ADVERTISEMENT

ಶಿಡ್ಲಘಟ್ಟ | ಅಧಿಕಾರ ಹಂಚಿಕೆ ಹೈಕಮಾಂಡ್ ನಿರ್ಧಾರ: ಡಾ.ಎಂ.ಸಿ.ಸುಧಾಕರ್

ನ.8ಕ್ಕೆ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 6:22 IST
Last Updated 13 ಅಕ್ಟೋಬರ್ 2025, 6:22 IST
<div class="paragraphs"><p>ಶಿಡ್ಲಘಟ್ಟ ತಾಲ್ಲೂಕು ಚಿಕ್ಕದಿಬ್ಬೂರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್</p></div>

ಶಿಡ್ಲಘಟ್ಟ ತಾಲ್ಲೂಕು ಚಿಕ್ಕದಿಬ್ಬೂರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್

   

ಶಿಡ್ಲಘಟ್ಟ: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಮತ್ತು ಸಚಿವ ಸಂಪುಟ ವಿಸ್ತರಣೆ ವಿಚಾರ ನನಗೆ ಗೊತ್ತಿಲ್ಲ. ಪಕ್ಷದ ತೀರ್ಮಾನವೇ ಅಂತಿಮ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕದಿಬ್ಬೂರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆ ಹಿತ ದೃಷ್ಟಿಯಿಂದ ಪಕ್ಷದ ಹೈ ಕಮಾಂಡ್ ಯಾವುದೇ ಸಂದರ್ಭದಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದರು.

ADVERTISEMENT

ನ.8ಕ್ಕೆ ಸಿಎಂ ಭೇಟಿ: ಈ ತಿಂಗಳ 27ರಂದು ಸಿಎಂ ಸಿದ್ದರಾಮಯ್ಯ ಅವರು ₹200 ಕೋಟಿ ವೆಚ್ಚದ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಬೇಕಿತ್ತು. ಕಾರ್ಯ ಒತ್ತಡದಿಂದಾಗಿ ನ.8ಕ್ಕೆ ಮುಂದೂಡಲಾಗಿದೆ ಎಂದರು.

ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಟೆಂಟರ್ ಮುಗಿದು, ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ. ಸಿದ್ದರಾಮಯ್ಯ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಸಾದಲಿ ಬಳಿಯ ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ನಗರಕ್ಕೆ ಅಮೃತ್-2 ಯೋಜನೆಯಡಿ ₹60 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ. ನಗರದಲ್ಲಿ 2ನೇ ಹಂತದ ಒಳ ಚರಂಡಿ ಯೋಜನೆ. ಸಾದಲಿ ಬಳಿ ನಿರ್ಮಾಣವಾಗಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಅಂದೇ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಬೀದಿ ನಾಯಿಗಳ ಕಾಟ: ಬೀದಿ ನಾಯಿಗಳ ಹಾವಳಿ ಶಿಡ್ಲಘಟ್ಟ ನಗರಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಇದು ಎಲ್ಲ ಕಡೆಯೂ ವ್ಯಾಪಿಸಿದೆ. ನಾಯಿಗಳ ನಿಯಂತ್ರಣಕ್ಕೆ ಸರ್ಕಾರ ಬದ್ಧವಾಗಿದೆ. ಆದರೂ ನಾಯಿಗಳ ನಿಯಂತ್ರಣಕ್ಕೆ ನಾನಾ ರೀತಿಯ ನೀತಿ ನಿಯಮಗಳನ್ನು ಪಾಲಿಸಬೇಕಾಗಿದೆ. ಅದರ ನಿಯಂತ್ರಣಕ್ಕೆ ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂದರು.

ಒಂದು ಕಡೆ ಸುಪ್ರೀಂ ಕೋರ್ಟ್‌ ಸೂಚನೆ, ಇನ್ನೊಂದು ಕಡೆ ಪ್ರಾಣಿ ದಯಾ ಸಂಘದ ಕಾನೂನು ಪಾಲಿಸಿಕೊಂಡು ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ನಿಯಂತ್ರಣ ಮಾಡಬೇಕಿದೆ. ಇದಕ್ಕಾಗಿ ಅನೇಕ ಬಾರಿ ಟೆಂಡರ್ ಕರೆಯಲಾಗಿದೆ ಎಂದರು.

ಶ್ವಾನ ಪ್ರಿಯರು ನಾಯಿಗಳನ್ನು ಬೀದಿಗೆ ಬಿಡದೆ ಮನೆಯಲ್ಲಿಯೇ ಇರಿಸಿಕೊಳ್ಳಬೇಕಾಗುತ್ತದೆ. ಬೀದಿ ನಾಯಿಗಳಿಗೆ ತಿಂಡಿ ತಿನಿಸು ನೀಡದೆ ಪರೋಕ್ಷವಾಗಿ ಅವುಗಳ ನಿಯಂತ್ರಣಕ್ಕೆ ಸಹಕರಿಸಬೇಕಾಗುತ್ತದೆ ಎಂದು ಮನವರಿಕೆ ಮಾಡಿದರು.

ಜೆಡಿಎಸ್ ಮುಖಂಡ ಡಾ.ಧನಂಜಯರೆಡ್ಡಿ, ಪಿ.ಎಲ್‌.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಿ.ಸಿ.ರಾಮಚಂದ್ರ, ಡಿ.ಜೆ.ರಾಮಚಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಮುನಿಯಪ್ಪ, ಕೆ.ಆನಂದ್, ಸಂತೋಷ್‌ ಕ್ಯಾತಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.