ADVERTISEMENT

ಅಂಗನವಾಡಿ ಮಕ್ಕಳಿಗೆ ಮರದ ಅಡಿ ಅಡುಗೆ!

ಅನುಮೋದನೆ ಆಗಿದ್ದರೂ ಆರಂಭವಾಗದ ಹೊಸ ಅಂಗನವಾಡಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 5:52 IST
Last Updated 16 ಫೆಬ್ರುವರಿ 2023, 5:52 IST
ಸಾದಲಿ ಹೋಬಳಿಯ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಯಲಗಲಹಳ್ಳಿ ಗ್ರಾಮದ ಅಂಗನವಾಡಿ ಸಿಬ್ಬಂದಿ ಮರದ ಕೆಳಗಡೆ ಅಡುಗೆ ಮಾಡುತ್ತಿರುವುದು
ಸಾದಲಿ ಹೋಬಳಿಯ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಯಲಗಲಹಳ್ಳಿ ಗ್ರಾಮದ ಅಂಗನವಾಡಿ ಸಿಬ್ಬಂದಿ ಮರದ ಕೆಳಗಡೆ ಅಡುಗೆ ಮಾಡುತ್ತಿರುವುದು   

ಸಾದಲಿ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಮರದ ಕೆಳಗೆ ಮಾಡುತ್ತಿರುವ ದೃಶ್ಯ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಯಲಗಲಹಳ್ಳಿ ಗ್ರಾಮದಲ್ಲಿ ಕಂಡುಬಂತು.

ಯಲಗಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 16ಕ್ಕೂ ಹೆಚ್ಚಿನ ಮಕ್ಕಳಿದ್ದು ಎಲ್ಲರೂ ಪರಿಶಿಷ್ಟ ಜಾತಿ, ಜನಾಂಗದವರಾಗಿದ್ದಾರೆ. ಕುಟುಂಬದವರು ದಿನಗೂಲಿ ಕೆಲಸಕ್ಕೆ ಹೋಗುವವರೆ ಹೆಚ್ಚು. ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಬಿಟ್ಟು ಹೋದರೆ ಸಾಯಂಕಾಲವೇ ವಾಪಸ್‌ ಮನೆಗೆ ಕರೆದುಕೊಂಡು ಹೋಗುತ್ತಾರೆ. ಇಂತಹ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಯಾವುದೇ ಸರಿಯಾದ ಸೌಲಭ್ಯಗಳಿಲ್ಲ.

‘ಮಕ್ಕಳು ಕುಳಿತುಕೊಳ್ಳಲು ವ್ಯವಸ್ಥಿತವಾದ ಕಟ್ಟಡ ಇಲ್ಲ. ಅಡುಗೆ ಮಾಡಲು ಕೋಣೆಯೇ ಇಲ್ಲ. ಸುಮಾರು 6 ವರ್ಷಗಳ ಹಿಂದೆ ಅಂಗನವಾಡಿ ಕೇಂದ್ರಕ್ಕಾಗಿ ಪ್ರತ್ಯೇಕವಾದ ಕಟ್ಟಡ ನಿರ್ಮಿಸಲು ಪಾಯ ಹಾಕಿ ಅದೇ ಹಂತದಲ್ಲಿ ಕೊನೆ ಮಾಡಿದ್ದಾರೆ. ಪಂಚಾಯಿತಿಗೆ ಸಾಕಷ್ಟು ಬಾರಿ ಮಾಹಿತಿ ನೀಡಿ ಅಂಗಲಾಚಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮೇಲಾಧಿಕಾರಿಗಳಿಗೆ ಇಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದೇನೆ. ಯಾರೂ ಸ್ಪಂದಿಸಿಲ್ಲ’ ಎಂದು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ ಅಂಗನವಾಡಿ ಕೇಂದ್ರದ ಶಿಕ್ಷಕಿ ಕೃಷ್ಣಮ್ಮ.

ADVERTISEMENT

‘ಇಷ್ಟು ದಿನ ಪಕ್ಕದಲ್ಲೇ ಇರುವ ಸರ್ಕಾರಿ ಶಾಲೆಯ ಅನ್ನದಾಸೋಹ ಕೊಠಡಿಯಲ್ಲೇ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ತಯಾರಿ ಮಾಡಲಾಗುತ್ತಿತ್ತು. ಆದರೆ ಈಗ ಕಾರಣಾಂತರಗಳಿಂದ ಜಾಗ ನೀಡುತ್ತಿಲ್ಲ. ಈಗ ಮರದಡಿ ಅಡುಗೆ ಮಾಡುವ ಸ್ಥಿತಿ ಬಂದಿದೆ. ಮರದ ಕೆಳಗೆ ಅಡುಗೆ ಮಾಡುವಾಗ ಮಕ್ಕಳಿಗಾಗಲಿ, ಸಿಬ್ಬಂದಿಗಾಗಲಿ ತೊಂದರೆಯಾದರೆ ಅದಕ್ಕೆ ಯಾರು ಹೊಣೆಗಾರರು’ ಎನ್ನುತ್ತಾರೆ ಅವರು.

ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಸಮಸ್ಯೆ ಬಗೆಹರಿಸಿ ತಮ್ಮ ಗೌರವ ಉಳಿಸಿಕೊಳ್ಳಿ. ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥ ಲೋಕೇಶ್ ಹೇಳಿದರು.

ಕಟ್ಟಡ ನಿರ್ಮಾಣಕ್ಕೆ ಕ್ರಮ: ಅಂಗನವಾಡಿ ಕಾರ್ಯಕರ್ತೆ ಮತ್ತು ಶಿಕ್ಷಕರಿಗೆ ಕೆಲ ಭಿನ್ನಾಭಿಪ್ರಾಯಗಳಿಂದ ಈ ರೀತಿ ನಡೆದಿದೆ. ಒಂದು ತಿಂಗಳಲ್ಲಿ ಕಟ್ಟಡ ಪ್ರಾರಂಭ ಮಾಡಲು ಪ್ರಯತ್ನ ಮಾಡುತ್ತೇನೆ. ಅಲ್ಲಿಯತನಕ ಸರ್ಕಾರಿ ಶಾಲೆಯಲ್ಲಿ ಒಂದು ಕೊಠಡಿಯನ್ನು ಅಂಗನವಾಡಿಗೆ ಬಿಟ್ಟುಕೊಡಲು ಹೇಳಿದ್ದೇನೆ.

-ಮುನಿರಾಜು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.