ADVERTISEMENT

ಹೂವಿಗೆ ಪರಿಹಾರ: ತೋಟಗಾರಿಕೆ ಇಲಾಖೆಗೆ 5,000 ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಸಲು ಮುಗಿಬಿದ್ದ ರೈತರು, ಅಧಿಕಾರಿಗಳ ತಂಡದ ಪರಿಶೀಲನೆ ಬಳಿಕ ಪರಿಹಾರ ಜಮೆ

​ಪ್ರಜಾವಾಣಿ ವಾರ್ತೆ
Published 30 ಮೇ 2020, 14:15 IST
Last Updated 30 ಮೇ 2020, 14:15 IST
ಚಿಕ್ಕಬಳ್ಳಾಪುರದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಹೂವು ಬೆಳೆಗಾರರು
ಚಿಕ್ಕಬಳ್ಳಾಪುರದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಹೂವು ಬೆಳೆಗಾರರು   

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಹೂವು ಬೆಳೆಗಾರರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಪರಿಹಾರಧನಕ್ಕೆ ಜಿಲ್ಲೆಯಲ್ಲಿ ಈವರೆಗೆ ಸುಮಾರು 5,000 ಅರ್ಜಿಗಳು ಸಲ್ಲಿಕೆಯಾಗಿವೆ.

ಜಿಲ್ಲೆಯಲ್ಲಿ ಸುಮಾರು 2,200 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬಗೆಯ ಹೂವುಗಳನ್ನು ಬೆಳೆಯಲಾಗುತ್ತದೆ. ಈ ಪೈಕಿ ಶೇ 80 ರಷ್ಟು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ, ಉಳಿದ ತಾಲ್ಲೂಕುಗಳಲ್ಲಿ ಶೇ 20 ರಷ್ಟು ಪ್ರಮಾಣದಲ್ಲಿ ಹೂವು ಬೆಳೆಯಲಾಗುತ್ತಿದೆ.

ಜಿಲ್ಲೆಯಲ್ಲಿ ಋತುಮಾನಿಕ ಹೂವುಗಳಾದ ಚೆಂಡು ಹೂ, ಸೇವಂತಿಗೆ, ಆಸ್ಟರ್ ಮತ್ತು ಬಹುವಾರ್ಷಿಕ ಹೂವುಗಳಾದ ಗುಲಾಬಿ, ಕನಕಾಂಬರ, ಗ್ಲಾಡಿಯೋಲಸ್, ಬರ್ಡ್ ಆಫ್ ಪ್ಯಾರೆಡೈಸ್ ಮುಂತಾದ ಹೂವುಗಳನ್ನು ಬೆಳೆಯಲಾಗುತ್ತದೆ.

ADVERTISEMENT

ಈ ಬಾರಿ ಕೊರೊನಾ ವೈರಸ್‌ ಸೋಂಕಿನ ಭೀತಿ ಬೆನ್ನಲ್ಲೇ ಸರ್ಕಾರದ ಕಟ್ಟುನಿಟ್ಟಿನ ಕ್ರಮದ ಪರಿಣಾಮ ಎಲ್ಲ ಸಭೆ, ಸಮಾರಂಭ, ಶುಭ ಕಾರ್ಯಗಳಿಗೆ ನಿರ್ಬಂಧ ಹೇರಿದ ಪರಿಣಾಮ ಹೂವು ಬೆಳೆಗಾರರು ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿತ್ತು.

ತರಕಾರಿ ಬೆಳೆದ ರೈತರು ಸಿಕ್ಕ ಅಲ್ಪಸ್ವಲ್ಪ ಬೆಲೆಗೆ ತರಕಾರಿ ಮಾರಾಟ ಮಾಡಿ ನಷ್ಟದಿಂದ ಪಾರಾಗಲು ಪ್ರಯತ್ನ ನಡೆಸಿದರಾದರೂ, ಆ ಅವಕಾಶವೂ ಹೂವು ಬೆಳೆಗಾರರ ಪಾಲಿಗೆ ಇಲ್ಲದಂತಾಯಿತು. ಪರಿಣಾಮ, ಲಕ್ಷಗಟ್ಟಲೇ ಬಂಡವಾಳ ಹುಡಿ ಹೂವು ಬೆಳೆದವರೆಲ್ಲ ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಹೊತ್ತು ಬಂದಿತ್ತು. ಅನೇಕರು ಹೂವಿನ ಬೆಳೆಗಳನ್ನು ಸಂಕಟದ ನಡುವೆಯೇ ಕಿತ್ತು ಹಾಕಿದರು.

ಹೂವು ಬೆಳೆಗಾರರ ಹಿತ ಕಾಯಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬಂದ ಪರಿಣಾಮ, ರಾಜ್ಯ ಸರ್ಕಾರ ಹೂವು ಬೆಳೆಗಾರರಿಗೆ ಮುಂಗಾರು ಬೆಳೆ ಸಮೀಕ್ಷೆಯ ಮಾಹಿತಿಯನ್ನು ಆಧಾರವಾಗಿರಿಸಿಕೊಂಡು ಪರಿಹಾರ ನೀಡುವ ನಿರ್ಧಾರಕ್ಕೆ ಬಂದು ಪರಿಹಾರ ಘೋಷಿಸಿತು.

ಹೂವು ಬೆಳೆಗಾರರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮೇ 28 ಕೊನೆ ದಿನವಾಗಿತ್ತು. ಅದನ್ನು ಇದೀಗ ಜೂನ್ 1ರ ವರೆಗೆ ವಿಸ್ತರಿಸಲಾಗಿದ್ದು, ರೈತರು ಪರಿಹಾರಕ್ಕಾಗಿ ಅರ್ಜಿ, ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿಯೊಂದಿಗೆ ಆಯಾ ತಾಲ್ಲೂಕು ತೋಟಗಾರಿಕೆ ಕಚೇರಿಗಳಿಗೆ ಮುಗಿಬಿದ್ದಿದ್ದಾರೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆಯಲ್ಲಿ ಇರುವಂತೆ ಹೂ ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯತಿ, ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ತೋಟಗಾರಿಕೆ ಕಚೇರಿಯ ನಾಮಫಲಕದಲ್ಲಿ ಪ್ರಕಟಿಸಲಿದ್ದಾರೆ.

ಬಳಿಕ, ರೈತರ ತಾಕುಗಳನ್ನು ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿ, ಕೃಷಿ ಅಧಿಕಾರಿ ಮತ್ತು ಗ್ರಾಮಲೆಕ್ಕಿಗರನ್ನು ಒಳಗೊಂಡ ಸಮಿತಿಯು ಪರಿಶೀಲನೆ ಮಾಡಿ, ಸ್ಥಳೀಯ ಪಂಚನಾಮೆ ಆಧಾರದ ಮೇರೆಗೆ ರೈತರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗಲಿದೆ.

ಜಿಲ್ಲೆಯ ಹೂವು ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಸುಮಾರು ₹12 ಕೋಟಿಗೂ ಅಧಿಕ ಬೆಳೆ ನಷ್ಟ ಪರಿಹಾರ ದೊರೆಯಬೇಕಿದೆ. ಬೆಳೆ ಇಡಲು ಮಾಡಿದ ಖರ್ಚಿಗೆ ಹೋಲಿಸಿದರೆ ಈ ಪರಿಹಾರ ಏತಕ್ಕೂ ಸಾಲದು ಎನ್ನುವುದು ಬೆಳೆಗಾರರ ವಾದ. ಆದರೂ, ‘ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ’ ಎನ್ನುವಂತೆ ಪರಿಹಾರದ ಹಣದಿಂದ ಮತ್ತೊಂದು ಬೆಳೆ ಇಡಲಾದರು ಅನುಕೂಲವಾದೀತು ಎಂಬ ಆಸೆ ಅನೇಕರಲ್ಲಿ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.