ADVERTISEMENT

ಚಿಕ್ಕಬಳ್ಳಾಪುರಕ್ಕೆ ಕೈ ನಾಯಕರ ದಂಡು

ಜಿಲ್ಲೆಯಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುವುದೇ ಪಕ್ಷ; ಕಾಂಗ್ರೆಸ್‌ನಿಂದ ಪ್ರಜಾಧ್ವನಿ ಯಾತ್ರೆ ಇಂದು

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 4:38 IST
Last Updated 23 ಜನವರಿ 2023, 4:38 IST
ಪ್ರಜಾಧ್ವನಿ ಯಾತ್ರೆಯ ಅಂತಿಮ ಸಿದ್ಧತೆಗಳನ್ನು ವೀಕ್ಷಿಸಿದ ಕಾಂಗ್ರೆಸ್ ನಾಯಕರು
ಪ್ರಜಾಧ್ವನಿ ಯಾತ್ರೆಯ ಅಂತಿಮ ಸಿದ್ಧತೆಗಳನ್ನು ವೀಕ್ಷಿಸಿದ ಕಾಂಗ್ರೆಸ್ ನಾಯಕರು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಕಾಂಗ್ರೆಸ್ ಪ್ರಾಬಲ್ಯದ ಜಿಲ್ಲೆಗಳಲ್ಲಿ ಒಂದು. ಈ ಹಿಂದಿನ ಚುನಾವಣಾ ಹಿನ್ನೋಟಗಳನ್ನು ತೆರೆದು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಅಷ್ಟೇಕೆ 2018ರ ವಿಧಾನಸಭಾ ಚುನಾವಣೆಯಲ್ಲಿಯೇ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು.

ಈಗ ಮತ್ತೆ 2023ರ ವಿಧಾನಸಭಾ ಚುನಾವಣೆಗೆ ಪಕ್ಷದ ನಾಯಕರು ಸಿದ್ಧವಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಮತ್ತೆ 2018ರ ಚುನಾವಣೆಯಲ್ಲಿ ತೋರಿದ ಪಾರಮ್ಯವನ್ನು ಈ ಬಾರಿಯೂ ತೋರಲು ಸಿದ್ಧತೆಗಳನ್ನು ನಡೆಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆ ಸೋಮವಾರ ಮಧ್ಯಾಹ್ನ 3ಕ್ಕೆ ನಗರ ಪ್ರವೇಶಿಸಲಿದೆ. ಕೆ.ವಿ. ಕ್ಯಾಂಪಸ್ ಬಳಿ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪಕ್ಷದ ಜಿಲ್ಲಾ ಉಸ್ತುವಾರಿ ವಿ.ಎಸ್. ಉಗ್ರಪ್ಪ ಸೇರಿದಂತೆ ಪಕ್ಷದ ರಾಜ್ಯ ನಾಯಕರ ದಂಡೇ ಚಿಕ್ಕಬಳ್ಳಾಪುರಕ್ಕೆ ಬರಲಿದೆ.

ADVERTISEMENT

2018ರಲ್ಲಿ ಪ್ರಾಬಲ್ಯ: 2018ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಚಿಂತಾಮಣಿಯಲ್ಲಿ ಜೆಡಿಎಸ್ ಜಯ ಸಾಧಿಸಿತ್ತು. ಈಗ ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳು ಅಂತಿಮ ಎನ್ನುವ ಸ್ಥಿತಿ ಇದೆ. ಅಭ್ಯರ್ಥಿಗಳ ಘೋಷಣೆ ಮಾತ್ರ ಬಾಕಿ ಇದೆ.

ಜಿಲ್ಲೆಯಲ್ಲಿ ಗ್ರಾಮ ಮತ್ತು ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಕಾರ್ಯಕರ್ತರು ಮತ್ತು ನಾಯಕರ ದೊಡ್ಡಪಡೆಯೇ ಇದೆ. ಈ ಪಡೆಯನ್ನು ಮತ್ತಷ್ಟು ಜಾಗೃತಗೊಳಿಸಿ ಹುರಿದುಂಬಿಸಲು ಕೈ ನಾಯಕರ ಯಾತ್ರೆ ಕಾರಣವಾಗಲಿದೆ ಎಂದು ಪಕ್ಷದ ನಾಯಕರು ವಿಶ್ಲೇಷಿಸುತ್ತಿದ್ದಾರೆ.

ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ದೇಹ ಬೇರೆ ಆತ್ಮ ಒಂದೇ ಎನ್ನುವಂತಿವೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು. ಸಿದ್ದರಾಮಯ್ಯ ಅವರ ಸ್ಪರ್ಧೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೂ ಪರಿಣಾಮ ಬೀರಲಿದೆ. ಅಹಿಂದ ನಾಯಕ ಎನಿಸಿರುವ ಸಿದ್ದರಾಮಯ್ಯ ಆ ವರ್ಗಗಳ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.