ADVERTISEMENT

ಚಿಕ್ಕಬಳ್ಳಾಪುರ | ‘ಮಹಾ’ ಆಘಾತಕ್ಕೆ ಜಿಲ್ಲೆ ತತ್ತರ, ಕೋವಿಡ್‌ ಉಲ್ಭಣ

ಮುಂಬೈನಿಂದ ವಾಪಾಸಾದವರಿಂದ ಎರಡೇ ದಿನಗಳಲ್ಲಿ 71ಕ್ಕೆ ಏರಿದ ಕೋವಿಡ್ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 22 ಮೇ 2020, 19:45 IST
Last Updated 22 ಮೇ 2020, 19:45 IST
ಇತ್ತೀಚೆಗೆ ಮುಂಬೈನಿಂದ ವಾಪಾಸಾದವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಗೌರಿಬಿದನೂರು ಗಡಿಭಾಗದಲ್ಲಿ ತಪಾಸಣೆ ನಡೆಸಿದರು.
ಇತ್ತೀಚೆಗೆ ಮುಂಬೈನಿಂದ ವಾಪಾಸಾದವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಗೌರಿಬಿದನೂರು ಗಡಿಭಾಗದಲ್ಲಿ ತಪಾಸಣೆ ನಡೆಸಿದರು.   

ಚಿಕ್ಕಬಳ್ಳಾಪುರ: ಮುಂಬೈನಿಂದ ಇತ್ತೀಚೆಗಷ್ಟೇ ಜಿಲ್ಲೆಗೆ ವಾಪಾಸಾಗಿರುವ ಜನರಿಂದ ಜಿಲ್ಲೆಯಲ್ಲಿ ಎರಡೇ ದಿನಗಳಲ್ಲಿ ಕೋವಿಡ್‌ 19 ಪ್ರಕರಣಗಳು ಏಕಾಏಕಿ ಸ್ಫೋಟಗೊಂಡಿದೆ. ಸೋಂಕಿತರ ಸಂಖ್ಯೆ ಶುಕ್ರವಾರ 73ಕ್ಕೆ ಏರಿಕೆಯಾಗಿ ಜನರಲ್ಲಿ ತಲ್ಲಣ ಉಂಟು ಮಾಡಿದೆ.

ಮಹಾರಾಷ್ಟ್ರದಿಂದ ಮೇ 19 ರಂದು ಜಿಲ್ಲೆಗೆ ಗೌರಿಬಿದನೂರು ತಾಲ್ಲೂಕಿನ 138 ಮತ್ತು ಬಾಗೇಪಲ್ಲಿ ತಾಲ್ಲೂಕಿನ 109 ಜನರು ಸೇರಿದಂತೆ 247 ಜನರು ವಾಪಾಸಾಗಿದ್ದಾರೆ. ಈ ಪೈಕಿ ಗುರುವಾರ ಗೌರಿಬಿದನೂರು ತಾಲ್ಲೂಕಿನ ನಾಲ್ಕು ಕಾರ್ಮಿಕರಲ್ಲಿ ಕೋವಿಡ್‌ ಧೃಢಪಟ್ಟಿತ್ತು. ಅದರ ಬೆನ್ನಲ್ಲೇ ಶುಕ್ರವಾರ ಒಂದೇ ದಿನಕ್ಕೆ ಮತ್ತೆ 43 ಜನರಿಗೆ ಕೋವಿಡ್‌ ತಗುಲಿರುವುದು ಪತ್ತೆಯಾಗಿ ಜನರ ನಿದ್ದೆಗೆಡಿಸಿದೆ.

ಎರಡು ದಿನಗಳಲ್ಲಿ ವರದಿಯಾದ ಮುಂಬೈ ವಾಪಾಸಿಗರ ಪ್ರಕರಣಗಳಲ್ಲಿ 25 ಪುರುಷರು ಮತ್ತು 22 ಮಹಿಳೆಯರು ಸೇರಿದ್ದಾರೆ. ಆತಂಕದ ವಿಚಾರವೆಂದರೆ ಒಂದು ವರ್ಷ ಹೆಣ್ಣು ಮಗು ಸೇರಿದಂತೆ ಆರೇಳು ಮಕ್ಕಳಲ್ಲಿ ಕೂಡ ಕೋವಿಡ್‌ ಪತ್ತೆಯಾಗಿದೆ.

ADVERTISEMENT

ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಮುಂಬೈನಿಂದ ವಾಪಾಸಾದವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದ್ದು, ಈವರೆಗೆ 63 ಜನರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಇನ್ನೂ 139 ಜನರ ಮಾದರಿಗಳ ಫಲಿತಾಂಶವನ್ನು ಅಧಿಕಾರಿಗಳು ಎದುರು ನೋಡುತ್ತಿದ್ದು, ಅದರಲ್ಲಿ ಎಷ್ಟು ಜನರಿಗೆ ಕೋವಿಡ್‌ ತಗುಲಿರುತ್ತದೆ ಎಂಬ ಭೀತಿ ಆವರಿಸಿದೆ.

ಮುಂಬೈನಿಂದ ಹಿಂದಿರುಗಿದವರಿಗೆ ಜಿಲ್ಲಾಡಳಿತ ಗೌರಿಬಿದನೂರು ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಬಾಗೇಪಲ್ಲಿ ತಾಲ್ಲೂಕಿನ ತಿಮ್ಮಂಪಲ್ಲಿ ಕಸ್ತೂರಿ ಬಾ ಶಾಲೆ ಸೇರಿದಂತೆ ವಿವಿಧೆಡೆ ಕ್ವಾರಂಟೈನ್‌ಗೆ ಒಳಪಡಿಸಿದೆ. ಸೋಂಕಿತರನ್ನು ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಲ್ಲಿ ಮಾತ್ರ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಇದೀಗ ಬಾಗೇಪಲ್ಲಿಯಲ್ಲಿ ಕೂಡ ಕೋವಿಡ್‌ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ.

ಕಳೆದ ಮಾರ್ಚ್‌ ಎರಡನೇ ವಾರದಲ್ಲಿ ಜಿಲ್ಲೆಯ ಗೌರಿಬಿದನೂರಿನಲ್ಲಿ ಹಜ್ ಯಾತ್ರಿಕರಿಂದ ಕೋವಿಡ್‌ ಪ್ರಕರಣಗಳು ಮೊದಲು ವರದಿಯಾಗಿ, ಸರಣಿಯಲ್ಲಿ 12 ಜನರಿಗೆ ಕೋವಿಡ್ ವ್ಯಾಪಿಸಿಕೊಂಡು ಒಬ್ಬ ವೃದ್ಧೆಯನ್ನು ಬಲಿ ಪಡೆದಿತ್ತು. ಪರಿಸ್ಥಿತಿ ಕೈಮೀರುತ್ತಿರುವುದು ಅರಿತ ಸರ್ಕಾರ ಗೌರಿಬಿದನೂರಿಗೆ ವಿಶೇಷ ಅಧಿಕಾರಿ ನೇಮಕ ಮಾಡಿ, ಕಟ್ಟುನಿಟ್ಟಿನ ಲಾಕ್‌ಡೌನ್ ಮತ್ತು ಸೀಲ್‌ಡೌನ್‌ ಜಾರಿಗೊಳಿಸಿ ಕೋವಿಡ್‌ ನಿಗ್ರಹಿಸಿತ್ತು.

ಅದರ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಕಾಣಿಸಿಕೊಂಡ ಸೋಂಕಿಗೆ ಒಬ್ಬ ವ್ಯಕ್ತಿ ಮೃತಪಟ್ಟು ಒಂಬತ್ತು ಜನರು ಕೋವಿಡ್ ಪಿಡಿತರಾಗಿದ್ದರು. ಜಿಲ್ಲಾಡಳಿತ ಜಿಲ್ಲಾ ಕೇಂದ್ರದ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹೆಣಗುತ್ತಿರುವಾಗಲೇ ಕೋವಿಡ್‌ ವಾಣಿಜ್ಯ ನಗರಿ ಚಿಂತಾಮಣಿಗೆ ಅಡಿ ಇಟ್ಟಿತ್ತು. ಸದ್ಯ ಚಿಂತಾಮಣಿಯಲ್ಲಿ ಐದು ಜನರಿಗೆ ಕೋವಿಡ್‌ ತಲುಗಲಿದೆ.

‘ಹೊರ ರಾಜ್ಯಗಳಿಂದ ಬಂದವರಲ್ಲಿ ಮಾತ್ರ ಕೊರೊನಾ ಸೋಂಕು ಪತ್ತೆಯಾಗಿ,ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿವೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಜಿಲ್ಲಾಧಿಕಾರಿ ಆರ್.ಲತಾ.

ಎರಡೇ ದಿನಗಳಲ್ಲಿ ಸಂಖ್ಯೆ ದುಪ್ಪಟ್ಟು
ಮಾರ್ಚ್‌ನಿಂದ ಸುಮಾರು ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ 26 ಜನರಿಗೆ ಕೋವಿಡ್ ತಗುಲಿರುವುದು ಪತ್ತೆಯಾಗಿತ್ತು. ಇದೀಗ ಮಹಾರಾಷ್ಟ್ರದಿಂದ ಹಿಂತಿರುಗಿದವರ ದೆಸೆಯಿಂದ ಎರಡನೇ ದಿನಗಳಲ್ಲಿ ಏಕಾಏಕಿ 47 ಜನರಿಗೆ ಕೋವಿಡ್ ಅಂಟಿರುವುದು ಬೆಳಕಿಗೆ ಬಂದು, ಪ್ರಕರಣಗಳ ಸಂಖ್ಯೆ ಗಗನಮುಖಿಯಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 59, ಚಿಕ್ಕಬಳ್ಳಾಪುರದ 9 ಮತ್ತು ಚಿಂತಾಮಣಿಯ 5 ಜನರು ಸೇರಿದಂತೆ 73 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಕೆಲವೇ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 100 ಗಡಿ ದಾಟಲಿದೆ ಎಂಬ ಅಂದಾಜು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಜಿಲ್ಲಾಡಳಿತದ ನಿದ್ದೆಗೆಡಿಸಿದೆ.

ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಇಬ್ಬರು (ಗೌರಿಬಿದನೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರು) ಮೃತಪಟ್ಟಿದ್ದಾರೆ. ಉಳಿದಂತೆ 18 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ 53 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ದುಗುಡದಲ್ಲಿ ಉಸ್ತುವಾರಿ ಸಚಿವ
ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ವಿಚಾರದಲ್ಲಿ ಪ್ರಶಂಸೆಗೆ ಭಾಜನರಾಗಿದ್ದ ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಮಹಾರಾಷ್ಟ್ರದಿಂದ ಜನರು ಜಿಲ್ಲೆಗೆ ಬಂದು ಏಕಾಏಕಿ ಕೋವಿಡ್‌ ಪ್ರಕರಣಗಳು ಹೆಚ್ಚಳಕ್ಕೆ ಕಾರಣವಾಗಿದ್ದು ಬೇಸರದ ಜತೆಗೆ ದುಗುಡ ಉಂಟು ಮಾಡಿದೆ ಎನ್ನಲಾಗಿದೆ.

ಸೋಂಕು ವ್ಯಾಪಕವಾಗಿರುವ ಮಹಾರಾಷ್ಟ್ರದಿಂದ ಆರು ಬಸ್‌ಗಳಲ್ಲಿ ಚಿಕ್ಕಬಳ್ಳಾಪುರಕ್ಕೆ ಜನರನ್ನು ಕಳುಹಿಸಿಕೊಟ್ಟಿರುವ ಕ್ರಮದ ಬಗ್ಗೆ ಟ್ವಿಟ್‌ ಮೂಲಕ ಅಸಮಾಧಾನ ಹೊರಹಾಕಿರುವ ಸಚಿವರು ಇದು ದುರದೃಷ್ಟಕರ ಹಾಗೂ ದುಡುಕಿನ ನಿರ್ಧಾರ. ಹೊರರಾಜ್ಯಗಳ ಪ್ರಯಾಣಿಕರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಹುದೆಂಬ ಆತಂಕ, ದುಗುಡದಿಂದ ನಿದ್ದೆ ಬರುತ್ತಿಲ್ಲ. ಜಿಲ್ಲಾಡಳಿತ ಎಚ್ಚರವಹಿಸಬೇಕು ಎಂದು ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.