
ಶಿಡ್ಲಘಟ್ಟ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿ.ಎಂ ಮತ್ತು ಡಿಸಿಎಂ ನಡುವೆ ಕುರ್ಚಿ ಕಿತ್ತಾಟದಿಂದ ರಾಜ್ಯದ ಜನತೆಯ ಹಿತ ಕಾಪಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆರೋಪಿಸಿದರು.
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ, ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿಯ ರೈತ ಮೋರ್ಚಾ ಹಾಗೂ ವಿವಿಧ ಘಟಕಗಳಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆದಿದೆ. ಇದರಿಂದ ಅವರಿಬ್ಬರು ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ರಾಜ್ಯದ ರೈತರು, ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಲು ಪುರುಸೊತ್ತೂ ಇಲ್ಲ, ವ್ಯವಧಾನವೂ ಇಲ್ಲದಾಗಿದೆ ಎಂದು ದೂರಿದರು.
ಸಿ.ಎಂ ಮನೆಯಲ್ಲಿ ಡಿಕೆ ಶಿವಕುಮಾರ್ ತಿಂಡಿ, ಡಿ.ಕೆ ಮನೆಯಲ್ಲಿ ಸಿ.ಎಂ ಸಿದ್ದರಾಮಯ್ಯ ಅವರು ತಿನ್ನುವುದರಲ್ಲಿ ತಲ್ಲೀನರಾಗಿದ್ದು ರಾಜ್ಯದ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುವಂತ ಇವರಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ಮರೆತಿದೆ. ರೈತರ ಕಣ್ಣೀರಿಗೆ ಕಾರಣವಾಗಿದ್ದು ರೈತರ ಶಾಪ ತಟ್ಟಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯ ಸರ್ಕಾರವು ಮೆಕ್ಕೆಜೋಳದ ಖರೀದಿ ಕೇಂದ್ರ ಆರಂಭಿಸಿಲ್ಲ. ರಾಜ್ಯದ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದು ಇದ್ಯಾವುದರ ಗೊಡವೆಯೂ ನಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಕಿವಿ ಕೇಳಿಸದ, ಮಾತನಾಡಲು ಬಾರದದಂತ ಸರ್ಕಾರವಾಗಿದೆ ಎಂದರು.
ಜಂಗಮಕೋಟೆ ಹೋಬಳಿಯ ರೈತರ ಕೃಷಿ ಜಮಿನುಗಳನ್ನು ಕೆಐಡಿಬಿಗೆ ಹಸ್ತಾಂತರಿಸುವುದನ್ನು ಕೂಡಲೆ ಕೈ ಬಿಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಎನ್.ಗಗನ ಸಿಂಧು ಮನವಿ ಸ್ವೀಕರಿಸಿದರು.
ನಗರದ ಬಿಜೆಪಿ ಸೇವಾಸೌಧ ಕಚೇರಿಯಿಂದ ತಾಲ್ಲೂಕು ಕಚೇರಿವರೆಗೆ ಎತ್ತಿನಬಂಡಿಯಲ್ಲಿ ಆಗಮಿಸಿದ ಬಿಜೆಪಿ ಪ್ರಮುಖರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ, ಮಧು ಸೂರ್ಯನಾರಾಯಣ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ವಿ ರಾಜಶೇಖರ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಆಂಜನೇಯಗೌಡ, ಸೀಕಲ್ ಆನಂದ ಗೌಡ, ಕಂಬದಹಳ್ಳಿ ಸುರೇಂದ್ರಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.