ADVERTISEMENT

ಚಿಕ್ಕಬಳ್ಳಾಪುರ: ‘ಖಾಲಿ ಡಬ್ಬ’ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 6:28 IST
Last Updated 4 ಫೆಬ್ರುವರಿ 2026, 6:28 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬೀಜ ನಿಗಮದ ಅಧ್ಯಕ್ಷ ನಂದಿ ಆಂಜನಪ್ಪ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬೀಜ ನಿಗಮದ ಅಧ್ಯಕ್ಷ ನಂದಿ ಆಂಜನಪ್ಪ ಮಾತನಾಡಿದರು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ಮುಖಂಡ ಎನ್‌.ಸಿ.ವೆಂಕಟೇಶ್ ಅವರ ಹೇಳಿಕೆಗೆ ಕೆಲವು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಆಪ್ತರು ಎನಿಸಿದ್ದ ಮುಖಂಡರೇ ಈಗ ವಾಗ್ವಾದಕ್ಕೆ ಇಳಿದಿದ್ದಾರೆ.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ರಮೇಶ್ ಮತ್ತು ವೆಂಕಟೇಶ್, ಚಿಮುಲ್ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದರು. ವೆಂಕಟೇಶ್ ಗೆಲುವು ಸಾಧಿಸಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬೀಜ ನಿಗಮದ ಅಧ್ಯಕ್ಷ ನಂದಿ ಆಂಜನಪ್ಪ, ‘ಯಲುವಳ್ಳಿ ರಮೇಶ್ ಅವರನ್ನು ಬೆಂಬಲಿಸಿದ ಮುಖಂಡರನ್ನು ವೆಂಕಟೇಶ್ ಖಾಲಿ ಡಬ್ಬಗಳು ಎಂದಿದ್ದಾರೆ. ಹೌದು ನಾವು ಖಾಲಿ ಡಬ್ಬಾಗಳೇ. ಪಕ್ಷಕ್ಕೆ ದ್ರೋಹ ಬಗೆದು ಡಬ್ಬಾ ತುಂಬಿಸಿಕೊಂಡಿಲ್ಲ. ಕೋಚಿಮುಲ್‌ನಲ್ಲಿ ಅಕ್ರಮ ಎಸಗಿಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

‘ಚಿಮುಲ್ ಕ್ಷೇತ್ರ ಪುನರ್ ವಿಂಗಡಣೆಯೇ ಸರಿಯಿಲ್ಲ. ಯಾವುದೋ ಪಂಚಾಯಿತಿಯನ್ನು ಮತ್ತೆಲ್ಲಿಗೋ ಸೇರಿಸಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆಗೆ ನಮ್ಮ ವಿರೋಧವಿದೆ. ವೆಂಕಟೇಶ್ ಬಹಿರಂಗ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು. 

ಯಲುವಳ್ಳಿ ಎನ್.ರಮೇಶ್ ಮಾತನಾಡಿ, ‘ನಾನು ತಡವಾಗಿ ಚುನಾವಣಾ ಪ್ರಚಾರ ಆರಂಭಿಸಿದ ಕಾರಣ ನನಗೆ ಸೋಲಾಗಿದೆ. ನನ್ನ ಸೋಲಿಗೆ ಯಾರೂ ಕಾರಣರಲ್ಲ. ನಾನೇ ಕಾರಣ. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. 30 ಮಂದಿ ಮತ ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವೆ’ ಎಂದು ಹೇಳಿದರು.

‘ಕೋಚಿಮುಲ್‌ನಲ್ಲಿ ನಡೆದಿರುವ ಅವ್ಯವಹಾರಗಳ ಪಟ್ಟಿ ನನ್ನ ಬಳಿ ಇದೆ. ಚಿಮುಲ್ ಚುನಾವಣೆ ಧರ್ಮ, ಅಧರ್ಮದ ನಡುವಿನ ಚುನಾವಣೆ. ನನಗೆ ಅಡ್ಡದಾರಿ ಗೊತ್ತಿರಲಿಲ್ಲ. ಹಣದಿಂದ ಗೆದ್ದಿರಬಹುದು. ನಾನು ನ್ಯಾಯವಾಗಿ ಚುನಾವಣೆ ಎದುರಿಸಿ ಸೋತಿದ್ದೇನೆ’ ಎಂದು ಹೇಳಿದರು. 

ಮುಖಂಡ ಎಚ್‌.ವಿ.ಸೋಮಶೇಖರ್, ಕೆ.ಎಂ.ಮುನೇಗೌಡ, ವಕೀಲ ನಾರಾಯಣಸ್ವಾಮಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.