ್ಣದ ಬುರುಕಾ ನಮ್ಮ ತಾತ ಅಕ್ಕಲಪ್ಪನವರ ಕಾಲದ್ದು. ತಂದೆ ಹನುಮಂತರಾಯಪ್ಪ ಸಹ ಎತ್ತುಗಳನ್ನು ಪ್ರೀತಿಯಿಂದ ಸಾಕುತ್ತಿದ್ದರು. ಸಂಕ್ರಾಂತಿಯಂದು ಎತ್ತುಗಳನ್ನು ಅಲಂಕರಿಸುವುದನ್ನು ನಾನು ಅವರಿಂದಲೇ ಕಲಿತದ್ದು. ನಮ್ಮ ತಾತ ಈ ಬಣ್ಣದ ಹೊದಿಕೆಯನ್ನು ನಮ್ಮದೇ ಗ್ರಾಮದ ವೆಂಕಟರೆಡ್ಡಿ ಅವರ ಮನೆಯಿಂದ ತಂದಿದ್ದರು. ಈಗಲೂ ಅದನ್ನು ನಾನು ಜತನದಿಂದ ಕಾಪಾಡಿಕೊಂಡು ಬಂದಿದ್ದೇನೆ’ ಎಂದು ಹರಳಹಳ್ಳಿ ನಾರಾಯಣಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.