ADVERTISEMENT

ಚಿಕ್ಕಬಳ್ಳಾಪುರ: ಇಲ್ಲಿ ಕೆಮ್ಮಿದರೆ ಆಸ್ಪತ್ರೆ ಒಳಗೂ ಬಿಟ್ಕೊಳಲ್ಲ!

ಜ್ವರ, ಕೆಮ್ಮಿನಿಂದ ಬಳಲುವವರಿಗೂ ಕೊರೊನಾ ಶಂಕೆ ವ್ಯಕ್ತಪಡಿಸಿ ಹೊರಗಡೆಯಿಂದಲೇ ಸಾಗ ಹಾಕುವ ಖಾಸಗಿ ಆಸ್ಪತ್ರೆಗಳು

ಈರಪ್ಪ ಹಳಕಟ್ಟಿ
Published 29 ಮಾರ್ಚ್ 2020, 19:30 IST
Last Updated 29 ಮಾರ್ಚ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ನೀವು ಅನೇಕ ದಿನಗಳಿಂದ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ನೀವು ನಿಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೇ ಹೋಗಿ ಚಿಕಿತ್ಸೆ ಪಡೆಯಿರಿ. ಒಂದೊಮ್ಮೆ ಹಣವಿದೆ ಎಂಬ ಜಂಭಕ್ಕೆ ಖಾಸಗಿ ಆಸ್ಪತ್ರೆಗಳತ್ತ ಕೆಮ್ಮುತ್ತ ಹೋದಿರೋ ನಿಮಗೆ ಇಲ್ಲದ ಭೀತಿ ಹುಟ್ಟಿಸಿ ನೆಮ್ಮದಿ ಕಳೆಯುತ್ತಾರೆ.

ಇದು ತುಸು ಅಚ್ಚರಿ ಎನಿಸಿದರೂ ವಾಸ್ತವ ಕೂಡ ಹೌದು! ಕೊರೊನಾ ಎಲ್ಲೆಡೆ ತಲ್ಲಣ ಸೃಷ್ಟಿಸುತ್ತಿದ್ದಂತೆ ಜಿಲ್ಲೆಯಾದ್ಯಂತ ಖಾಸಗಿ ಕ್ಲಿನಿಕ್‌ಗಳು ಬಾಗಿಲು ಮುಚ್ಚಿವೆ. ನಗರ, ಪಟ್ಟಣಗಳಲ್ಲಿ ಬಾಗಿಲು ತೆರೆದ ಕೆಲವೇ ಖಾಸಗಿ ಆಸ್ಪತ್ರೆಗಳು ಸಹ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿವೆ. ಆಸ್ಪತ್ರೆಗೆ ದಾಖಲಾದ ಒಳ ರೋಗಿಗಳು ಹಾಗೂ ತುರ್ತು ಚಿಕಿತ್ಸೆಗಾಗಿ ಬಂದವರಿಗಷ್ಟೇ ವೈದ್ಯಕೀಯ ಸೇವೆ ಒದಗಿಸುತ್ತಿವೆ.

ಇಂತಹ ಆಸ್ಪತ್ರೆಗಳಲ್ಲಿ ಕೆಮ್ಮು, ಜ್ವರದಿಂದ ಬಳಲುವವರು ಬಂದರೆ ಅಂತಹವರನ್ನು ಆಸ್ಪತ್ರೆ ಒಳಗೆ ಕೂಡ ಪ್ರವೇಶಿಸಲು ಬಿಡದೆ ಅಸ್ಪೃಶ್ಯರ ರೀತಿ ವಿಚಾರಿಸಿ, ಸರ್ಕಾರಿ ಆಸ್ಪತ್ರೆಯತ್ತ ಕಳುಹಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.

ADVERTISEMENT

ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಗೌರಿಬಿದನೂರಿನ 19 ವರ್ಷದ ಮುಸ್ಲಿಂ ಸಮುದಾಯದ ಯುವತಿಯೊಬ್ಬಳು ಭಾನುವಾರ ನಗರದಲ್ಲೇ ಇರುವ ಮಾನಸ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದ ವೇಳೆ ಇಂತಹ ಅನುಭವವಾಗಿದೆ.

ರೋಗಿಯನ್ನು ಆಸ್ಪತ್ರೆಯವರು ಹೊರಗಡೆಯೇ ನಿಲ್ಲಿಸಿ, ತಪಾಸಣೆಯನ್ನು ಕೂಡ ಮಾಡದೆ ಕೊರೊನಾ ಸೋಂಕು ಇರುವ ಶಂಕೆ ವ್ಯಕ್ತಪಡಿಸಿ ಬೆಂಗಳೂರಿನ ರಾಜೀವ್‌ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಶಿಫಾರಸು ಮಾಡಿದ್ದರು ಎಂದು ತಿಳಿದು ಬಂದಿದೆ.

ಮಾನಸ ಆಸ್ಪತ್ರೆ ವೈದ್ಯರ ಮಾತು ಕೇಳಿ ಆತಂಕಕ್ಕೆ ಒಳಗಾದ ಕುಟುಂಬದವರು ಯುವತಿಯೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದೌಡಾಯಿಸಿದ್ದರು. ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡ ಯುವತಿಯನ್ನು ವಿವಿಧ ಬಗೆಯ ತಪಾಸಣೆಗೆ ಒಳಪಡಿಸಿದಾಗ ಆಕೆಯಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಗೋಚರಿಸಿಲ್ಲ.

ಹೀಗಾಗಿ, ವೈದ್ಯರು ಜ್ವರ, ಕೆಮ್ಮಿಗೆ ಔಷಧಿ ನೀಡಿ, ತಲ್ಲಣಿಸಿದ ಯುವತಿಯ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿ ಮನೆಗೆ ಕಳುಹಿಸಿದರು. ಖಾಸಗಿ ಆಸ್ಪತ್ರೆಯವರು ಮಾಡಿದ ಅವಾಂತರಕ್ಕೆ ಯುವತಿಯ ಕುಟುಂಬದವರು ಹಿಡಿಶಾಪ ಹಾಕುತ್ತ ಮನೆಗೆ ವಾಪಾಸಾದರು.

‘ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಯುವತಿಯ ಕುಟುಂಬದವರು ಯಾರೂ ವಿದೇಶಕ್ಕೆ ಹೋಗಿ ಬಂದಿಲ್ಲ. ವಿದೇಶಕ್ಕೆ ಹೋಗಿ ಬಂದವರನ್ನೂ ಸಂಪರ್ಕಿಸಿಲ್ಲ. ಆದರೂ, ಗೌರಿಬಿದನೂರಿನ ಮಾನಸ ಆಸ್ಪತ್ರೆಯವರು ಯುವತಿಗೆ ಕೊರೊನಾ ಸೋಂಕಿದೆ ಎಂದು ಶಂಕಿಸಿದ್ದರು ಎಂದು ಯುವತಿಯ ಕುಟುಂಬದವರು ತಿಳಿಸಿದರು’ ಎಂದು ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಅನಿಲ್‌ ಕುಮಾರ್ ಹೇಳಿದರು.

‘ಖಾಸಗಿ ಆಸ್ಪತ್ರೆಯವರು ಏಕಾಏಕಿ ಬೆಂಗಳೂರಿನ ರಾಜೀವ್‌ ಗಾಂಧಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ ಕಾರಣಕ್ಕೆ ಯುವತಿಯ ಕುಟುಂಬದವರು ಹೆದರಿ ನಮ್ಮಲ್ಲಿ ಬಂದಿದ್ದರು. ಯುವತಿಯಲ್ಲಿ ಕೊರೊನಾ ಸೋಂಕಿಲ್ಲ. ಯಾರೇ ಆಗಲಿ ಚಿಕಿತ್ಸೆ ನೀಡಲಾಗದಿದ್ದರೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕೆ ವಿನಾ ಈ ರೀತಿ ಯಾರೂ ರೋಗಿಗಳಲ್ಲಿ ಭಯ ಹುಟ್ಟಿಸಬಾರದು’ ಎಂದು ತಿಳಿಸಿದರು.

ಈ ಕುರಿತು ಮಾನಸ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಶಶಿಧರ್ ಅವರನ್ನು ಪ್ರತಿಕ್ರಿಯೆಗಾಗಿ ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.