ADVERTISEMENT

ಜನಧ್ವನಿ ಯಾತ್ರೆ: ಚಿಕ್ಕಬಳ್ಳಾಪುರದಲ್ಲಿ ‘ಕೈ’ ಶಕ್ತಿ ಪ್ರದರ್ಶನ

ಹರಿದು ಬಂದ ಕಾರ್ಯಕರ್ತರು; ಸಮಸ್ಯೆಗಳ ಕುರಿತು ಡಿ.ಕೆ.ಶಿವಕುಮಾರ್‌ಗೆ ಪತ್ರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 2:25 IST
Last Updated 4 ಮಾರ್ಚ್ 2021, 2:25 IST
ಜನಧ್ವನಿ ಯಾತ್ರೆಯಲ್ಲಿ ಕಾರ್ಯಕರ್ತರಿಗೆ ಹುರುಪು ತುಂಬಿದ ಕಲಾವಿದರು
ಜನಧ್ವನಿ ಯಾತ್ರೆಯಲ್ಲಿ ಕಾರ್ಯಕರ್ತರಿಗೆ ಹುರುಪು ತುಂಬಿದ ಕಲಾವಿದರು   

ಚಿಕ್ಕಬಳ್ಳಾಪುರ: ನಗರದ ಬಿಬಿ (ಬೆಂಗೂರು–ಬಳ್ಳಾರಿ) ರಸ್ತೆ ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿ ಆಯಿತು. ಜನಧ್ವನಿ ಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಟ್ರಾಕ್ಟರ್, ಬೈಕ್, ಎತ್ತಿನಗಾಡಿಗಳಲ್ಲಿ ಬಂದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ದೇವನಹಳ್ಳಿಯಿಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬರುವುದು ಸಂಜೆ ನಾಲ್ಕು ಗಂಟೆ ಆಯಿತು. ಅಷ್ಟರಲ್ಲಿ ಕಾರ್ಯಕರ್ತರು ಬಿಬಿ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಟೀಕಿಸುವ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಡೊಳ್ಳುಕುಣಿತ, ತಮಟೆ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳ ಕಲಾವಿದರು ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ಮೂಡಿಸಿದರು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕಂದಾವರ ಕೆರೆಗೆ ಭೇಟಿ ನೀಡಿ ಕೆರೆಗೆ ಬಾಗಿನ ಅರ್ಪಿಸಿದರು. ಅಲ್ಲಿಂದ ಬಿಬಿ ರಸ್ತೆಗೆ ತೆರೆದ ವಾಹನದಲ್ಲಿ ಬಂದರು. ಅಲ್ಲಿಂದ ಕಾರ್ಯಕರ್ತರ ಜತೆಗೂಡಿ ಶಿಡ್ಲಘಟ್ಟ ಸರ್ಕಲ್‌ವರೆಗೆ ಪಾದಯಾತ್ರೆಯಲ್ಲಿ ಸಾಗಿದರು.

ADVERTISEMENT

ಖುರ್ಚಿ ಬಿಡಿ: ’ಕೊರೊನಾ ಕಾರಣದಿಂದ ಖಜಾನೆ ಖಾಲಿ ಆಯಿತು. ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಖಜಾನೆ ಖಾಲಿ ಆಗಿದ್ದರೆ ಖುರ್ಚಿ ಬಿಡಿ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಚೆಕ್ ಮೂಲಕ ಲಂಚ ತೆಗೆದುಕೊಂಡ. ಅವನ ಮಗ ವಿಜಯೇಂದ್ರ ಈಗ ಆರ್‌ಟಿಜಿಎಸ್ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದಾನೆ ಎಂದು ಕಟುವಾಗಿ ಟೀಕಿಸಿದರು.

’ಅಕ್ಕಿ ಕೊಟ್ಟವರು ನಾವು, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್, ಸಾಲ ಮನ್ನಾ ಮಾಡಿದವರು ನಾವು. ಯಡಿಯೂರಪ್ಪ ನಿನ್ನದೇನಪ್ಪ? ನಿನ್ನದು ಜೀರೊ ಜೀರೊ‘ ಎಂದು ವ್ಯಂಗ್ಯವಾಡಿದರು.

ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ರೈತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರನ್ನು ಶೋಷಿಸುತಿದೆ. ಇವರ ಆಡಳಿತದಲ್ಲಿ ಕೆಲವೇ ಶ್ರೀಮಂತರು ಮಾತ್ರ ಚೆನ್ನಾಗಿದ್ದಾರೆ. ವಿರೋಧ ಪಕ್ಷವಾಗಿ ನಾವು ಜನರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಹಾಗೂ ಸರ್ಕಾರದ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದರು.

100 ಕ್ಷೇತ್ರದಲ್ಲಿ ಯಾತ್ರೆ: ದೇವನಹಳ್ಳಿಯಿಂದ ಜನಧ್ವನಿ ಯಾತ್ರೆ ಮಾಡಿದ್ದೇವೆ. ನಾವು ಸೋತ ಸುಮಾರು 100 ವಿಧಾನ ಸಭಾ ಕ್ಷೇತ್ರಗಳಲ್ಲಿ ಈ ಒಂದು ವರ್ಷದಲ್ಲಿ ಪ್ರವಾಸ ಮಾಡುವುದು ಈ ಯಾತ್ರೆ ಉದ್ದೇಶವಾಗಿದೆ ಎಂದು ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಬ್ರಿಟಿಷರ ಮನಸ್ಥಿತಿಯವರು. ದೇಶದ ರೈತರು ಅನ್ನ ನೀರು ಬಿಟ್ಟು ಹೋರಾಟ ಮಾಡುತ್ತಿದ್ದರೂ ಪ್ರಧಾನಿಗೆ ಕೇಳುವ ವ್ಯವಧಾನ ಇಲ್ಲ.

ಗೌರಿಬಿದನೂರಿನ ವಿಧುರಾಶ್ವತದಲ್ಲಿ ಬ್ರಿಟಿಷರ ಗುಂಡಿಗೆ 32 ರೈತರು ಬಲಿಯಾದರು. ಈಗ ಪ್ರತಿಭಟನೆಯಲ್ಲಿ ತೊಡಗಿದ್ದ 100 ರೈತರು ಮೃತರಾಗಿದ್ದಾರೆ. ಬ್ರಿಟಿಷರಿಗೂ ನರೇಂದ್ರ ಮೋದಿಗೂ ವ್ಯತ್ಯಾಸವಿಲ್ಲ ಎಂದು ಟೀಕಿಸಿದರು.

ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಅಡುಗೆ ಅನಿಲಕ್ಕೆ ₹ 5 ಲಕ್ಷ ಕೋಟಿ ಸಬ್ಸಿಡಿ ಕೊಡುತ್ತಿತ್ತು. ಆದರೆ ಈಗ ಎಲ್ಲವನ್ನೂ ಜನರ ಮೇಲೆ ಹೊರಿಸಲಾಗುತ್ತಿದೆ ಎಂದರು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ’ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ನೀರಾವರಿ ಯೋಜನೆ ಜಾರಿಯಾಯಿತು. ಇದರಿಂದ ಕೆರೆಗಳಿಗೆ ನೀರು ಹರಿದಿದೆ. ಎತ್ತಿನಹೊಳೆ ಯೋಜನೆ ಜಾರಿಯಲ್ಲಿದೆ. ಆದರೆ ಎತ್ತಿನಹೊಳೆ ಯೋಜನೆ ವೇಗ ಪಡೆಯುತ್ತಿಲ್ಲ. ಸರ್ಕಾರ ಈ ಯೋಜನೆಗೆ ಹಣ ನೀಡಬೇಕು ಎಂದು ಆಗ್ರಹಿಸಿದರು. ‌

ಶಾಸಕ ಸುಬ್ಬಾರೆಡ್ಡಿ, ವಿಧಾನ ಪರಿಷತ್ ವಿರೋಧ ನಾಯಕ ಎಸ್‌.ಆರ್.ಪಾಟೀಲ್, ಶಾಸಕ ವಿ.ಮುನಿಯಪ್ಪ ಮಾತನಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಎಐಸಿಸಿ ಕಾರ್ಯದರ್ಶೀ ಮಧುಯಾಸ್ಕಿ ಗೌಡ, ಕೃಷ್ಣಬೈರೇಗೌಡ, ನಾಸಿರ್ ಹುಸೇನ್, ಪುಷ್ಪಾ ಅಮರನಾಥ್, ರಕ್ಷಾ ರಾಮಯ್ಯ, ಎಸ್.ಎಂ.ಮುನಿಯಪ್ಪ, ಮುನೇಗೌಡ, ಮಹಮ್ಮದ್ ನಲಪಾಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಹಾಗೂ ಮುಖಂಡರು ಇದ್ದರು.

ಕಿರುಕುಳ ನೀಡಿದರೆ ಹೋರಾಟ
’ಚಿಕ್ಕಬಳ್ಳಾಪುರದಲ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಕಾರ್ಯಕರ್ತರೊಬ್ಬರು ನನಗೆ ಪತ್ರ ಕೊಟ್ಟಿದ್ದಾರೆ. ಡಿ.ಸಿ, ಎಸ್ಪಿ, ಡಿವೈಎಸ್ಪಿಗೆ ಹೇಳುತ್ತಿದ್ದೇನೆ. ನಮ್ಮ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಸಿದ್ದರಾಮಯ್ಯ ಮತ್ತು ನಾನು ಬಂದು ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ‘ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ನಾಶ ಸಾಧ್ಯವಿಲ್ಲ
ಕಾಂಗ್ರೆಸ್ ಎಂದಿಗೂ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಾಶವಾಗುವುದಿಲ್ಲ. ಈಗ ಸ್ವಲ್ಪ ವ್ಯತ್ಯಾಸವಾಗಿದೆ. ಆದರೆ ಪಕ್ಷಕ್ಕೆ ಗಟ್ಟಿ ನೆಲೆ ಇದ್ದೇ ಇದೆ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೊಸ ವಾತಾವರಣ ಕಂಡೆ. ಮೋದಿ ಮೋದಿ ಎಂದು ಹೇಳುತ್ತಿದ್ದ ಹುಡುಗರು ಡಿಕೆ ಡಿಕೆ ಎನ್ನತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಅನ್ನದಾತ ಎನ್ನುತ್ತಿದ್ದಾರೆ. ನಮ್ಮದೆಲ್ಲ ಒಂದೇ ದೃಷ್ಟಿ.‌ ಕಾಂಗ್ರೆಸ್ ಉಳಿದರೆ ದೇಶ ಉಳಿಯುತ್ತದೆ. ನಾವೆಲ್ಲರೂ ಒಗ್ಗೂಡಿ ನಡೆಯುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.