ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ: ದೇಶವನ್ನು ಇಷ್ಟು ವರ್ಷ ಒಡೆದಿದ್ದು ಸಾಕಾಗಲಿಲ್ಲ. ಈಗ ಕರ್ನಾಟಕದಲ್ಲಿ ಜಾತಿ, ಉಪಜಾತಿಗಳನ್ನು ಕಾಂಗ್ರೆಸ್ ಒಡೆಯುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪಿಸಿದರು.
ತಾಲ್ಲೂಕು ಪೆರೇಸಂದ್ರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿಯನ್ನು ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರ ಮಾತ್ರ ಜಾತಿ ಗಣತಿ ಮಾಡಬಹುದು ಎಂದು ಸಂವಿಧಾನದಲ್ಲಿಯೇ ಹೇಳಲಾಗಿದೆ. ಆದರೆ ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಜಾತಿ, ಉಪಜಾತಿಗಳನ್ನು ವಿಭಾಗಿಸುತ್ತಿದೆ ಎಂದರು.
ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಪರಿಶಿಷ್ಟ ಜಾತಿ ಕ್ರಿಶ್ಚಿಯನ್ ಹೀಗೆ ವಿಂಗಡಿಸುವ ಉದ್ದೇಶವೇನು? ಕಾಂಗ್ರೆಸ್‌ನವರು ಬಸವಣ್ಣನವರೇ ಆದರ್ಶ ಎನ್ನುತ್ತಾರೆ. ಹೀಗೆ ಜಾತಿಗಳನ್ನು ಉಪಜಾತಿಗಳನ್ನು ವಿಭಾಗಿಸಿ ಎಂದು ಬಸವಣ್ಣ, ಅಂಬೇಡ್ಕರ್ ಅವರು ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಸೇರಿದಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡುವ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಲಾಗುತ್ತಿದೆ. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಈ ಸಮುದಾಯಗಳಿಗೆ ಎಸಗುವ ದ್ರೋಹ ಅಲ್ಲವೇ ಎಂದರು.
ಈ ಹಿಂದೆ ಕಾಂತರಾಜು ಅವರ ಸಮಿತಿ ನೇಮಿಸಿದ್ದರು. ₹200ರಿಂದ ₹ 300 ಕೋಟಿ ಖರ್ಚು ಮಾಡಿದ್ದರು. ಅದನ್ನು ಸ್ವೀಕಾರ ಮಾಡಿದರೇ? ಜನರ ತೆರಿಗೆ ಹಣವನ್ನು ಅವರಿಗೆ ಇಷ್ಟಬಂದ ರೀತಿಯಲ್ಲಿ ಪೋಲು ಮಾಡಿದರು. ಹೀಗೆ ಪೋಲು ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಎಲ್ಲ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಸರ್ವವ್ಯಾಪಿ ಸರ್ವಸ್ಪರ್ಶಿ ಆಡಳಿತ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಅದೇ ರೀತಿಯಲ್ಲಿ ಸರ್ವವ್ಯಾಪಿಯಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದರು.
ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಆಯ್ಕೆ ಅಸಿಂಧು ಎಂದು ಹೈಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷ ಅನೇಕ ದಶಕಗಳಿಂದ ವಾಮಮಾರ್ಗದಲ್ಲಿ ಗೆಲ್ಲುವುದನ್ನು ರೂಢಿ ಮಾಡಿಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಇವಿಎಂ ಮೂಲಕ ಪಾರದರ್ಶಕವಾದ ಚುನಾವಣೆಗಳು ನಡೆಯುತ್ತಿದೆ. ಆದರೆ ಇವಿಎಂ ಇದ್ದಾಗಲೂ ನಂಜೇಗೌಡರನ್ನು ಗೆಲ್ಲಿಸಲಾಗಿದೆ. ಮರು ಎಣಿಕೆಯಲ್ಲಿ ಮಂಜುನಾಥ ಗೌಡರು ಮತ್ತೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
‘ರಾಜಕೀಯವಾಗಿ ಬಗ್ಗಿಸಲು ಆಗುವುದಿಲ್ಲ’ ಲೋಕಸಭಾ ಚುನಾವಣೆ ವೇಳೆ ಮಾದನಾಯಕನಹಳ್ಳಿ ಮನೆಯಲ್ಲಿ ದೊರೆತ ಹಣ ನನ್ನದಲ್ಲ. ಹೀಗಿದ್ದರೂ ದುರುದ್ದೇಶದಿಂದ ಕುತಂತ್ರಿಗಳು ನನ್ನ ರಾಜಕೀಯವಾಗಿ ಬಗ್ಗಿಸಬೇಕು ಎಂದು ಹುನ್ನಾರ ಮಾಡಿದ್ದರು. ಅದು ಆಗಲಿಲ್ಲ ಆಗುವುದೂ ಇಲ್ಲ ಎಂದು ಡಾ.ಕೆ.ಸುಧಾಕರ್ ತಿಳಿಸಿದರು. ಈ ವಿಚಾರವು 14 ತಿಂಗಳಿನಿಂದ ನ್ಯಾಯಾಲಯದಲ್ಲಿ ಇತ್ತು. ಈಗ ಅಂತಿಮ ಆದೇಶವಾಗಿದೆ. ನನಗೂ ಆ ಹಣಕ್ಕೂ ಸಂಬಂಧವಿಲ್ಲ. ಅಧಿಕಾರಿಗಳ ತಪ್ಪಿನಿಂದ ನನ್ನ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ. ಸುಧಾಕರ್ ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಆದೇಶಕ್ಕೆ ತಲೆಬಾಗುವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.