
ಶಿಡ್ಲಘಟ್ಟ: ಬಿಜೆಪಿಯು ಮತಗಳ್ಳತನದಿಂದ ಅಧಿಕಾರ ಹಿಡಿಯುತ್ತಿದ್ದು ಮುಂದೊಂದು ದಿನ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಮತಗಳ್ಳತನಕ್ಕಾಗಿ ಬಿಜೆಪಿಯು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ತಿಳಿಸಿದರು.
ವೋಟ್ ಚೋರ್ ಗದ್ದಿ ಚೋಡ್ ವಿರುದ್ಧ ಸಹಿ ಸಂಗ್ರಹ ಅಭಿಯಾನದ ಯಶಸ್ಸಿನ ಹಿನ್ನೆಲೆಯಲ್ಲಿ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ, ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ವೋಟ್ ಚೋರ್ ಗದ್ದಿ ಚೋಡ್ ವಿರುದ್ಧ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಿದ್ದೀರಿ. ಇದೇ ಹುಮ್ಮಸ್ಸು ಮುಂದಿನ ಎಲ್ಲ ಚುನಾವಣೆಗಳಲ್ಲೂ ತೋರಿದರೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ನಮಗೆ ಗೆಲುವು ಖಚಿತ ಎಂದು ತಿಳಿಸಿದರು.
ಶಿಡ್ಲಘಟ್ಟದಲ್ಲಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು ಯಶಸ್ಸು ಮಾಡಿದ್ದೀರಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಿಯಾಗಿ ಎಲ್ಲ ಮುಖಂಡರು ಸಾಮೂಹಿಕವಾಗಿ ಶ್ರಮಿಸಿ ಸಹಿ ಸಂಗ್ರಹ ಅಭಿಯಾನವನ್ನು ಯಶಸ್ವಿಗೊಳಿಸಿ ವಿರೋಧಿಗಳಿಗೆ ಎಚ್ಚರಿಕೆ ರವಾನಿಸಿದ್ದೀರಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ ಉತ್ತಮ ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರೆಡ್ಡಿ ಅವರು ಸೇರಿ ಎಲ್ಲ ನಾಯಕರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಪಕ್ಷ ಸಂಘಟನೆ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ನಡೆಯಲಿದ್ದು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕನಿಷ್ಠ 30 ಮತದಾರರನ್ನು ನೋಂದಾಯಿಸಬೇಕು. ಗೆಲುವು ನಮ್ಮದಾಗಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕೇಂದ್ರದಲ್ಲೂ ನಮ್ಮ ಸರ್ಕಾರ ಬರಲಿದೆ. ಯಾರು ಹೆದರುವ, ಆತ್ಮಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳು ಹಾಗೂ ಸಾಧನೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತದಾರರಿಗೆ, ಜನ ಸಾಮಾನ್ಯರಿಗೆ ತಿಳಿಸುವ ಕೆಲಸ ಆಗಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಕೃಷ್ಣಾರೆಡ್ಡಿ, ಕೆಪಿಸಿಸಿ ಕೋ-ಆರ್ಡಿನೇಟರ್ ರಾಜೀವ್ ಗೌಡ ಅವರನ್ನು ಅಭಿನಂದಿಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಕೆಪಿಸಿಸಿ ಕೋ-ಆರ್ಡಿನೇಟರ್ ರಾಜೀವ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್‌ಗೌಡ, ಕೃಷ್ಣಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎ. ನಾಗರಾಜ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಬಿ.ವಿ.ಮುನೇಗೌಡ, ಪುಟ್ಟು ಆಂಜಿನಪ್ಪ, ಅಫ್ಸರ್ ಪಾಷ, ದೊಗರನಾಯಕನಹಳ್ಳಿ ವೆಂಕಟೇಶ್, ನಿರಂಜನ್ ಇನ್ನಿತರೆ ಮುಖಂಡರು ಹಾಜರಿದ್ದರು.
ಮಾತಿನ ಚಕಮುಕಿ ಅಭಿನಂದನಾ ಕಾರ್ಯಕ್ರಮಕ್ಕೆ ಅಭಿಷೇಕ್ ದತ್ ಆಗಮಿಸಿದ ವೇಳೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರ ಬೆಂಬಲಿಗರ ನಡುವೆ ಜೈಕಾರ ಘೋಷಣೆಗಳನ್ನು ಕೂಗುವ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು. ನೂಕಾಟ ತಳ್ಳಾಟ ನಡೆಯಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿ ಕಾಂಗ್ರೆಸ್ ಸೋಲಿಗೆ ಕಾರಣವಾದ ಪುಟ್ಟು ಆಂಜಿನಪ್ಪ ಅವರು ಹಾಗೂ ಅವರ ಬೆಂಬಲಿಗರಿಂದಲೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವಾಗುತ್ತಿದ್ದು ಅವರನ್ನು ಅವರ ಬೆಂಬಲಿಗರನ್ನು ಕಾಂಗ್ರೆಸ್ ಭವನದಿಂದ ಹೊರಗೆ ಕಳುಹಿಸಿ ಎಂದು ರಾಜೀವ್ ಗೌಡ ಬೆಂಬಲಿಗರು ಪಟ್ಟು ಹಿಡಿದರು. ಇದರಿಂದ ಕೆಲ ಕಾಲ ಎರಡೂ ಬಣಗಳ ನಡುವೆ ಮಾತಿನ ಚಕಮುಕಿ ಪರಸ್ಪರ ನಿಂದನೆ ಕೂಗಾಟ ತಳ್ಳಾಟ ನಡೆಯಿತು. ಒಂದು ಹಂತದಲ್ಲಿ ಪುಟ್ಟು ಆಂಜಿನಪ್ಪ ಅವರ ಕೆಲ ಬೆಂಬಲಿಗರನ್ನು ಕಾಂಗ್ರೆಸ್ ಭವನದಿಂದ ಪೊಲೀಸರು ಹೊರಕಳುಹಿಸಿ ಗದ್ದಲ ನಿವಾರಿಸಿದರು. ಅಭಿಷೇಕ್ ದತ್ ಅಭಿನಂದನೆ ಸಲ್ಲಿಸಿ ಹೊರಹೋಗುತ್ತಿದ್ದಂತೆ ಪುಟ್ಟು ಆಂಜಿನಪ್ಪ ಹಾಗೂ ಬೆಂಬಲಿಗರು ಕೂಡ ಕಾಂಗ್ರೆಸ್ ಭವನದಿಂದ ಹೊರ ಹೋದರು. ನಂತರ ಸಭೆ ಮುಂದುವರೆಯಿತು.
ಮುಖಂಡರ ಜತೆ ಮಾತುಕತೆ ಸಭೆಯಲ್ಲಿ ಗದ್ದಲವುಂಟಾದ ಕಾರಣ ಭಾಷಣ ಮಾಡದೆ ಅಭಿಷೇಕ್ ದತ್ ಅವರು ಇಬ್ಬರೂ ನಾಯಕರನ್ನು ಕರೆದು ಮಾತುಕತೆ ನಡೆಸಿದರು. ಈ ವೇಳೆ ಶಿಡ್ಲಘಟ್ಟದಲ್ಲಿ ಪುಟ್ಟು ಆಂಜಿನಪ್ಪ ಅವರು ಪ್ರತ್ಯೇಕವಾಗಿ ವೋಟ್ ಚೋರ್ ಗದ್ದಿ ಚೋಡ್ ಕಾರ್ಯಕ್ರಮ ನಡೆಸಿದ್ದು ಇದರಿಂದ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ರಾಜೀವ್ ಗೌಡ ಅವರು ಅಭಿಷೇಕ್ ದತ್ ಅವರ ಬಳಿ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್ ದತ್ ನಾನು ಪುಟ್ಟು ಆಂಜಿನಪ್ಪ ಅಥವಾ ಬೇರೆ ಯಾರಿಗೂ ವೋಟ್ ಚೋರ್ ಗದ್ದಿ ಚೋಡ್ ಅಭಿಯಾನ ನಡೆಸಲು ಸೂಚಿಸಿಲ್ಲ. ಯಾರೇ ಆಗಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಮತ್ತು ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಿದೆ. ಮುಂದಿನ ದಿನಗಳಲ್ಲೂ ಚುನಾವಣೆಗಳಾಗಲಿ ಕಾರ್ಯಕ್ರಮ ಹೋರಾಟಗಳಾಗಲಿ ಪಕ್ಷದ ನಿಯಮದಂತೆ ಬ್ಲಾಕ್ ಕಾಂಗ್ರೆಸ್ ಮತ್ತು ಮುಂಚೂಣಿ ಘಟಕಗಳ ಮೂಲಕವೇ ನಡೆಯಬೇಕು. ಇಲ್ಲವಾದಲ್ಲಿ ಯಾರೇ ಆಗಲಿ ಶಿಸ್ತು ಕ್ರಮ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.