ADVERTISEMENT

ಚಿಕ್ಕಬಳ್ಳಾಪುರ: ಕೋವಿಡ್-19 ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 12 ಮೇ 2020, 7:35 IST
Last Updated 12 ಮೇ 2020, 7:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಚಿಂತಾಮಣಿಯ 10ನೇ ವಾರ್ಡ್‌ನ ನಿವಾಸಿ, 46 ವರ್ಷದ ವ್ಯಕ್ತಿಯಲ್ಲಿ ಮಂಗಳವಾರ ಕೋವಿಡ್ 19 ಇರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಚಿಂತಾಮಣಿಯ 10ನೇ ವಾರ್ಡ್‌ನ ನಿವಾಸಿ, 71 ವರ್ಷದ ವ್ಯಕ್ತಿಯೊಬ್ಬರಿಗೆ ಮೇ 9ರಂದು ಕೋವಿಡ್ ತಗುಲಿರುವುದು ಪತ್ತೆಯಾಗಿತ್ತು. ಮರುದಿನವೇ (ಮೇ 10) ಸೋಂಕಿತ ವ್ಯಕ್ತಿಯ 22ರ ಹರೆಯದ ಮೊಮ್ಮಗನಿಗೆ ಕೋವಿಡ್ ಅಂಟಿರುವುದು ದೃಢಪಟ್ಟಿತ್ತು. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದಾಗಿ ಅವರ ಮಗನಿಗೂ ಕೋವಿಡ್ ತಗಲಿರುವುದು ಮಂಗಳವಾರ ಪತ್ತೆಯಾಗಿದೆ.

ಚಿಂತಾಮಣಿಯಲ್ಲಿ ಮೊದಲ ಪ್ರಕರಣ ವರದಿಯಾಗುತ್ತಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಸುಮಾರು 200 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಿ, ಆರೋಗ್ಯ ತಪಾಸಣೆ ನಡೆಸಿ, ಯಾವುದೇ ಲಕ್ಷಣಗಳು ಕಂಡುಬರದವರಿಗೆ ಮನೆಯಲ್ಲಿಯೇ ಕೆಲ ವಾರ ಪ್ರತ್ಯೇಕವಾಗಿ ಇರುವಂತೆ ಸೂಚಿಸಿ ಕಳುಹಿಸುತ್ತಿದ್ದಾರೆ.

ADVERTISEMENT

ಈಗಾಗಲೇ ಜಿಲ್ಲಾಡಳಿತ ಚಿಂತಾಮಣಿಯ 9 ಮತ್ತು 10ನೇ ವಾರ್ಡ್‌ಗಳನ್ನು ಸೋಂಕು ಪೀಡಿತ ವಲಯವನ್ನಾಗಿ ಗುರುತಿಸಿ ಸೀಲ್‌ಡೌನ್ ಮಾಡಿದೆ. ಸ್ಥಳೀಯ ಜನರ ನೆರವಿಗಾಗಿ ನೋಡಲ್ ಅಧಿಕಾರಿಗಳು, ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 12, ಚಿಕ್ಕಬಳ್ಳಾಪುರದ ಒಂಬತ್ತು ಮತ್ತು ಚಿಂತಾಮಣಿಯ ಮೂರು ಜನರು ಸೇರಿದಂತೆ 24 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ.

ಈ ಪೈಕಿ ಇಬ್ಬರು (ಗೌರಿಬಿದನೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರು) ಮೃತಪಟ್ಟಿದ್ದಾರೆ. ಉಳಿದಂತೆ ಗೌರಿಬಿದನೂರಿನ 11, ಚಿಕ್ಕಬಳ್ಳಾಪುರದ ಆರು ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಐದು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.