ಚಿಕ್ಕಬಳ್ಳಾಪುರ: ಸಮುದಾಯಗಳು ಆರ್ಥಿಕ, ಸಾಮಾಜಿಕವಾಗಿ ಏಳಿಗೆ ಆಗಬೇಕಾದರೆ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಸಮುದಾಯಗಳು ಏಳಿಗೆಗೆ ಶಿಕ್ಷಣವೇ ಪ್ರಮುಖ ಅಸ್ತ್ರ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣವನ್ನೇ ಶಕ್ತಿಯನ್ನಾಗಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೂ ಸಹ ಶಿಕ್ಷಣದ ಪ್ರಾಮುಖ್ಯದ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.
ಕೌಶಲ ಎಂಬುದು ತಾಂತ್ರಿಕವಾಗಿ ನಿರಂತರವಾಗಿ ಬದಲಾವಣೆ ಆಗುತ್ತಿರುತ್ತದೆ. ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಬೇಕು. ವಾಸ್ತುಶಿಲ್ಪಿಗಳನ್ನು ನಿಜವಾದ ಎಂಜಿನಿಯರ್‌ಗಳು ಎಂದು ಕರೆಯಲಾಗುತ್ತದೆ. ದೈವಿಕ ವಾಸ್ತುಶಿಲ್ಪಿ ಮತ್ತು ಕುಶಲಕರ್ಮಿ ಎಂದು ಪರಿಗಣಿಸಲ್ಪಟ್ಟ ಭಗವಾನ್ ವಿಶ್ವಕರ್ಮರನ್ನು ಗೌರವಿಸುವ ಮಹತ್ವದ ದಿನವಾಗಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತದೆ ಎಂದರು.
ಉಪನ್ಯಾಸಕ ಪಿ.ಎಲ್. ಮುನೇಶ್ವರಾಚಾರಿ, ಬ್ರಹ್ಮ ದೇವರು ವಿಶ್ವಕರ್ಮನನ್ನು ಭೂಮಿಯ ಮೇಲೆ ಸೃಷ್ಟಿಸಿದರು. ವಿಶ್ವಕರ್ಮ ಭೂಮಿಯಲ್ಲಿನ ಅರಮನೆಗಳನ್ನು, ಮಹಲುಗಳನ್ನು, ವಾಹನಗಳನ್ನು, ಆಯುಧಗಳನ್ನು ಹಾಗೂ ಇನ್ನಿತರ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿದರು ಎಂದರು.
ವಿಶ್ವಕರ್ಮರು ಇಂದ್ರಪುರಿ, ದ್ವಾರಕಾ, ಹಸ್ತಿನಾಪುರ, ಸ್ವರ್ಗಲೋಕ, ಲಂಕಾ ಇತ್ಯಾದಿಗಳನ್ನು ನಿರ್ಮಿಸಿದರು. ಆದ್ದರಿಂದ ಪ್ರತಿ ವರ್ಷ ವಿಶ್ವಕರ್ಮ ಜನ್ಮ ವಾರ್ಷಿಕೋತ್ಸವದಂದು ಉಪಕರಣಗಳನ್ನು, ಯಂತ್ರಗಳನ್ನು ಮತ್ತು ಕೈಗಾರಿಕಾ ಘಟಕಗಳನ್ನು ಪೂಜಿಸಲಾಗುತ್ತದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷ ಸಿ.ಬಿ ನವೀನ್ ಕುಮಾರ್, ಪದಾಧಿಕಾರಿಗಳಾದ ಬಿ.ವಿ. ಪ್ರಕಾಶ್ ಹಾಗೂ ಲಾವಣ್ಯ ಮಾತನಾಡಿದರು.
ಸಮುದಾಯದ ಹಿರಿಯರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ಸಮುದಾಯದ ಮುಖಂಡರಾದ ರಘುನಾಥಚಾರಿ, ಮಂಜುನಾಥಚಾರಿ, ನಂಜುಂಡಾಚಾರಿ, ಬ್ರಹ್ಮಚಾರಿ, ಹರೀಶ್ ಕುಮಾರ್, ಸುಬ್ಬಲಕ್ಷ್ಮಮ್ಮ, ನರೇಂದ್ರ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.